Advertisement

ಉದ್ಯೋಗ ಖಾತ್ರಿಯಲ್ಲಿ ಕನಿಷ್ಠ 80 ಲಕ್ಷ ಮಾನವ ದಿನ ಸೃಜಿಸಿ

04:33 PM Nov 24, 2018 | |

ಚಿತ್ರದುರ್ಗ: ಆರು ತಾಲೂಕುಗಳೊಂದಿಗೆ ಅತಿ ಹೆಚ್ಚು ಬಡವರು, ಎಸ್ಸಿ, ಎಸ್ಟಿ ವರ್ಗಗಳೇ ಹೆಚ್ಚಿರುವ ಜಿಲ್ಲೆಯಲ್ಲಿ 58 ಲಕ್ಷ ಮಾನವ ದಿನಗಳ ಗುರಿ ಹೊಂದಿರುವುದು ಯಾವ ನ್ಯಾಯ. ಕನಿಷ್ಠ 80 ಲಕ್ಷ ಮಾನವ ದಿನಗಳನ್ನಾದರೂ ಸೃಜಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣಭೈರೇಗೌಡ ಹೇಳಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟರಿಗೆ ನಾವು ನ್ಯಾಯ ಕೊಡುತ್ತೇವೆಯಾ, ಪರಿಶಿಷ್ಟರ ಹೆಸರಿನಲ್ಲಿ ರಾಜಕೀಯ ಮಾಡುತ್ತೇವೆ. ಜಿಲ್ಲೆಯಲ್ಲಿ ಕೆಳಗಿನಿಂದ ಮೇಲಿನ ತನಕ ಎಲ್ಲ ಹಂತದಲ್ಲೂ ಅವರೇ ಇದ್ದಾರೆ. ಹಾಗಾದರೆ ಏಕೆ ಅವರಿಗೆ ನಾವು ನ್ಯಾಯ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸದಸ್ಯರಿಗೆ, ನಾಯಕರಿಗೆ, ಇಂಜಿನಿಯರ್‌ಗಳಿಗೆ ಸಿಸಿ ರಸ್ತೆ, ಬಾಕ್ಸ್‌ ಚರಂಡಿ ಮಾತ್ರ ಬೇಕು. ಮಾತೆತ್ತಿದರೆ ಅನುದಾನ ಕೊಡಿ ಎನ್ನುತ್ತೀರಿ. ಇರುವ ಅನುದಾನ ಏಕೆ ಖರ್ಚು ಮಾಡುತ್ತಿಲ್ಲ. ನಿಜವಾಗಿ ಹೊಟ್ಟೆ ಹಸಿವಿದೆಯಾ, ನರೇಗಾದಲ್ಲಿ ನಿಮ್ಮ ಹಸಿವು ತೋರಿಸಿ, ಇಲ್ಲಿ ಎಷ್ಟು ಮಾಡಿದರೂ ಅನುದಾನಕ್ಕೆ ಕೊರತೆಯಿಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ನಾಲ್ಕು ತಾಲೂಕುಗಳೊಂದಿಗೆ ಶ್ರೀಮಂತರನ್ನೇ ಹೊಂದಿರುವ ರಾಮನಗರ ಜಿಲ್ಲೆಯಲ್ಲಿ ನರೇಗಾ ಯೋಜನೆ ಅಡಿ 64 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 25 ಸಾವಿರ ದನಗಳ ಕೊಟ್ಟಿಗೆ ನಿರ್ಮಿಸಿಕೊಡಲಾಗಿದೆ. ಅಲ್ಲಿನ ಎಲ್ಲ ಜನಪ್ರತಿನಿಧಿಗಳು ಯಾವುದೇ ಅನುದಾನ ಕೇಳುತ್ತಿಲ್ಲ. ನರೇಗಾದಲ್ಲೇ ಎಲ್ಲವನ್ನು ಮಾಡುತ್ತಿದ್ದಾರೆ ಎಂದರು. 

ಉದ್ಯೋಗ ಖಾತ್ರಿಯಡಿ ತೋಟಗಾರಿಕೆ, ರೇಷ್ಮೆ, ದನಗಳ ಕೊಟ್ಟಿಗೆಯನ್ನು ರೈತರಿಗೆ ನೀಡಿ. ಪ್ರತಿಯೊಂದು ಹಳ್ಳಿಯಲ್ಲೂ ಹಳ್ಳಗಳಿವೆ, ಕೆರೆ, ಕಟ್ಟೆ, ಗೋಕಟ್ಟೆ, ಚೆಕ್‌ ಡ್ಯಾಂಗಳಿದ್ದು ಹೂಳೆತ್ತಬೇಕು. ಆದರೆ, ಅಂತಹ ಕಾಮಗಾರಿ ಯಾಕೆ ಮಾಡುತ್ತಿಲ್ಲ ಎಂದು ಜಿಪಂ ಅಧಿಕಾರಿಗಳನ್ನು ಪ್ರಶ್ನಿಸಿದರು.

Advertisement

ಬೆಳಗ್ಗೆಯಿಂದ ಜಿಲ್ಲೆಯ ಸುಮಾರು ಹತ್ತಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಪ್ರವಾಸ ಮಾಡಿ ರೈತರ ಅಳಲು ಕೇಳಿದ್ದೇನೆ. ಆದರೆ, ಅನುಕೂಲಸ್ಥರ ಸಮಸ್ಯೆ ಹೇಳುತ್ತಿದ್ದಾರೆಯೇ ಹೊರೆತು ನೊಂದವರ, ಬಡವರ, ಪರಿಶಿಷ್ಟರ ಸಮಸ್ಯೆಗಳನ್ನು ಯಾರೂ ಹೇಳುತ್ತಿಲ್ಲ ಎಂದರು. 

ಜಟಾಪಟಿ: ಒಂದು ಹಂತದಲ್ಲಿ ನರೇಗಾ ಯೋಜನೆಯ ಕಾಮಗಾರಿಗೆ ಮರಳು ಸಿಗುತ್ತಿಲ್ಲ. ಹಾಗಾಗಿ ಇಲ್ಲಿ ನರೇಗಾದಲ್ಲಿ ಸಾಧನೆ ಹೇಳಿಕೊಳ್ಳುವಷ್ಟಾಗುತ್ತಿಲ್ಲ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಹೇಳುತ್ತಿದ್ದಂತೆ, ಮರಳಿನ ಸಮಸ್ಯೆ ಇದೆ. ಅದನ್ನೇ ನೆಪ ಹೇಳುವುದು ಬೇಡ, ಮರಳು ಉಪಯೋಗ ಮಾಡದೇ ನರೇಗಾದಲ್ಲಿ ಸಾಕಷ್ಟು ಕಾಮಗಾರಿ ಮಾಡಲು ಅವಕಾಶವಿದೆ. ನಿಮ್ಮೂರಿನ ಕೆರೆ, ಕಟ್ಟೆ, ಹಳ್ಳಗಳ ಹೂಳೆತ್ತಿಸಿ, ರೈತರಿಗೆ ಬದು ನಿರ್ಮಿಸಿಕೊಡಿ ಎಂದು ಸಚಿವರು ಶಾಸಕರಿಗೆ ಹೇಳುತ್ತಿದ್ದಂತೆ ಇಬ್ಬರ ಮಧ್ಯ ಜಟಾಪಟಿ ನಡೆಯಿತು.

ಹೊಸದುರ್ಗ ಇಒ ನರೇಗಾದಲ್ಲಿ ನಿರೀಕ್ಷಿತ ಸಾಧನೆ ಮಾಡದಿರುವ ಬಗ್ಗೆ ಸಚಿವರು ಪ್ರಶ್ನಿಸಿದಾಗ ಇಒ ನೆಪದ ಉತ್ತರ ಹೇಳಲು ಮುಂದಾಗುತ್ತಿದ್ದಂತೆ ಇಲ್ಲಿ ನೆಪ ಹೇಳಬೇಡಿ, ಇಲ್ಲವಾದರೂ ಕೂತು ಬಿಡಿ ಎಂದರು.

 ಕುಡಿಯುವ ನೀರಿಗಾಗಿ ಬಂದಿದ್ದ 123 ಕೋಟಿ ರೂ. ಅನುದಾನದಲ್ಲಿ ಮುಂದುವರಿದ ಕಾಮಗಾರಿಗಳಿಗೆ 78 ಕೋಟಿ ರೂ. ಬಳಕೆ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಒಮ್ಮೆ ಮುಂದುವರಿದ ಕಾಮಗಾರಿಗಳ ಬಿಲ್‌ ಪೂರ್ಣ ಮಾಡಿಬಿಡಿ. ಇನ್ಮುಂದೆ 95ರಷ್ಟು ಹೊಸ ಕಾಮಗಾರಿಗಳು, ಶೇ.5 ರಷ್ಟು ಮಾತ್ರ ಮುಂದುವರಿದ ಕಾಮಗಾರಿಗಳಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ, ಉಪಾಧ್ಯಕ್ಷ ಸುಶೀಲಮ್ಮ, ಎಲ್‌.ಕೆ. ಅತೀಕ್‌, ಜಿಪಂ ಸಿಇಒ ರವೀಂದ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next