ಹಾಸನ: ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ ತಡೆಗೆ ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಅವರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯಲ್ಲಿ ಕಾರ್ಮಿಕರಾಗಿರುವ ಮಕ್ಕಳನ್ನು ಗುರುತಿಸಿ ಅವರು ಶಿಕ್ಷಣ ಪಡೆಯುವ ವ್ಯವಸ್ಥೆ ಮಾಡಿ ಎಂದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರು ವಾಸಿಸುವ ಪ್ರದೇಶಗಳಲ್ಲಿ ಸಮುದಾಯ ಭವನಗಳ ಗೋಡೆಯ ಮೇಲೆ ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ಮಾಹಿತಿಯನ್ನು ಬರೆಸಲು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಅರಿವು ಮೂಡಿಸುವಂತಹ ಬೀದಿ ನಾಟಕಗಳು, ವಿಶೇಷ ಜಾಹೀರಾತು ಫಲಕಗಳನ್ನು ಹಾಕಿಸಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲೆ ಬಿಟ್ಟ ಮಕ್ಕಳ ಪಟ್ಟಿಯನ್ನಾಧರಿಸಿ ಬಾಲಕಾರ್ಮಿಕರನ್ನು ಗುರುತಿ ಸುವ ಕಾರ್ಯ ಚುರುಕುಗೊಳಿಸಬೇಕು. ಪ್ರತಿ ತಾಲ್ಲೂಕುಗಳಲ್ಲಿ ಟಾಸ್ಕ್-ಫೋರ್ಸ್ ಸಮಿತಿಯನ್ನು ರಚಿಸುವಂತೆ ಅವರು ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು. ಶಾಲೆ ಬಿಡಿಸಿ ಮಕ್ಕಳನ್ನು ಬಾಲ ಕಾರ್ಮಿಕತೆಗೆ ದೂಡುವ ತಂದೆ ತಾಯಿಗೆ ತಿಳುವಳಿಕೆ ನೀಡಿ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ, ಮಕ್ಕಳ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ಅನು ಸರಿಸಿದರೆ ಕಾನೂನಿನಡಿಯಲ್ಲಿ ಸಿಗುವ ಶಿಕ್ಷೆ ಕುರಿತಂತೆ ಅವರಲ್ಲಿ ಅರಿವು ಮೂಡಿಸಿ ಎಂದರು.
ಜಿಲ್ಲಾ ಕಾರ್ಮಿಕಧಿಕಾರಿ ಮಾತನಾಡಿ ಈ ಬಾರಿ ಸರ್ಕಾರದಿಂದ 1,60,000 ಅನುದಾನ ಬಿಡುಗಡೆ ಯಾಗಿದ್ದು, ಶೇ.50 ರಷ್ಟು ಜಾಗೃತಿ ಕಾರ್ಯಕ್ರಮ ಗಳಿಗಾಗಿ ಮತ್ತು ಶೇ.50 ರಷ್ಟನ್ನು ಬಾಲ ಕಾರ್ಮಿಕ ಮಕ್ಕಳ ಪುನರ್ವಸತಿಗಾಗಿ ಬಳಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ಅನಂತ್‌ರಾವ್, ಯೋಜನಾ ನಿರ್ದೇಶಕ ಕನಕಲಕ್ಷ್ಮೀ, ಮತ್ತಿತರರು ಹಾಜರಿದ್ದರು.