ಬೀದರ: ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ನಶೆ ಮುಕ್ತ ಅಭಿಯಾನ ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಮೂರು ಕಿ.ಮೀ. ಉದ್ದದ ಬೃಹತ್ ಮಾನವ ಸರಪಳಿ ರಚಿಸಿ, ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಿತು.
ನಗರದ ಅಂಬೇಡ್ಕರ್ ವೃತ್ತದ ಸಮೀಪದಿಂದ ಶುರುವಾದ ಮಾನವ ಸರಪಳಿಯು ಕ್ರಾಂತಿ ಗಣೇಶ, ಶಹಾಗಂಜ್ ದರ್ವಾಜಾ, ಮುಖ್ಯ ರಸ್ತೆ, ಗಾವಾನ್ ಚೌಕ್, ಚೌಬಾರಾ, ಪಾಂಡುರಂಗ ಮಂದಿರ, ಸಿದ್ದಿ ತಾಲೀಂ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‌ಸಿಂಗ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಪುನಃ ಅಂಬೇಡ್ಕರ್ ವೃತ್ತದ ಬಳಿ ಜೋಡಣೆಯಾಯಿತು.
ಸುಮಾರು 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು, 60ಕ್ಕೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಂಬಾಕು ಸೇವನೆಯಿಂದ ಆರೋಗ್ಯ, ಕುಟುಂಬದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಬರಹ ಹೊಂದಿದ್ದ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಫಲಕಗಳು “ತಂಬಾಕು ಹಠಾವೋ ಜೀವನ್ ಬಚಾವೋ ಮೊದಲಾದ ಬರಹಗಳನ್ನು ಹೊಂದಿದ್ದವು. ನಶೆ ಮುಕ್ತ ಅಭಿಯಾನ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾನವ ಸರಪಳಿ ಒಳಗೆ ರ್ಯಾಲಿ ನಡೆಸಿದರು. ಘೋಷ ವಾಕ್ಯಗಳನ್ನು ಕೂಗಿದರು.
ತಂಬಾಕು ಸೇವನೆಯಿಂದ ಪ್ರತಿವರ್ಷ ಸಂಭವಿಸುತ್ತಿರುವ ಸಾವು, ರೋಗಗಳ ಚಿಕಿತ್ಸೆಗಾಗಿ ಖರ್ಚು ಮಾಡುತ್ತಿರುವ ಹಣ, ಅದರಿಂದಾಗಿಯೇ ಅಸಂಖ್ಯಾತ ಕುಟುಂಬಗಳು ಬೀದಿಗೆ ಬರುತ್ತಿರುವುದನ್ನು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರತಿಮಾ ಬಹೆನ್, ಪಾರ್ವತಿ ಬಹೆನ್, ಅಭಿಯಾನ ಸಮಿತಿಯ ಪ್ರಮುಖ ಡಾ| ಅಬ್ದುಲ್ ಖದೀರ್, ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಕ.ಕ. ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ಐಎಂಎ ಅಧ್ಯಕ್ಷ ಡಾ| ವಿನೋದ ಸಾವಳಗಿ, ರೋಟರಿ ಕಲ್ಯಾಣ ಝೋನ್‌ನ ಶಿವಕುಮಾರ ಯಲಾಲ್, ಡಾ| ಮಕ್ಸೂದ್ ಚಂದಾ ಮೊದಲಾದವರು ಇದ್ದರು.