Advertisement

ಕೋವಿಡ್ 19ಗೆ ತಿಥಿ ಮಾಡಿ, ನೀವು ಅತಿಥಿ ಆಗ್ಬೇಡಿ ಎಂದ ಕ್ರೇಜಿಸ್ಟಾರ್

10:23 AM Apr 11, 2020 | Suhan S |

ಕೋವಿಡ್ 19 ಸೋಂಕು ಹರಡುವಿಕೆಗೆ ಕಡಿವಾಣ ಹಾಕಿ ಎಂದು ಅನೇಕ ಸಿನಿಮಾ ಕಲಾವಿದರು, ನಟ, ನಟಿಯರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ನಟ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಕೂಡ ತಮ್ಮದೇ ಶೈಲಿಯಲ್ಲಿ ಜನರಿಗೆ ಒಂದಷ್ಟು ಕಿವಿಮಾತಿನ ಜೊತೆ ಎಚ್ಚರಿಕೆ ನೀಡಿದ್ದಾರೆ.

Advertisement

ಕೋವಿಡ್ 19  ವೈರಸ್‌ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ನಾವು ಏನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು ಎಂದು ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ಸಿದ್ಧಪಡಿಸಿರುವ ವಿಡಿಯೋದಲ್ಲಿ ರವಿಚಂದ್ರನ್‌ ತಿಳಿಸಿದ್ದಾರೆ. ಈ ಕೋವಿಡ್ 19 ಗೆ ತಿಥಿ ಮಾಡ್ಬೇಕು ಅಂದ್ರೆ ನೀವು ಮನೆಯಲ್ಲೇ ಇದ್ದು ಸುರಕ್ಷಿತರಾಗಿರಿ. ಸುಮ್ಮನೆ ಹೊರಬಂದು ಸೋಂಕಿಗೆ ಅತಿಥಿ ಆಗಬೇಡಿ ಎಂದು ರವಿಚಂದ್ರನ್‌ ಕಿವಿ ಮಾತು ಹೇಳಿದ್ದಾರೆ.

ಈ ವಿಡಿಯೋದಲ್ಲಿ ರವಿಚಂದ್ರನ್‌ ಅವರಿಗೆ ಪುತ್ರರಾದ ಮನೋರಂಜನ್‌ ಮತ್ತು ವಿಕ್ರಂ ಕೂಡ ಸಾಥ್‌ ಕೊಟ್ಟಿದ್ದಾರೆ. ಕೋವಿಡ್ 19 ಗೆ ಬೆಂಕಿ ಹಚ್ಚಬೇಕು ಅಂದರೆ ನಿಮ್ಮನೆ ದೀಪ ಆರಬಾರದು. ಹೀಗಾಗಿ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ ಅಂದರೆ ದೇವರು ಇಲ್ಲ ಅಂತಾನಾ? ಡಾಕ್ಟರ್ಗಳಲ್ಲಿ, ನರ್ಸ್‌ಗಳಲ್ಲಿ, ಪೊಲೀಸರಲ್ಲಿ ಹಾಗೂ ಈ ಸಂದರ್ಭದಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಲ್ಲಿಯೂ ಆ ದೇವರು ಇದ್ದಾನೆ. ಆ ದೇವರ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಅವರಷ್ಟೂ ಜನರಕ್ಕೆ ಒಂದು ಸೆಲ್ಯೂಟ್‌, ನಮಸ್ಕಾರ, ಎಂದು ಒಂದು ಫ್ಲೈಯಿಂಗ್‌ ಕಿಸ್‌ ಕೊಟ್ಟು ಧ್ಯನವಾದ ಹೇಳಿ ಎಂದಿದ್ದಾರೆ.

ಎಷ್ಟು ಜನ್ಮವೆತ್ತಿದರೂ ನಮಗಾಗಿ ಈ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವವರ ಋಣ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಅನಿಸಿದರೆ ನೀವು ಮನೆಯಲ್ಲಿಯೇ ಇರಿ. ವೈದ್ಯರು, ಪೊಲೀಸರಿಗೆ ಕೋವಿಡ್ 19  ವಿರುದ್ಧ ಹೋರಾಡಲು ಬಿಡಿ. ನಿಮ್ಮ ಜೊತೆ ಹೋರಾಡುವುದಲ್ಲ ಪೊಲೀಸರ ಕೆಲಸವಲ್ಲ ಎಂದು ತಿಳಿ ಹೇಳಿದ್ದಾರೆ.

ಕೋವಿಡ್ 19 ಗೆ ತಿಥಿ ಮಾಡಬೇಕು ಅಂದರೆ ನೀವು ಅದಕ್ಕೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಆ ಪರಿಸ್ಥಿತಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನುವರ ಮೇಲೆ ಆತನ ವ್ಯಕ್ತಿತ್ವ ಗೊತ್ತಾಗುತ್ತೆ. ಅಂತಹದೊಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಈ ಪರೀಕ್ಷೆಯನ್ನು ನಾವು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕು. ಆದರೆ ಫೇಲ್‌ ಆಗಬೇಕು ಎಂದರೆ ನಿಮ್ಮಿ ಇಷ್ಟ. ನೀವು ಮನೆಯಿಂದ ಹೊರಗೆ ಬನ್ನಿ. ಆಗ ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್‌ ನಂಬರ್‌ ಆಗಿಬಿಡುತ್ತದೆ. ನೀವು ಪೇಷೆಂಟ್‌ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸ್‌ ನಿಂದ ಇರಲು ಬಯಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

Advertisement

ಈ ವಿಡಿಯೋವನ್ನು ರವಿಚಂದ್ರನ್‌ ಪುತ್ರ ನಟ ಮನೋರಂಜನ್‌ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವು ಮನೆಯಲ್ಲೇ ಉಳಿದರೆ ಮಾತ್ರ ಕೋವಿಡ್‌ -19 ಅರೆಸ್ಟ್‌ ಆಗಲು ಸಾಧ್ಯ, ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ ಎಂದು ಕ್ಯಾಪ್ಷನ್‌ ಹಾಕಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next