ಬೆಂಗಳೂರು: ಬರಹಗಾರರು ಸ್ಥಳೀಯ ಭಾಷೆಯಲ್ಲಿಯೇ ಕೃತಿಗಳನ್ನು ರಚಿಸಿದರೆ ಓದುಗರಿಗೆ ಭಾಷಾ ಸೊಗಡು ತಿಳಿಯುತ್ತದೆ ಎಂದು ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹೇಳಿದರು.
ಭಾನುವಾರ ಜೆ.ಪಿ.ನಗರದ ಕಪ್ಪಣ್ಣ ಅಂಗಳಲ್ಲಿ ಏರ್ಪಡಿಸಿದ್ದ ಈ ಹೊತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪ್ರಾಂತ್ಯಕ್ಕೂ ಭಾಷೆ ಬದಲಾಗುತ್ತದೆ. ಬರಹಗಾರರು ತಮ್ಮ ಸ್ಥಳೀಯ ಭಾಷೆಯಲ್ಲಿ ಕೃತಿಗಳನ್ನು ರಚಿಸುವುದರಿಂದ ಓದುಗರಿಗೂ ಭಾಷೆ ಶೈಲಿ ತಿಳಿಯುತ್ತದೆ. ಕಾರಂತರು, ಬೇಂದ್ರೆ ಅವರು ತಮ್ಮದೇ ಶೈಲಿಯಲ್ಲಿ ಕೃತಿ ರಚಿಸುತ್ತಿದ್ದರು ಎಂದು ತಿಳಿಸಿದರು.
ಸಮಕಾಲೀನ ಕೃತಿಗಳು ಎಂದಕ್ಷಣ ಯುವ ಕವಿಗಳ ಕೃತಿಗಳಲ್ಲ. ಕುಮಾರವ್ಯಾಸ, ಪಂಪ, ಅಕ್ಕಮಹಾದೇವಿ ಅವರ ಕೃತಿಗಳು ಸಹ ಸಮಕಾಲೀನವು. ಅವರ ಕೃತಿಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು. ಇದೇ ವೇಳೆ ಕವಿ ಕೆ.ಎಚ್. ಮುಸ್ತಫಾ ಅವರು ರಚಿಸಿದ “ಹರಾಂನ ಕತೆಗಳು’ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು.
ಈ ಹೊತ್ತಿಗೆ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಗೋವಿಂದರಾಜು ಎಂ ಕೊಲ್ಲೂರು (ಪ್ರಥಮ), ಕಪಿಲ ಹುಮನಾಬಾದೆ (ದ್ವಿತೀಯ), ದಾದಾಪೀರ್ ಜೈಮನ್ (ತೃತೀಯ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2020ನೇ ಸಾಲಿನ “ಈ ಹೊತ್ತಿಗೆ’ ಕಥಾ ಪ್ರಶಸ್ತಿಯನ್ನು ಕವಿ ಕೆ.ಎಚ್. ಮುಸ್ತಫಾ ಅವರಿಗೆ ನೀಡಲಾಯಿತು.
ರಂಗಕರ್ಮಿ ಶ್ರೀನಿವಾಸ್ ಬಿ.ಕಪ್ಪಣ್ಣ, ಕಾದಂಬರಿಗಾರ್ತಿ ಡಾ.ಲತಾ ಗುತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.