ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಪ್ರತ್ಯೇಕ ನಿರ್ವಹಣಾ ಸಮಿತಿಯೊಂದನ್ನು ರಚಿಸಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತಂತೆ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಎಂಬ ಸಂಸ್ಥೆ ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಬುಧವಾರ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ನ್ಯಾಯಪೀಠದ ವಿಚಾರಣೆ ನಡೆಸಿತು. ಈ ವೇಳೆ ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಹಾಗೂ ಅಸಮರ್ಪಕ ನಿರ್ವಹಣೆ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಮೌಖೀಕ ನಿರ್ದೇಶನ ನೀಡಿತು.
ಬೆಂಗಳೂರು ನಗರದಲ್ಲಿ ಸುಮಾರು 1,100 ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ. ಈಗಾಗಲೇ ನಿರ್ಮಾಣಗೊಂಡಿರುವ ಶೇ.90ರಷ್ಟು ಪುರುಷ ಹಾಗೂ ಶೇ.94ರಷ್ಟು ಮಹಿಳಾ ಸಾರ್ವಜನಿಕ ಶೌಚಾಲಯಗಳಲ್ಲಿ ಫ್ಲೆಶ್ ಕೆಲಸ ಮಾಡುತ್ತಿಲ್ಲ. ಶೇ.87ರಷ್ಟು ಪುರುಷ ಹಾಗೂ ಶೇ.88ರಷ್ಟು ಮಹಿಳಾ ಶೌಚಾಲಯಗಳಲ್ಲಿ ಕಸದ ಡಬ್ಬಿಗಳಿಲ್ಲ. ಶೇ.33 ಪುರುಷ ಹಾಗೂ ಶೇ.58 ಮಹಿಳಾ ಶೌಚಾಲಯಗಳಲ್ಲಿ ಕೈತೊಳೆಯುವ ಸಿಂಕ್ ಇಲ್ಲ. ಕಟ್ಟಡಗಳು ದುಸ್ಥಿತಿಯಿಂದ ಕೂಡಿದೆ ಹಾಗೂ ಸ್ವತ್ಛತೆ ಕಾಯ್ದುಕೊಂಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ ಸ್ವತ್ಛ ಭಾರತದ ಮಾನದಂಡಗಳ ಪ್ರಕಾರ ಪ್ರತಿ 100 ಪುರುಷರಿಗೆ ಒಂದು ಹಾಗೂ ಪ್ರತಿ 100 ಮಹಿಳೆಯರಿಗೆ ಎರಡು ಶೌಚಾಲಯ ಕೊಠಡಿ ಇರಬೇಕು. ಪ್ರತಿ ಏಳು ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ ಇರಬೇಕು. ಆದರೆ, ನಗರದಲ್ಲಿ 473 ಸಾರ್ವಜನಿಕ ಶೌಚಾಲಯಗಳಿದ್ದು, ಅದರಲ್ಲಿ ಬಿಬಿಎಂಪಿ 150 ಮತ್ತು ಖಾಸಗಿಯವರು 75 ಶೌಚಾಲಯಗಳನ್ನು ನಿರ್ವಹಿಸುತ್ತಿದ್ದಾರೆ.
ಉಳಿದ 246 ಸಾರ್ವಜನಿಕ ಶೌಚಾಲಯಗಳನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜತೆಗೆ ಸ್ವತ್ಛ ಸರ್ವೇಕ್ಷಣಾ ವರದಿಯಲ್ಲಿ ಬೆಂಗಳೂರಿಗೆ 210ನೇ ರ್‍ಯಾಂಕ್ ಸಿಕ್ಕಿದೆ. ಶೌಚಾಲಯಗಳ ಕೊರತೆ ಹಾಗೂ ಅಸಮರ್ಪಕ ನಿರ್ವಹಣೆಯಿಂದಾಗಿ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಸಾರ್ವಜನಿಕ ಶೌಚಾಲಯಗಳಿಲ್ಲದ ಕಾರಣ ನಾಗರಿಕರಿಗೆ ತೊಂದರೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಕುರಿತು ತನಿಖೆ ನಡೆಸಬೇಕು. ಅವುಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ನಿರ್ವಹಣಾ ಸಮಿತಿ ರಚಿಸಬೇಕು. ಕಾಲ ಕಾಲಕ್ಕೆ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆಯನ್ನು ಪರಿಶೀಲನೆ ಮಾಡಲು ಸರ್ವೆ ನಡೆಸುವಂತೆ ಹಾಗೂ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪರಿಸರ ಸ್ನೇಹಿ ಶೌಚಾಲಯದ ಅಗತ್ಯ: ಅಂತರ್ಜಲ ಮಾಲಿನ್ಯ ತಡೆಯಲು ಬಯೋ ಡೈಜೆಸ್ಟ್‌ರ್ (ಮಾನವ ತ್ಯಾಜ್ಯವನ್ನು ಗ್ಯಾಸ್ ಹಾಗೂ ಗೊಬ್ಬರವಾಗಿ ಪರಿವರ್ತಿಸುವ), ಪರ್ಮಿಯೆಬಲ್ ರಿಯಾಕ್ಟಿವ್ ಬ್ಯಾರಿಯರ್ (ಪಿಆರ್‌ಬಿ), ಸೌರ ಶಕ್ತಿಯಿಂದ ನಿರ್ವಹಿಸುವ ಸ್ವಯಂ ಸ್ವತ್ಛತಾ ಶೌಚಾಲಯಗಳು, ಲೋ-ಟೆಕ್ ಬ್ಯಾಂಬೂ ಹಾಗೂ ಈಕೊ ಸ್ಯಾನ್ ಮಾದರಿಯ ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.