ಬೆಂಗಳೂರು: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚುವ ಉದ್ದೇಶದಿಂದ ನೆರೆ ರಾಜ್ಯಕ್ಕೆ ಡೆಲಿವರಿ ಮಾಡಲು ಮಾಲೀಕ ಕೊಟ್ಟ ಚಿನ್ನಾಭರಣವನ್ನು ಗನ್ ತೋರಿಸಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ಸಿನಿಮಾ ಕಥೆ ಸೃಷ್ಟಿಸಿದ ಮಾರಾಟ ಪ್ರತಿನಿಧಿ ಹಾಗೂ ಆತನ ಸಹಚರ ಹಲಸೂರು ಗೇಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಜಸ್ಥಾನ ಮೂಲದ ಲಾಲ್‌ಸಿಂಗ್(23) ಮತ್ತು ಆತನ ಸಹಚರ ರಾಜ್ ಪಾಲ್(24) ಬಂಧಿತರು. ಆರೋಪಿಗಳಿಂದ 75 ಲಕ್ಷ ರೂ. ಮೌಲ್ಯದ 1 ಕೆ.ಜಿ. 262 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯ ಲಾಗಿದೆ. ಅಭಿಷೇಕ್ ಮತ್ತು ಪ್ರಕಾಶ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರ್ತರಪೇಟೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಅಭಿಷೇಕ್ ಜೈನ್ ಬಳಿ ಲಾಲ್‌ಸಿಂಗ್ ಮಾರಾಟ ಪ್ರತಿನಿಧಿಯಾಗಿದ್ದು, ಮಾಲಿಕರ ವಿಶ್ವಾಸ ಗಳಿಸಿದ್ದ. ಹೀಗಾಗಿ ಮಾಲಿಕ ಅಭಿಷೇಕ್ ಜೈನ್, ಆಂಧ್ರಪ್ರದೇಶದ ನೆಲ್ಲೂರಿನ ಮುಖೇಶ್ ಮತ್ತು ಶುಭಂ ಗೋಲ್ಡ್ ಜುವೆಲ್ಲರಿ ಅಂಗಡಿಗೆ ಡೆಲಿವರಿ ನೀಡುವಂತೆ ಲಾಲ್‌ಸಿಂಗ್ 1 ಕೆ.ಜಿ. 262 ಗ್ರಾಂ ಚಿನ್ನಾಭರಣ ಕೊಟ್ಟಿದ್ದ. ಆದರೆ, ಆರೋಪಿ ಮಾರ್ಗ ಮಧ್ಯೆಯೇ ಮಾಲಿಕನಿಗೆ ಫೋನ್ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗನ್ ತೋರಿಸಿ ದರೋಡೆ ಕಥೆ! ಚಿನ್ನಾಭರಣ ಸಮೇತ ನೆಲ್ಲೂರಿನ ಕಾಳಹಸ್ತಿಗೆ ಹೋದ ಲಾಲ್ ಸಿಂಗ್, ಅಲ್ಲಿಂದಲೇ ಮಾಲಿಕ ಅಭಿಷೇಖ್ ಜೈನ್‌ಗೆ ಕರೆ ಮಾಡಿ, ಯಾರೋ ದುಷ್ಕರ್ಮಿಗಳು ತನ್ನ ಹಣೆಗೆ ಗನ್ ಇಟ್ಟು, ಕೈಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣದ ಬ್ಯಾಗ್ ಕಿತ್ತುಕೊಂಡು ಹೋಗಿದ್ದರು ಎಂದು ಹೇಳಿ, ಫೋನ್ ಸ್ವಿಚ್ಡ್ ಆಫ್ ಮಾಡಿದ್ದ. ಆ ನಂತರ ಅಭಿಷೇಕ್ ಜೈನ್ ನಿರಂತರವಾಗಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾ ಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಖುದ್ದು ಕಾಳಹಸ್ತಿಗೆ ತೆರಳಿ, ಲಾಲ್‌ಸಿಂಗ್‌ನನ್ನು ಹುಡುಕಿ ಬೆಂಗಳೂರಿಗೆ ಕರೆತಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ಹಲಸೂರು ಗೇಟ್ ಠಾಣೆ ಇನ್‌ಸ್ಪೆಕ್ಟರ್ ಹನುಮಂತ ಭಜಂತ್ರಿ ನೇತೃತ್ವದ ತಂಡ ಲಾಲ್‌ಸಿಂಗ್‌ನನ್ನು ವಿಚಾರಣೆ ನಡೆಸಿ ಬಂಧಿಸಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.. ಶೇಖರ್, ಹಲಸೂರು ಗೇಟ್ ಎಸಿಪಿ ಶಿವಾನಂದ ಚಲವಾದಿ ಇದ್ದರು.
ನಗರದಲ್ಲೇ ಬ್ಯಾಗ್ ಹಸ್ತಾಂತರ: ಮಾಲಿಕ ತನ್ನನ್ನೇ ಆಂಧ್ರಪ್ರದೇಶಕ್ಕೆ ಕಳುಹಿಸುತ್ತಾನೆ ಎಂಬುದು ಖಚಿತವಾಗುತ್ತಿದ್ದಂತೆ, ರಾಜ್‌ಪಾಲ್ ಹಾಗೂ ಇತರೆ ಆರೋಪಿಗಳನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾನೆ. ಬಳಿಕ ಚಿನ್ನಾಭರಣ ತುಂಬಿದ್ದ ಬ್ಯಾಗ್ ಅನ್ನು ಬೆಂಗಳೂರಿನಲ್ಲೇ ಸಹಚರರಿಗೆ ಹಸ್ತಾಂತರಿಸಿ, ಅವರೊಂದಿಗೆ ತಾನೂ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಬಳಿಕ ನೆಲ್ಲೂರಿನ ಕಾಳಹಸ್ತಿಗೆ ಹೋಗಿ ಅಲ್ಲಿಂದ ಅಂಗಡಿ ಮಾಲಿಕನಿಗೆ ಕರೆ ಮಾಡಿ ದರೋಡೆ ಕಥೆ ಹೇಳಿದ್ದ. ಅಲ್ಲದೆ, ದರೋಡೆ ನಿಜವೆಂದು ನಂಬಿಸಲು ಬ್ಲೇಡ್‌ನಿಂದ ತನ್ನ ಎರಡು ಕೈಗಳನ್ನು ಕೊಯ್ದುಕೊಂಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.