Advertisement

ನಕಲಿ ಆ್ಯಪ್‌ ಸೃಷ್ಟಿಸಿ ವಂಚನೆ: ತಜ್ಞರಿಂದ ಎಚ್ಚರಿಕೆ

01:05 PM Jul 29, 2020 | mahesh |

ಮಹಾನಗರ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಜನರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗುತ್ತಿದ್ದು ಈ ಸಂದರ್ಭವನ್ನು ಕೆಲವು ಸೈಬರ್‌ ವಂಚಕರು ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ ಎಂದು ಸೈಬರ್‌ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಕಲಿ ಆ್ಯಪ್‌, ನಕಲಿ ಪೋರ್ಟಲ್‌ ಲಿಂಕ್‌ಗಳ ಮೂಲಕ ವಿವಿಧ ರೀತಿಯಲ್ಲಿ ವಂಚಿಸುತ್ತಿರುವುದು ಕಂಡುಬಂದಿದೆ ಎಂದು ಕೆಲವು ಮಂದಿ ಸೈಬರ್‌ ತಜ್ಞರು ತಿಳಿಸಿದ್ದಾರೆ. ಕೋವಿಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಕೋವಿಡ್ ಗೆ ಚಿಕಿತ್ಸೆ ನೀಡುತ್ತೇವೆ. ಸರಕಾರ ಅಥವಾ ಇಲಾಖೆ ಗಳಿಗೆ ತಿಳಿಯದಂತೆಯೇ ಮಾಹಿತಿ ನೀಡುತ್ತೇವೆ ಎಂಬಿತ್ಯಾದಿಯಾಗಿ ಹೇಳಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ತಿಳಿಸಲಾಗುತ್ತದೆ. ಅನಂತರ ಬಳಕೆದಾರರ ಮೊಬೈಲ್‌ ನಲ್ಲಿರುವ ಮಾಹಿತಿಯನ್ನು ಕದಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

ನಕಲಿ ಆ್ಯಕ್ಸಿಮೀಟರ್‌ ಆ್ಯಪ್‌
ರಕ್ತದಲ್ಲಿ ಆಕ್ಸಿಜನ್‌ ಪ್ರಮಾಣ ಕಡಿಮೆಯಾಗುವುದು ಕೂಡ ಕೋವಿಡ್ ಲಕ್ಷಣ ಎಂದು ಕೆಲವು ವೈದ್ಯಕೀಯ ವರದಿಗಳು ಹೇಳಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ರಕ್ತದಲ್ಲಿ ಆಕ್ಸಿಜನ್‌ ಪ್ರಮಾಣ ಪರೀಕ್ಷಿಸಲು ಮುಂದಾಗುತ್ತಿದ್ದಾರೆ. ಕೆಲವರು ಆ್ಯಕ್ಸಿಮೀಟರ್‌ ಖರೀದಿಸುತ್ತಿದ್ದಾರೆ. ಇನ್ನು ಕೆಲವರು ಆಕ್ಸಿಮೀಟರ್‌ ಆ್ಯಪ್‌ಗಳಿಗೆ ಹುಡುಕಾಡಿದ್ದು ಅವರಿಗೆ ನಕಲಿ ಆ್ಯಪ್‌ಗಳು ಕೂಡ ದೊರೆತಿವೆ. ಇದರಿಂದ ವಂಚನೆಗೊಳಗಾಗುತ್ತಿದ್ದಾರೆ. ಆ್ಯಪ್‌ನೊಂದಿಗೆ ಇರುವ ನಕಲಿ ಲಿಂಕ್‌ನ್ನು ಕ್ಲಿಕ್‌ ಮಾಡಿದರೆ ಮೊಬೈಲ್‌ನಲ್ಲಿರುವ ಎಲ್ಲ ಮಾಹಿತಿಗಳು ಕೂಡ ಸೈಬರ್‌ ವಂಚಕರಿಗೆ ಲಭಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

ಈ ಹಿಂದೆ ಪಾಕಿಸ್ಥಾನ ಸೃಷ್ಟಿಸಿತ್ತು
ಆಕ್ಸಿಮೀಟರ್‌ ಆ್ಯಪ್‌ ಎಂದು ಪರಿಚಯಿಸುವ ಸೈಬರ್‌ ವಂಚಕರು ಬೇರೊಂದು ನಕಲಿ ಆ್ಯಪ್‌ನ ಲಿಂಕ್‌ನ್ನು ಕೊಡುತ್ತಾರೆ. ಅದನ್ನು ಒತ್ತಿದ ಕೂಡಲೇ ಕೆಲವು ಮಾಹಿತಿ(ಒಪ್ಪಿಗೆ) ಪಡೆಯಲಾಗುತ್ತದೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಅನಂತರ ಅದು ಕ್ರಿಯಾಶೀಲವಾಗುತ್ತದೆ. ಆಗ ಆ ಮೊಬೈಲ್‌ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಕಳವು ಮಾಡುತ್ತದೆ. ಈ ಹಿಂದೆ ಆರೋಗ್ಯಸೇತು ಆ್ಯಪ್‌ ಬಿಡುಗಡೆಯಾದ ಸಂದರ್ಭದಲ್ಲಿ ಪಾಕಿಸ್ಥಾನದ ಹ್ಯಾಕರ್‌ಗಳು ನಕಲಿ ಆರೋಗ್ಯ ಆ್ಯಪ್‌ ಸೃಷ್ಟಿಸಿದ್ದರು. ಇಂತಹ ಸೈಬರ್‌ ವಂಚಕರು ಜನರ ಅಗತ್ಯದ ಬಗ್ಗೆ ಗಮನಹರಿಸುತ್ತ ಇರುತ್ತಾರೆ. ಕೂಡಲೇ ಆ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಿ ಜನರನ್ನು ವಂಚಿಸುತ್ತಾರೆ.
 - ಅನಂತ್‌ ಪ್ರಭು, ಸೈಬರ್‌ ಲಾ ಆ್ಯಂಡ್‌ ಸೆಕ್ಯುರಿಟಿ ತಜ್ಞರು, ಮಂಗಳೂರು

ಎಚ್ಚರಿಕೆ ವಹಿಸಿ
ಅಂತರ್ಜಾಲದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಸುವಾಗ ಹೆಚ್ಚಿನ ಜಾಗ್ರತೆ ವಹಿಸಿ. ಕೋವಿಡ್ ಸಂಕಷ್ಟವನ್ನು ಇದೀಗ ಕೆಲವರು ದುರುಪಯೋಗ ಪಡೆಯಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಿರ್ದಿ ಷ್ಟವಾಗಿ ಪ್ರಕರಣ ದಾಖಲಾಗಿಲ್ಲ. ಆದರೂ ಜನತೆ ಸಾಮಾಜಿಕ ಜಾಲತಾಣ ಸಹಿತ ಅಂತರ್ಜಾಲ ಬಳಕೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು.
 - ಗಿರೀಶ್‌, ಇನ್‌ಸ್ಪೆಕ್ಟರ್‌, ಸೈಬರ್‌ ಅಪರಾಧಗಳ ಪೊಲೀಸ್‌ ಠಾಣೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next