ನವದೆಹಲಿ: ಮಾನವರಿಗೆ ಉಪಯುಕ್ತವಾಗುವ ತಂತ್ರಜ್ಞಾನಗಳು ವಿಕೃತ ಮನಸ್ಸುಗಳನ್ನು ತಣಿಸುವ ಸಾಧನಗಳಾದರೆ ಮನುಷ್ಯರಿಗೆ ಕಂಟಕಪ್ರಾಯ ಹೇಗಾಗುತ್ತವೆ ಎಂಬ ಚರ್ಚೆಗೆ ಇದೇ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ‘ಡೀಪ್‌ನ್ಯೂಡ್’ ಆ್ಯಪ್ ನಾಂದಿ ಹಾಡಿದೆ.
ಇದೊಂದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆಧಾರಿತ, ವಿಂಡೋಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳುಳ್ಳ ಕಂಪ್ಯೂಟರ್‌ಗಳಲ್ಲಿ ಬಳಸಲ್ಪಡುವ ಆ್ಯಪ್ ಆಗಿದ್ದು, ಮಹಿಳೆಯರ (ಅಥವಾ ಪುರುಷರ) ಫೋಟೋಗಳನ್ನು ಒಂದೇ ಒಂದು ಕ್ಲಿಕ್‌ನಲ್ಲಿ ಅರೆಬೆತ್ತಲೆ ಆಗಿಸಬಹುದು.
ವಿಕೃತರಿಗೆ ವರದಾನ: ಇದು ಪಡ್ಡೆ ಹುಡುಗರಿಗೆ, ವಿಕೃತ ಕಾಮಿಗಳಿಗೆ ಇದು ಹೇಳಿ ಮಾಡಿಸಿದ ಆ್ಯಪ್ ಆಗಿದೆ ಎಂದು ಈ ಆ್ಯಪ್‌ನ ಸಾಧಕ-ಬಾಧಕಗಳನ್ನು ಪರಿಶೀಲಿಸಿರುವ ‘ವೈಸ್’ ಎಂಬ ಕಂಪನಿ ತಿಳಿಸಿದೆ. ಯಾವುದೇ ವಸ್ತ್ರಧಾರಿ ಮಹಿಳೆಯ ಫೋಟೋವನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡು ಒಂದೇ ಒಂದು ಕ್ಲಿಕ್ ಕ್ಲಿಕ್ಕಿಸಿದರೆ ಸಾಕು ಮಹಿಳೆಯರನ್ನು ಬೆತ್ತಲೆ ಮಾಡಬಹುದಾಗಿದೆ. ಹಾಗಾಗಿ, ಈ ಆ್ಯಪ್‌ನಿಂದ ಹೆಣ್ಣುಮಕ್ಕಳು ಬಲಿಪಶುಗಳಾಗುತ್ತಾರೆ ಎಂದು ‘ವೈಸ್’ ಆತಂಕ ವ್ಯಕ್ತಪಡಿಸಿದೆ.
ಸದ್ಯಕ್ಕೆ ಬಳಕೆಯಿಲ್ಲ: ಆ್ಯಪ್‌ನ ದುಷ್ಪರಿಣಾಮಗಳನ್ನು ಪರಿಗಣಿಸಿ ಸದ್ಯಕ್ಕೆ ಇದನ್ನು ಅಂತರ್ಜಾಲದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ, ಮುಂದೊಂದು ದಿನ ಈ ಆ್ಯಪ್ ಮರಳಿ ಬರಬಹುದು ಎಂಬ ಭೀತಿಯೂ ಸಣ್ಣಗೆ ಆವರಿಸಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲುಗಳಲ್ಲಿ, ಕಾರುಗಳಲ್ಲಿ, ಅಡುಗೆ ಉಪಕರಣಗಳಲ್ಲಿ… ಹೀಗೆ ಎಲ್ಲೆಡೆಯೂ ಬಳಕೆಯಾಗುತ್ತಾ, ಜನಜೀವನಕ್ಕೆ ಹೆಚ್ಚು ಉಪಯುಕ್ತವಾಗುತ್ತಿರುವ ಕೃತಕ ಬುದ್ಧಿಮತ್ತೆಗೆ ಈ ಆ್ಯಪ್ ಕಳಂಕ ಎಂದರೆ ತಪ್ಪಾಗಲಾರದು.