Advertisement

Karnataka ಕೃತಕ ವಿದ್ಯುತ್‌ ಅಭಾವ ಸೃಷ್ಟಿ: ಕುಮಾರಸ್ವಾಮಿ

11:40 PM Oct 21, 2023 | Team Udayavani |

ಬೆಂಗಳೂರು: ವಿವಿಧ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೆ ಹೇರಳ ಅವಕಾಶವಿದ್ದರೂ ಖಾಸಗಿ ಕಂಪೆನಿಗಳಿಂದ ವಿದ್ಯುತ್‌ ಖರೀದಿಸಲು ರಾಜ್ಯದಲ್ಲಿ ಕೃತಕ ವಿದ್ಯುತ್‌ ಅಭಾವ ಸೃಷ್ಟಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಜೆಡಿಎಸ್‌ ರಾಜ್ಯ ಕಚೇರಿ ಜೆಪಿ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ ಹಂಚುವ ಉದ್ದೇಶದಿಂದ ಖಾಸಗಿ ಕಂಪೆನಿಗಳಿಂದ ವಿದ್ಯುತ್‌ ಖರೀದಿಸಿ ಕಮಿಷನ್‌ ಸಂಗ್ರಹಿಸಿ ಜೇಬು ತುಂಬಿಸಿ ಕೊಳ್ಳಲು ರಾಜ್ಯ ಸರಕಾರ ಹುನ್ನಾರ ನಡೆಸಿದೆ ಎಂದು ದೂರಿದರು.

ರಾಜ್ಯದಲ್ಲಿ ಮಳೆಯ ಅಭಾವದಿಂದ ಜಲ ವಿದ್ಯುತ್‌ ಉತ್ಪಾದನೆ ಕಡಿಮೆ ಯಾಗಿದೆ ಎಂಬುದು ನಿಜ. ಆದರೆ ಇತರ ಮೂಲಗಳಿಂದ ಸಾಕಷ್ಟು ವಿದ್ಯುತ್‌ ಉತ್ಪಾದನೆ ಮಾಡಬಹುದು. ಅಧಿಕಾರ ಬಂದಾಗಿನಿಂದಲೇ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಅಗತ್ಯ ವಾದಷ್ಟು ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳಬಹುದಿತ್ತು. ಖರೀದಿ ವ್ಯವಹಾರ ನಡೆಸಿ ಕಮಿಷನ್‌ ಹೊಡೆಯುವ ದುರುದ್ದೇಶದಿಂದ ವಿದ್ಯುತ್‌ ಉತ್ಪಾದನೆಯನ್ನು ಉಪೇಕ್ಷೆ ಮಾಡಲಾಗಿದೆ ಎಂದು ಆರೋಪಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ 16,867.63 ಮೆಗಾವ್ಯಾಟ್‌ ವಿದ್ಯುತ್‌ ಅನ್ನು ಇವತ್ತೂ ಉತ್ಪಾದಿಸಬಹುದು. ಜಲಾ ಶಯಗಳಲ್ಲಿ ನಿರೀಕ್ಷಿತ ನೀರು ಸಂಗ್ರಹ ಇಲ್ಲದಿರು ವುದರಿಂದ ಮೊದಲಿಗಿಂತ ಅರ್ಧದಷ್ಟು ಜಲ ವಿದ್ಯುತ್ತನ್ನೇ ಮಾಡಲಿ. ಆದರೆ, ಇವರು ಉತ್ಪಾದನೆ ಮಾಡುತ್ತಿಲ್ಲ, ಮಾಡುವುದೂ ಇಲ್ಲ. ಇಂತಹ ಬರಗಾಲದ ನಡುವೆಯೂ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಗ್ಯಾರಂಟಿಗಳ ಜಪ ಮಾಡಿಕೊಂಡು ವಿದ್ಯುತ್‌ ಉತ್ಪಾದನೆಯನ್ನು ನಿರ್ಲಕ್ಷಿಸಿ ದರು ಎಂದು ವಾಗ್ಧಾಳಿ ನಡೆಸಿದರು.

ಸಿದ್ದರಾಮಯ್ಯ ಇಂಧನ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸಿ ರಾಜ್ಯದಲ್ಲಿ 15,000 ಮೆಗಾವ್ಯಾಟ್‌ ಕೊರತೆ ಇದೆ, ಖರೀದಿಸುತ್ತೇವೆ ಎಂದು ಹೇಳಿದ್ದಾರೆ. ಐದು ತಿಂಗಳಿಂದ ಸುಮ್ಮನೆ ಇದ್ದವರು ಈಗ ಹಿಂದಿನ ಸರಕಾರದ ಪಾಪದ ಫ‌ಲ ಎನ್ನುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವಾಗ ವಿದ್ಯುತ್‌ ಇಲಾಖೆಗೆ ಸಂಬಂಧಿಸಿದ ಒಂದಷ್ಟು ಮಾಹಿತಿ ಕೊಡಲು ಮುಂದಾಗಿದ್ದೆ. ಆಗ ಸರಕಾರದವರು ಮಾತನಾಡಲು ಅವಕಾಶ ಕೊಡಲಿಲ್ಲ. ಅವತ್ತೇ ನಾನು ಸರಕಾರಕ್ಕೆ ವಿದ್ಯುತ್‌ ಕೊರತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ಮಾಡಿದ್ದೆ ಎಂದು ಹೇಳಿದರು.

Advertisement

ಪಾಕಿಸ್ಥಾನವನ್ನು ಬೆಂಬಲಿಸಲು ಹೋಗಿದ್ರಾ?
ಇಡೀ ರಾಜ ಬರಗಾಲ ಎದುರಿಸುತ್ತಿರುವಾಗ ಸಿಎಂ, ಡಿಸಿಎಂ ತಮ್ಮ ಸಚಿವರು, ಅಧಿಕಾರಿಗಳ ಪಟಾಲಂ ಕಟ್ಟಿಕೊಂಡು ಏಳೆಂಟು ಗಂಟೆ ಕ್ರಿಕೆಟ್‌ ಪಂದ್ಯ ನೋಡಲು ಹೋಗಿದ್ದಾರೆ. ಅಲ್ಲಿ ಇವರೆಲ್ಲ ಮಜಾ ಮಾಡಿಕೊಂಡು ಕೂತಿದ್ದರು. ಇವರು ಯಾವ ದೇಶಕ್ಕೆ ಬೆಂಬಲ ನೀಡಲು ಹೋಗಿದ್ದರು? ಆಸ್ಟ್ರೇಲಿಯಕ್ಕಾ ಅಥವಾ ಪಾಕಿಸ್ಥಾನಕ್ಕಾ? ಭಾರತದ ತಂಡ ಆಡುತ್ತಿದ್ದರೆ, ನಮ್ಮ ತಂಡಕ್ಕೆ ಬೆಂಬಲ ಕೊಡಲು ಹೋಗಿದ್ದಾರೆ ಎಂದು ಭಾವಿಸ ಬಹುದಿತ್ತು. ಕ್ರೀಡೆಗೆ ಪ್ರೋತ್ಸಾಹ, ಬೆಂಬಲ ಕೊಡಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ರಾಜ್ಯದ ಸಂಕಷ್ಟದಲ್ಲಿರುವಾಗ ಇದು ಸರಿಯೇ ಎಂದು ಎಚ್‌ಡಿಕೆ ಪ್ರಶ್ನಿಸಿದರು.

ಮುಖ್ಯಮಂತ್ರಿ ತಿರುಗೇಟು
ಬೆಂಗಳೂರು: ವಿದ್ಯುತ್‌ ಉತ್ಪಾದನೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅನಿವಾರ್ಯವಾಗಿ ತಾತ್ಕಾಲಿಕ ಒಡಂಬಡಿಕೆ ಮೇರೆಗೆ ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿಗೆ ನಾವು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದಿದೆ. ಇದರಿಂದಾಗಿ ಜಲವಿದ್ಯುತ್‌ ಉತ್ಪಾದಕ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್‌ ಉತ್ಪಾದಿಸಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.

ವಿದ್ಯುತ್‌ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಪರಿಣಾಮಕಾರಿ ಬಳಕೆ ಮೂಲಕ ವಿದ್ಯುತ್‌ ಉತ್ಪಾದನೆ ಹೆಚ್ಚಿಸುವ ಕಡೆಗೂ ಗಮನ ಹರಿಸಿದ್ದೇವೆ. ನಾವು ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ಕುಳಿತು ಸರಕಾರ ನಡೆಸುತ್ತಿಲ್ಲ. ಜನರ ನಡುವೆಯೇ ಇದ್ದು ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ ಎಂದು ಕುಮಾರಸ್ವಾಮಿ ಟೀಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next