ಪುಂಜಾಲಕಟ್ಟೆ: ಸಾರ್ವಜನಿಕ ಇಲಾಖೆ, ದ.ಕ. ಜಿಲ್ಲಾ ಶಿಕ್ಷಣ-ತರಬೇತಿ ಸಂಸ್ಥೆ ಮಂಗಳೂರು, ಉಪನಿರ್ದೇಶಕರ ಕಚೇರಿ ದ.ಕ., ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ, ಕಾವಳಮೂಡೂರು, ವಗ್ಗ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದಿಂದ ಮೈಸೂರು ವಿಭಾಗ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯ ಉದ್ಘಾಟನ ಕಾರ್ಯಕ್ರಮ ವಗ್ಗ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ಗುರುವಾರ ಜರಗಿತು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ತಿರುಗುವ ರಂಗಮಂದಿರದ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ನಾಟಕದಿಂದ ಪರಿವರ್ತನೆಯ ಸಂದೇಶದ ಮೂಲಕ ಸ್ವತ್ಛ ಸಮಾಜ, ಸದೃಢ ದೇಶ ನಿರ್ಮಾಣದ ಗುರಿ ವಿದ್ಯಾರ್ಥಿಗಳಲ್ಲಿರಲಿ. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು, ಗುರಿಯ ಮೂಲಕ ಗಳಿಸಿದ ಜ್ಞಾನ ಮುಂದಿನ ಜೀವನಕ್ಕೆ ಉಪಯುಕ್ತವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳ ವಿಕಸನಕ್ಕೆ ಸಂಘ-ಸಂಸ್ಥೆಗಳ ಪ್ರೋತ್ಸಾಹ ಅಗತ್ಯ. ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯಕ್ಕೆ ನಾಟಕ ಸ್ಪರ್ಧೆ ಪೂರಕವಾಗಿದೆ. ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಎಂಬುವುದು ಜೀವನದ ಭಾಗವಾಗುವುದರ ಜತೆಗೆ ಪರಿಸರದ ಉಳಿವಿನ ಅರಿವು ಕೂಡಾ ಅಗತ್ಯವಾಗಿದೆ ಎಂದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಆಲಿ ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಖ್ಯವಾಗಿದ್ದು, ಸ್ವಾವಲಂಬನೆಯಿಂದ ತಂತ್ರಜ್ಞಾನ ಮೂಲಕ ಭವ್ಯ ಭಾರತದ ನಿರ್ಮಾಣ ಸಾಧ್ಯವಾಗಲಿ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ ಎನ್., ಕಾಲೇಜು ಪ್ರಾಂಶುಪಾಲೆ ಭಾರತಿ ಬಾಯಿ ಕೆ., ಸಮಾಜ ಸೇವಕ ಅಹಮ್ಮದ್ ತಾಹಾ ತನ್ವೀರ್ ಬಿಗ್‌ಹೌಸ್ ಬಾಂಬಿಲ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸ್ಟ್ಯಾನಿ ಜಿ. ತಾವ್ರೋ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಶಿವಶಂಕರ ಭಟ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಣಿಕ್ಯರಾಜ್ ಜೈನ್, ಉದ್ಯಮಿ ಸ್ಟ್ಯಾನಿ ಲೋಬೋ, ಜಿಲ್ಲಾ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೋ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬೆನೆಡಿಕ್ಟ್ ಡಿ’ಸೋಜಾ, ನೀರ್ಕಾನ ಸಂತ ಥೋಮಸರ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸಿ| ಸುನೀತಾ, ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲ ಸಂತೋಷ್, ತೀರ್ಪುಗಾರರಾದ ಜಗನ್ ಪವಾರ್, ಗೋಪಾಲಕೃಷ್ಣ, ಪರಮೇಶ್ವರ ಹೆಗ್ಡೆ ಮತ್ತು ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ವಗ್ಗ ಸ.ಪ.ಪೂ. ಕಾಲೇಜು ಉಪನ್ಯಾಸಕ ವೃಂದ, ಪ್ರೌಢಶಾಲಾ ಶಿಕ್ಷಕವೃಂದ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸಮ್ಮಾನ
ಶಾಲೆಗೆ 5 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣ ವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ ದಾನಿ ಅಹಮ್ಮದ್ ತಾಹಾ ತನ್ವೀರ್ ಬಿಗ್‌ಹೌಸ್ ಬಾಂಬಿಲ ಅವರನ್ನು ಸಮ್ಮಾನಿಸಲಾಯಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇದರ ಉಪನಿರ್ದೇಶಕ ಸಿಪಿರಿಯನ್ ಮೊಂತೆರೋ ಸ್ವಾಗತಿಸಿ, ನೋಡಲ್ ಅಧಿಕಾರಿ ಶ್ರೀನಿವಾಸ ಅಡಿಗ ಪ್ರಸ್ತಾವಿಸಿದರು. ಪ್ರೌಢಶಾಲಾ ವಿಭಾಗ ಪ್ರಭಾರ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ನೆಲ್ಯಾಡಿ ವಂದಿಸಿದರು. ಶಿಕ್ಷಕ ಮಹಮ್ಮದ್ ತುಂಬೆ ನಿರೂಪಿಸಿದರು.
ನಾಟಕ ಪ್ರದರ್ಶನ
ದ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಪ್ರೌಢಶಾಲಾ ತಂಡಗಳು ವಿಜ್ಞಾನ, ಸಮಾಜ, ಡಿಜಿಟಲ್ ಭಾರತ ವಿಷಯದ ಕುರಿತು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಾಟಕ ಪ್ರದರ್ಶಿಸಿದರು.
ವೈಜ್ಞಾನಿಕ ಚಿಂತನೆ
ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಇಂತಹ ಕಾರ್ಯಕ್ರಮಗಳ ಅನುಷ್ಠಾನದಿಂದ ವಿದ್ಯಾರ್ಥಿಗಳ ಮೂಲಕ ವೈಜ್ಞಾನಿಕ ಚಿಂತನೆಯನ್ನು ಸಮಾಜದ ಎಲ್ಲ ವರ್ಗದವರಿಗೆ ತಿಳಿಸುವ ಕಾರ್ಯವಾಗುತ್ತದೆ.
– ಚಂದ್ರಹಾಸ ಕರ್ಕೇರ
ಬಂಟ್ವಾಳ ತಾ.ಪಂ. ಅಧ್ಯಕ್ಷರು