Advertisement

ಆಧುನಿಕ ಶಿಕ್ಷಣದಿಂದ ಕ್ಷೀಣಿಸುತ್ತಿದೆ ಸೃಜನಶೀಲತೆ

09:13 PM Jan 10, 2020 | Team Udayavani |

ಚನ್ನರಾಯಪಟ್ಟಣ: ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ಮಕ್ಕಳಲ್ಲಿನ ಸೃಜನಶೀಲತೆ ಕ್ಷೀಣಿಸುತ್ತಿದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ವಿಷಾದಿಸಿದರು. ಪಟ್ಟಣ ನಾಗೇಶ್‌ ಎಜುಕೇಷನ್‌ನಿಂದ ನಡೆದ ಜ್ಞಾನಸಾಗರ ಪರಂಪರೆ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಆಂಗ್ಲ ಮಾಧ್ಯಮದಲ್ಲಿ ಹಣಕೊಟ್ಟು ಪಡೆಯುವ ಶಿಕ್ಷಣ ಮಗುವಿನಲ್ಲಿ ಸಮಾಜಿಕ ಕಳಕಳಿ ಹುಟ್ಟುಹಾಕುವುದಿಲ್ಲ. ಆದರೆ ಜ್ಞಾನ ಸಾಗರ ಶಾಲೆ ವಿವಿಧ ಆಯಾಮಗಳಲ್ಲಿ ಮಕ್ಕಳನ್ನು ಬೆಳೆಸುತ್ತಿದೆ. ಸಾಂಸ್ಕೃತಿಕವಾಗಿ ಹಾಗೂ ಕೌಶಲಾಭಿವೃದ್ಧಿ ಹುಟ್ಟುಹಾಕುತ್ತಿದೆ ಎಂದು ಬಣ್ಣಿಸಿದರು.

ದೇಶೀಯ ಶಿಕ್ಷಣ ಅಗತ್ಯ: ಪಂಚತಂತ್ರ, ವೇದ-ಉಪನಿಷತ್ತು, ಕನ್ನಡ ಮತ್ತು ಸಂಸ್ಕೃತ ಭಾಷೆ ಒಳಗೊಂಡಿರುವ ಶಿಕ್ಷಣ ಮಕ್ಕಳಿಗೆ ಅಗತ್ಯವಿದೆ. ಶತಮಾನದ ಹಿಂದೆ ಭಾರತದಲ್ಲಿ ನೀಡಲಾಗುತ್ತಿದ್ದ, ಶಿಕ್ಷಣ ಗಮನಿಸಿದ ವಿದೇಶಿಗರು ಭಾರತವನ್ನು ತುಳಿಯಲು ಈ ನೆಲದಲ್ಲಿ ಆಂಗ್ಲ ಭಾಷೆಯ ವಿಷ ಬೀಜ ಬಿತ್ತಿದರು. ಇದಕ್ಕೆ ಮಾರು ಹೋಗಿದ್ದರಿಂದ ನಾವು ವಿಶ್ವಗುರು ಸ್ಥಾನ ಕಳೆದುಕೊಂಡಿದ್ದೇವೆ. ಈಗ ಭಾರತ ವಿಶ್ವಗುರು ಸ್ಥಾನಕ್ಕೇರಲು ಸಕಾಲ. ಇದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಎಲ್ಲರೂ ಮುಂದಾಗಬೇಕು ಎಂದರು.

ಕನಸನ್ನು ನನಸಾಗಿಸುವುದು ಮುಖ್ಯ: ಕೇರಳದ ಕಣ್ಣೂರ್‌ ವಿವಿ ಕನ್ನಡ ವಿಭಾಗದ ನಿರ್ದೇಶಕ ಡಾ.ರಾಜೇಶ ಬೆಜ್ಜಂಗಳ ಮಾತನಾಡಿ, ಕನಸು ಕಾಣುವುದು ಮುಖ್ಯವಲ್ಲ. ಅದನ್ನು ನನಸಾಗುವ ವರೆಗೆ ನಾವು ಶ್ರಮಿಸುವುದು ಮುಖ್ಯ. ಆರ್ಥಿಕತೆಗಿಂತ ಜ್ಞಾನ ಆಧಾರಿತ ಶಿಕ್ಷಣ ಮುಖ್ಯ, ಭಾರತೀಯರಿಗೆ ಶಕ್ತಿ ಸಮಾರ್ಥ್ಯ ಇದೆ. ಆದರೆ ಅವರಲ್ಲಿ ಅವರ ಬಗ್ಗೆ ಕೀಳರಿಮೆಯಿದೆ. ಮೊದಲು ನಾವು ಕೀಳರಿಮೆಯಿಂದ ಹೊರಬರಬೇಕು ಎಂದರು.

ಅನುಷ್ಠಾನ ಮುಖ್ಯ: ಮಕ್ಕಳಲ್ಲಿ ಸೃಜನಶೀಲತೆ ಹುಟ್ಟುಹಾಕುವುದು ಮುಖ್ಯವಲ್ಲ. ಅದನ್ನು ಅನುಷ್ಠಾನಕ್ಕೆ ತರುವುದು ಮುಖ್ಯ. ನಮ್ಮ ಶಕ್ತಿಯ ಬಗ್ಗೆ ನಮಗೆ ನಂಬಿಕೆ ಬರುವಂತೆ ಮಾಡುವ ಶಿಕ್ಷಣ ಅಗತ್ಯವಿದೆ. ಗರುಡಪುರಾಣ ಇಂದಿನ ಆಧುನಿಕತೆ ಬಗ್ಗೆ ಅಂದೇ ತಿಳಿಸಿದೆ. ವಿಮಾನ ಹಾರುವ ಮೊದಲು ವಿಮಾನದ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಇದನ್ನು ನಾವು ತಿಳಿದುಕೊಂಡಿಲ್ಲ. ಗುರುಡ ಪುರಾಣವನ್ನು ವಿದೇಶಿಗರು ಇಟ್ಟುಕೊಂಡು ಪ್ರಯೋಗ ಮಾಡಿದ್ದಾರೆ, ಹೊರತು ಹೊಸತನ್ನು ಕಂಡು ಹಿಡಿದಿಲ್ಲ ಎಂದರು.

Advertisement

ಜ್ಞಾನ ಪ್ರಭಾವ ಶಾಲಿ ಅಸ್ತ್ರ: ಅಧ್ಯಕ್ಷತೆ ವಹಿಸಿ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ.ನಾಗೇಶ ಮಾತನಾಡಿ, ದೇಶದಲ್ಲಿ ಶೇ.40ರಷ್ಟು ಮಂದಿ 18 ವಯೋಮಿತಿಯವರಿದ್ದಾರೆ. ಅವರನ್ನು ಸರಿಯಾಗಿ ಬಳಸಿಕೊಂಡಲ್ಲಿ ಭಾರತ ವಿಶ್ವಗುರು ಸ್ಥಾನಕ್ಕೆ ಏರಲಿದೆ. ಜನಸಂಖ್ಯೆ ಸ್ಫೋಟವಲ್ಲ. ಮಾನವ ಸಂಪನ್ಮೂಲ ಎಂಬುದು ತಿಳಿದು ಈ ಸಂಪನ್ಮೂಲ ಅರಿತು ಶಕ್ತಿಯಾಗಿ ಪರಿವರ್ತಿಸಬೇಕಿದೆ. ಕೃಷಿಯನ್ನು ಮರೆಯಬಾರದು. ಮನೆಗಳಲ್ಲಿ ನಮ್ಮ ಪದ್ಧತಿ ತಿಳಿಸಬೇಕಿದೆ. ಹಣಕಿಂತ ಆಹಾರಕ್ಕೆ ಮಹತ್ವ ನೀಡುವುದನ್ನು ಕಲಿಸಬೇಕಿದೆ ಎಂದು ಹೇಳಿದರು.

ನಾಗೇಶ್‌ ಎಜುಕೇಷನ್‌ ಟ್ರಸ್ಟ್‌ ಸಿಇಒ ಡಾ.ಭಾರತಿ, ಶಿಕ್ಷಣಾಧಿಕಾರಿ ಸುಜಾಫಿಲಾ, ಪ್ರಾಂಶುಪಾಲೆ ವಾಣಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಜವರಯ್ಯ, ಡಿಡಿಪಿಐ ಪ್ರಕಾಶ, ಬಿಇಒ ಸೋಮನಾಥ, ಚಮ್ಮಾರ ಸಂಘದ ರಾಜ್ಯಾಧ್ಯಕ್ಷ ಕೃಷ್ಣ, ಟ್ರಸ್ಟ್‌ನ ನಿರ್ದೇಶಕ ರಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಸೃಜನಶೀಲತೆ ನಾಶ ಮಾಡಿದರು: ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರು ಸೃಜನಶೀಲರಾಗಿದ್ದರು. ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಹಂಬಲಿಸುತ್ತಿದ್ದರು. ಇದನ್ನು ಅರಿತ ಪಾಶ್ಚಿಮಾತ್ಯರು, ಇಲ್ಲಿನ ಶಿಕ್ಷಣವನ್ನು ದಾರಿ ತಪ್ಪಿಸಿದರೆ ಮಾತ್ರ, ಇವರನ್ನು ಆಳಲು ಸಾಧ್ಯ ಎಂಬುದನ್ನು ಅರಿತು ಆಂಗ್ಲ ಭಾಷೆ ಕಲಿಸಿದರು. ಅನೇಕ ರಾಜ್ಯಗಳಲ್ಲಿ ಮಾತೃಭಾಷೆ ತುಳಿಯುವ ಪ್ರಯತ್ನ ಮಾಡಿದ್ದರ ಫ‌ಲವಾಗಿ, ಇಂದು ಶಿಕ್ಷಣ ಮಕ್ಕಳಲ್ಲಿನ ಸೃಜನಶೀಲತೆಯನ್ನು ಹಾಳು ಮಾಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಮಾತೃಭಾಷೆ ಶಿಕ್ಷಣ ಅಗತ್ಯ: ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡದರೆ ಕನ್ನಡ ಭಾಷೆ ಉಳಿಯುವುದರೊಂದಿಗೆ ಮಕ್ಕಳಲ್ಲಿ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ. ಇದು ತಿಳಿದಿದ್ದೂ ನಾವು ತಪ್ಪು ಮಾಡುತ್ತಿದ್ದೇವೆ. ಇಂಗ್ಲೀಷ್‌ ಪಠ್ಯ ಪುಸ್ತಕವನ್ನು ನಂಬುವುದು ಬೇಡ. ಅದರಲ್ಲಿ ಬದುಕು ನಡೆಸುವ ಬಗ್ಗೆ ಶಿಕ್ಷಣವಿಲ್ಲ. ಸಮಾಜಿಕ ಕಳಕಳಿ ಇಲ್ಲ. ಮೊದಲಾಗಿ ಮನುಷ್ಯತ್ವ ತಿಳಿಸುವ ಒಂದೂ ಗ್ರಂಥವಿಲ್ಲ. ಅಂತಹ ಶಿಕ್ಷಣದಿಂದ ದೂರ ಉಳಿಯಬೇಕಿದೆ ಎಂದರು.

ಕೀಳರಿಮೆಯಿಂದ ಹೊರಬನ್ನಿ: ಆಂಗ್ಲ ಭಾಷೆಯಲ್ಲಿ ಮಗುವಿಗೆ ಶಿಕ್ಷಣ ಕೊಡಿಸದಿದ್ದರೆ ಮಗು ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳುವುದಿಲ್ಲ ಎಂದು ಕೀಳರಿಮೆ ಅನೇಕ ಮಂದಿಯ ಮನಸ್ಸುಗಳನ್ನು ಹೊಕ್ಕಿದೆ. ಇದರಿಂದ ಹೊರಬರಬೇಕು. ಸಾಧಕರೆಲ್ಲ ಗ್ರಾಮೀಣ ಭಾಗದವರು ಹಾಗೂ ಕನ್ನಡ, ಸಂಸ್ಕೃತ ಭಾಷೆಯಲ್ಲಿ ಶಿಕ್ಷಣ ಕಲಿಯುತ್ತಿರುವವರು. ಅಲ್ಲದೆ ವಿದೇಶದಲ್ಲಿ ಅನೇಕ ಕಂಪನಿಯ ಕಾರ್ಯನಿರ್ವಾಹಕಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರವವರು ಭಾರತೀಯರೇ ಆಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next