ಚಿತ್ರದುರ್ಗ: ಸಮಾಜದ ಬಹುತೇಕ ಸಮುದಾಯಗಳು ಇಂದಿಗೂ ಕಗ್ಗತ್ತಲೆಯಲ್ಲಿಯೇ ಜೀವನ ನಡೆಸುತ್ತಿವೆ. ಅಂತಹ ಸಮುದಾಯಗಳಿಗೆ ಜ್ಞಾನದ ಬೆಳಕನ್ನು ಹರಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ “ಶರಣ ಸಂಸ್ಕೃತಿ ಉತ್ಸವ’ದಲ್ಲಿ ಸೋಮವಾರ ನಡೆದ ಸಹಜ ಶಿವಯೋಗದಲ್ಲಿ ಮಾತನಾಡಿದರು. ಆಯಾ ಸಮುದಾಯಗಳ ಮಠಾಧೀಶರು ಜನರಲ್ಲಿ ಸಾಕ್ಷರ ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕು. ಮೂಢನಂಬಿಕೆ, ಕಂದಾಚಾರ, ಹಳೆಯ ಸಂಪ್ರದಾಯಗಳಿಂದ ಹೊರ ಕರೆತರಬೇಕು. ಆ ಮೂಲಕ ಸಮುದಾಯದ ಪ್ರಗತಿಗೆ ಸ್ವಾಮೀಜಿಗಳು ಪ್ರಯತ್ನಿಸಬೇಕು ಎಂದರು.
ದೇಶದಲ್ಲಿ ಅಸ್ಪ್ರಶ್ಯತೆ ಇನ್ನೂ ಜೀವಂತವಾಗಿದೆ. ಅಸ್ಪ್ರಶ್ಯತೆ ನಿವಾರಣೆ ಆದರೆ ಮಾತ್ರ ಸಾಮಾಜಿಕ ಸಮಾನತೆ ಬರುತ್ತದೆ. ಸಮಾಜದ ಸಮಗ್ರ ಪರಿವರ್ತನೆ ಆಗಬೇಕಿದೆ. ಆ ನಿಟ್ಟಿನಲ್ಲಿ ಮುರುಘಾಮಠ ಪರಿವರ್ತನೆ ತರುವ ಒಂದು ಪ್ರಯೋಗ ಶಾಲೆಯಾಗಿದೆ. ಸಮಾಜಕ್ಕೆ ಕೊಡುಗೆ ನೀಡುವವರು ಬೇಕಾಗಿದ್ದಾರೆ. ಕೆರೆ ಕಾಲುವೆ ಕಟ್ಟಿಸುವವರು, ಅನ್ನ ದಾಸೋಹ ಏರ್ಪಡಿಸುವವರು, ಸಾಲುಮರಗಳನ್ನು ಬೆಳೆಸುವವರು, ಶಿಕ್ಷಣದ ಮೂಲಕ ಸಮುದಾಯ ನಿರ್ಮಾಣ ಮಾಡುವವರು, ಭೂದಾನ, ನೇತ್ರದಾನ, ರಕ್ತದಾನ, ಅಂಗಾಂಗ ದಾನ ಮಾಡುವವರು ಸಮಾಜಕ್ಕೆ ಬೇಕಾಗಿದ್ದಾರೆ. ಈ ರೀತಿಯ ಕೊಡುಗೆ ಕೊಡುವವರು ಶ್ರೇಷ್ಠರಾಗುತ್ತಾರೆ. ಇತಿಹಾಸ ನಿರ್ಮಿಸುವವರು ಮತ್ತಷ್ಟು ಶ್ರೇಷ್ಠರಾಗುತ್ತಾರೆ ಎಂದರು.
ಮೊಬೈಲ್ ಈಗ ಕಿರುಕುಳ ನೀಡುವ ದೊಡ್ಡ ಸಾಧನವಾಗಿದೆ. ಇದರ ಮೂಲಕ ವಿಕಾರಗಳು ಹಾಗೂ ವಿಕೃತ ವಿಚಾರಗಳೇ ಹೊರಬರುತ್ತಿವೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಬೆಂಗಳೂರು ಸೇರಿದಂತೆ ನಗರಗಳನ್ನು ತೊರೆದು ಹಳ್ಳಿಗಳನ್ನು ಸೇರಿದರು. ಅವರು ಹಳ್ಳಿ ಸೇರಿ ಸುಮ್ಮನೆ ಕೂರಲಿಲ್ಲ. ಮತ್ತೆ ಕೃಷಿಯತ್ತ ಮುಖಮಾಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಇರಕಲ್ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮಿಗಳು ಮಾತನಾಡಿ, ಕರ್ನಾಟಕ ಸಿದ್ಧಗಂಗೆಯ ಶಿವಕುಮಾರ ಶ್ರೀ, ಇಳಕಲ್ ಶ್ರೀಗಳನ್ನು ಕಳೆದುಕೊಂಡು ಬಡವಾಗಿದೆ ಎಂದು ಜನ ಭಾವಿಸಿದ್ದರು. ಆದರೆ ಅವರ ಶಕ್ತಿ, ಸಾಮರ್ಥ್ಯ ಮುರುಘಾ ಶರಣರಲ್ಲಿ ಸಮ್ಮಳಿತಗೊಂಡಿವೆ. ಮುರುಘಾ ಶರಣರು ಇರುವವರೆಗೂ ಕರ್ನಾಟಕ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಡವಾಗುವುದಿಲ್ಲ ಎಂದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಸಂಗನಬಸವ ಸ್ವಾಮೀಜಿ, ಗುತ್ತಿಗೆದಾರ ಬಸವರಾಜ ಸಜ್ಜನ, ವಿಶ್ವಕರ್ಮ ಸಮಾಜದ ಮುಖಂಡ ಎಂ. ಶಂಕರಮೂರ್ತಿ, ಟಿ. ರಮೇಶ್, ಎನ್. ಹನುಮಂತಪ್ಪ ಉಪಸ್ಥಿತರಿದ್ದರು.