Advertisement

Railway Department; ಡೇಸಾ ಕ್ಲಿಕ್ಕಿಸಿದ ಚಿತ್ರಗಳಿಗೆ ರೈಲ್ವೇ ಇಲಾಖೆಯ ಮನ್ನಣೆ

11:19 PM Oct 06, 2023 | Team Udayavani |

ಮಂಗಳೂರು: ರೈಲ್ವೇ ಪ್ರಯಾಣದ ಸಂದರ್ಭ ಅನೇಕರು ಪ್ರಕೃತಿ ಸೌಂದರ್ಯ ಸವಿದು ಆನಂದಪಡುತ್ತಾರೆ. ಆದರೆ, ಮಂಗಳೂರಿನ ಉರ್ವದ ವಿದ್ಯಾರ್ಥಿ ರೋನಕ್‌ ಡೇಸಾ ಆನಂದಪಡುವ ಜತೆಗೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ರೈಲಿನ ಸುಂದರಯಾನದ ದೃಶ್ಯಾವಳಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

Advertisement

ಡೇಸಾ ಅವರ ವಿಶೇಷ ಪ್ರಯತ್ನಕ್ಕೆ ರೈಲ್ವೇ ಇಲಾಖೆಯು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದೆ. ಪ್ರಕೃತಿ ಸ್ವರ್ಗದಲ್ಲಿ ಸಂಚರಿಸುವ ರೈಲಿನ ವಿವಿಧ ಭಂಗಿಯ ಚಿತ್ರಗಳನ್ನು ಸೆರೆಹಿಡಿದಿರುವ ರೋನಕ್‌ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇಲಾಖೆಯೊಂದಿಗೆ ಟ್ಯಾಗ್‌ ಮಾಡಿಕೊಂಡಿದ್ದಾರೆ.

ರಮಣೀಯ ತಾಣಗಳಲ್ಲಿ ಪ್ರವಾಸ
ರೈಲು ಏರಿದ ರೋನಕ್‌ ದೇಶದುದ್ದಕ್ಕೂ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಪ್ರಕೃತಿ ಸೊಬಗಿನ ನಡುವಿನ ರೈಲು ಸಂಚಾರ ಇವರ ಕೆಮರಾದಲ್ಲಿ ಸೆರೆಯಾಗಿವೆ. ಹೊಸದಿಲ್ಲಿ, ಕರ್ನಾಟಕ, ತಮಿಳುನಾಡು, ಕೇರಳ ಸಹಿತ ದೇಶದ ರಮಣೀಯ ತಾಣಗಳನ್ನೇ ಆಯ್ದುಕೊಂಡಿರುವ ರೋನಕ್‌ ಸೆರೆಹಿಡಿಯುವ ಫೋಟೋಗಳು ಪ್ರಕೃತಿಯಂಚಿನಿಂದ ರೈಲು ಉದ್ಭವಿಸಿದಂತೆ ಭಾಸವಾಗುತ್ತದೆ. ಪಶ್ಚಿಮಘಟ್ಟ, ದೂದ್‌ ಸಾಗರ್‌, ರೈಲ್ವೇ ಬ್ರಿಡ್ಜ್  ಗಳಲ್ಲಿ ಸಂಚರಿಸುವ ಫೋಟೋಗಳು ಕಣ್ಮನ ಸೆಳೆಯುತ್ತವೆ.

ರೋನಕ್‌ ಪ್ರಸ್ತುತ ಮಂಗಳೂರಿನ ಅಲೋಶಿಯಸ್‌ ಕಾಲೇಜಿನ ತೃತೀಯ ಬಿಬಿಎ ಪದವಿ ವಿದ್ಯಾರ್ಥಿ. ಬಾಲ್ಯದಲ್ಲೇ ರೋನಕ್‌ ರೈಲಿನ ಬಗ್ಗೆ ಆಕರ್ಷಿತರಾಗಿದ್ದರು. ಪಿಯುಸಿಯಲ್ಲಿರುವಾಗ ರೈಲಿನಲ್ಲಿ ಏಕಾಂಗಿ ಪ್ರಯಾಣ ಆರಂಭಿಸಿದ ರೋನಕ್‌ ದೇಶದ ವಿವಿಧ ಭಾಗಗಳಿಗೆ ತೆರಳಿ ರೈಲಿನ ಬಗ್ಗೆ ತಿಳಿದುಕೊಂಡಿದ್ದಾರೆ.

ಬಾಲ್ಯದಿಂದಲೇ ರೈಲಿನ ಬಗ್ಗೆ ಆಸಕ್ತಿ ಇತ್ತು. ನಾನು ತೆಗೆದ ರೈಲಿನ ಫೋಟೋಗಳನ್ನು ಇಲಾಖೆ ಗಮನಿಸಿದೆ. ರೈಲ್ವೇ ಇಲಾಖೆ 12 ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದೆ. ಮುಂದೆ ಮತ್ತಷ್ಟು ಚಿತ್ರದ ನಿರೀಕ್ಷೆಯಲ್ಲಿದ್ದೇನೆ. ರೈಲ್ವೇ ಇಲಾಖೆ ಸೇರಿಕೊಂಡು ಸೇವೆ ಸಲ್ಲಿಸಬೇಕೆಂಬ ಆಸೆಯೂ ಇದೆ.
-ರೋನಕ್‌ ಡೇಸಾ, ವಿದ್ಯಾರ್ಥಿ

Advertisement
Advertisement

Udayavani is now on Telegram. Click here to join our channel and stay updated with the latest news.

Next