Advertisement

ಬೆಳಗಾವಿ: ದೇಸಿ ತಂತ್ರಜ್ಞಾನದಿಂದ ದೇಶ ಬಲಿಷ್ಠ- ಪ್ರೊ| ವಿದ್ಯಾಶಂಕರ

05:21 PM Feb 29, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ರಾಷ್ಟ್ರದ ಸರ್ವತೋಮುಖ ಮತ್ತು ಸ್ವಾವಲಂಬಿ ರಾಷ್ಟ್ರದ ಅಭಿವೃದ್ಧಿಗಾಗಿ ದೇಸಿಯ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ದೇಸಿ ತಂತ್ರಜ್ಞಾನವು ನಮ್ಮ ರಾಷ್ಟ್ರದಲ್ಲಿರುವ ಜ್ಞಾನಶಕ್ತಿಯನ್ನು ಜಗತ್ತಿಗೆ ತೋರುವುದಲ್ಲದೆ ಎಷ್ಟೋ ಅಸಂಖ್ಯಾತ ಉದ್ಯೋಗಗಳನ್ನು ಹುಟ್ಟು ಹಾಕಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಶಕ್ತಿ ದೇಸಿಯ ಉತ್ಪನ್ನ ಹಾಗೂ ತಂತ್ರಜ್ಞಾನಗಳಲ್ಲಿದೆ ಎಂದು ಕುಲಪತಿ ಪ್ರೊ. ವಿದ್ಯಾಶಂಕರ ಎಸ್‌. ಹೇಳಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಬುಧವಾರ ನಡೆದ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಸಿಯ ತಂತ್ರಜ್ಞಾನಗಳು ಸ್ಥಳೀಯ ಸಮಸ್ಯೆಗಳ ಮೇಲೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಗಳಾಗಿರುವುದರಿಂದ ಸಾಮಾಜಿಕ ಸಮಸ್ಯೆಗಳಿಗೆ ನಾವೇ ಪರಿಹಾರ ಕೊಂಡುಕೊಳ್ಳುವುದರ ಜೊತೆಗೆ ಬೇರೆ ರಾಷ್ಟ್ರಗಳ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತ ತಂತ್ರಜ್ಞಾನ ಆಮದು ಕಡಿಮೆಯಾಗಿ ಆರ್ಥಿಕ ಹೊರೆ ಮತ್ತು ಹಣದುಬ್ಬರ ಕಡಿಮೆಯಾಗುತ್ತದೆ. ದೇಸಿ ತಂತಜ್ಞಾನವನ್ನು ಬೇರೆ ರಾಷ್ಟ್ರಕ್ಕೆ ರಫ್ತು ಮಾಡಬಹುದು. ಇದರಿಂದ ನಮ್ಮ ಭಾರತ ಬಲಿಷ್ಠ ರಾಷ್ಟ್ರವಾಗುತ್ತದೆ ಎಂದು ಹೇಳಿದರು.

10 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು ಜಾಗತಿವಾಗಿ ಸಂಶೋಧನೆ ಲೇಖನಗಳ ಪ್ರಕಟಣೆಯಲ್ಲಿ
ಮೊದಲ 5ರಲ್ಲಿ ಭಾರತ ಸ್ಥಾನವನ್ನು ಪಡೆದಿದೆ. ಜತೆಗೆ 2015ರಲ್ಲಿ ಜಾಗತಿಕ ನಾವಿನ್ಯತೆ ಕ್ರಮಾಂಕ (ಗ್ಲೋಬಲ್‌ ಇನ್ನೋವೇಶನ್‌ ಇಂಡೆಕ್ಸ್‌) ದಲ್ಲಿ 81ನೇ ಸ್ಥಾನದಿಂದ 40ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಷ್ಟೇ ಅಲ್ಲದೆ ಪೇಟೆಂಟ್‌ ನೋಂದಣಿಯಲ್ಲಿ ಕಳೆದ ಎರಡು ದಶಕದಲ್ಲಿ ಅತಿ ಹೆಚ್ಚು ಅಂದರೆ 90,000 ಪೇಟೆಂಟ್‌ ನೋಂದಣಿಯನ್ನು ಮಾಡಿದ್ದು ರಾಷ್ಟ್ರದ ಸಂಶೋಧನಾ ಮತ್ತು ನಾವಿನ್ಯತಾ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಇವತ್ತಿನ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬೇರೆ ಯಾವುದೇ ರಾಷ್ಟ್ರದ ಕಂಪನಿಗಳಿಗೆ ಕೇವಲ ಸೇವೆ ನೀಡಲು ಬಳಸುವ ಬದಲಾಗಿ ರಾಷ್ಟ್ರದಲ್ಲಿರುವ ಸಂಶೋಧನಾ ಮತ್ತು ನಾವಿನ್ಯತಾ ಪೂರಕ ವಾತಾವರಣವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಸುತ್ತಮುತ್ತಲಿನ ಸಮಾಜವನ್ನು ಅಧ್ಯಯನ ಮಾಡಿ, ಸಮಸ್ಯೆಗಳನ್ನು ವಿಶ್ಲೇಷಿಸಿ ಅವುಗಳಿಗೆ ದೇಸಿ ತಂತ್ರಜ್ಞಾನಗಳ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಪಡೆಬೇಕು ಎಂದರು.

Advertisement

ಹಣಕಾಸು ಅಧಿಕಾರಿ ಎಂ.ಎ. ಸಪ್ನ, ಪ್ರೊ. ಎಸ್‌. ಎಲ್‌. ದೇಶಪಾಂಡೆ ಇದ್ದರು. ಕುಲಸಚಿವ ಪ್ರೊ. ಬಿ.ಈ. ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸರಸ್ವತಿ ಭೂಸನೂರ್‌ ಸ್ವಾಗತಿಸಿದರು. ನಂದಾ ಹಿರೇಮಠ ವಂದಿಸಿದರು. ಮೈತ್ರಿ ಕಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next