ಬೆಂಗಳೂರು: ಪ.ಜಾತಿ ಹಾಗೂ ಪ.ಪಂಗಡಗಳಿಗೆ ಹಂಚಿಕೆಯಾದ ಜಮೀನನ್ನು ಸರಕಾರದ ಅನುಮತಿ ಪಡೆದು ಪರಭಾರೆ ಮಾಡುವ ಸಂದರ್ಭದಲ್ಲೂ ಲೋಪದೋಷಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮೇಲ್ಮನೆಯಲ್ಲಿ ಶುಕ್ರವಾರ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಗಳ ಮಸೂದೆ-2023 (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) (ತಿದ್ದುಪಡಿ) ಚರ್ಚೆ ವೇಳೆ ಮಾತನಾಡಿದ ಅವರು, ಭೂಮಿಯನ್ನು ಸರಕಾರದ ಅನುಮತಿ ಪಡೆದು ಮಾರಾಟ ಮಾಡುವ ಸಂದರ್ಭದಲ್ಲೂ ಅನೇಕ ನ್ಯೂನತೆ ಇರು ವುದು ಕಂಡುಬಂದಿದೆ. ವಾಸ್ತವಕ್ಕೆ ದೂರವಿರುವ ಅಂಶಗಳನ್ನು ಉಲ್ಲೇಖಿಸಿ ಅನುಮತಿ ಪಡೆದುಕೊಳ್ಳುವ ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದರು.
ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಹಂಚಿಕೆಯಾದ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳೂ ಬಳಸಲು ಮುಕ್ತ ಅವಕಾಶವಿದೆ. ಈ ಯೋಜನೆಯಡಿಯಲ್ಲಿ ಭೂಮಿ ಎಂದು ಉಲ್ಲೇಖಿಸಲಾಗಿದೆ ಹೊರತು ಕೃಷಿ ಭೂಮಿ ಎಂದಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯ ಮರಿತಿಬ್ಬೇಗೌಡ, 15 ವರ್ಷಗಳ ಬಳಿಕ ಭೂಮಿ ಪರಭಾರೆ ಮಾಡಲು ಅವಕಾಶ ಇದೆ. ಆದರೆ ಸರಕಾರದ ಅನುಮತಿ ಅಗತ್ಯ. ಈ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಕಡಿವಾಣ ಹಾಕಲು ನಿಯಮಗಳನ್ನು ರೂಪಿಸಬೇಕು ಎಂದರು.
ಚರ್ಚೆಯ ಬಳಿಕ ಅಂಗೀಕೃತವಾದ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಮಸೂದೆ -2023 ಮೇಲ್ಮನೆಯಲ್ಲೂ ಅಂಗೀಕಾರಗೊಂಡಿತು.