Advertisement

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ; 1981ರಲ್ಲಿ ಬಜ್ಪೆಯಲ್ಲಿ ತಪ್ಪಿದ್ದ ದುರಂತ

09:05 AM May 22, 2020 | mahesh |

ಮಂಗಳೂರು: ಇದು 19-8-1981ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆ. ಎಂ. ವೀರಪ್ಪ ಮೊಯಿಲಿ ಅವರು ಅಂದು ಇಂಡಿಯನ್‌ ಏರ್‌
ಲೈನಿನ ಆವ್ರೋ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ವಿಮಾನವು ಬಜ್ಪೆ ವಿಮಾನ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಪ್ರತಿಕೂಲ ಹವಾಮಾನದ ಕಾರಣಕ್ಕೆ ವಿಮಾನ ಇಳಿಸಲು ಪೈಲಟ್‌ಗೆ ಏರ್‌ಟ್ರಾಫಿಕ್‌ ನಿಯಂತ್ರಕರಿಂದ ಸಂಕೇತಗಳು ದೊರೆಯಲಿಲ್ಲ. ಅಸ್ಪಷ್ಟ ಗೋಚರಣೆಯ (ಪೂವರ್‌ ವಿಸಿಬಿಲಿಟಿ) ಕಾರಣದಿಂದಾಗಿ ನಿಲ್ದಾಣದ ಮೇಲೆಯೇ ಪೈಲಟ್‌ ಹಲವಾರು ಸುತ್ತು ಹಾರಾಟ ನಡೆಸಿದರು. ಅಲ್ಲಿಂದ ರನ್‌ವೇಯು ಶೇ. 25ರಷ್ಟು ಮಾತ್ರ ಉಳಿದಿರುವಂತೆ ದಿಢೀರನೆ ವಿಮಾನವನ್ನು ಇಳಿಸುವ ನಿರ್ಧಾರವನ್ನು ಪೈಲಟ್‌ ಕೈಗೊಂಡರು. ಅನೇಕರು ಸೀಟ್‌ಬೆಲ್ಟ್ ಕೂಡಾ ಕಟ್ಟಿಕೊಂಡಿರಲಿಲ್ಲ.

Advertisement

ಕ್ಷಣಾರ್ಧದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿತು. ಎದುರಿನ ಚಕ್ರಗಳು ಕಳಚಿಕೊಂಡು ಹೊರಬಂದವು. ವಿಮಾನವು ಪ್ರಪಾತದ ಅಂಚಿನಲ್ಲಿ ಬಂದು ನಿಂತಿತು. ರೆಕ್ಕೆಗಳಿಗೆ ಆಗಲೇ ಬೆಂಕಿ ಹತ್ತಿಕೊಂಡಿತು. ಮೂರು ಕೆಂಪುಕಲ್ಲುಗಳ ಮೇಲೆ ಸಿಲುಕಿಕೊಂಡ ವಿಮಾನ ನಿಧಾನಕ್ಕೆ ಜಾರುತ್ತಿತ್ತು. ಆಗಿನ ಸಂದರ್ಭದ ವಿಮಾನ
ನಿಲ್ದಾಣವು ಕಡಿದಾಗಿತ್ತು ಮತ್ತು ರನ್‌ವೇಯ ಉಲ್ಲೇಖೀತ ಪ್ರದೇಶದ ಪೂರ್ವಕ್ಕೆ 300 ಅಡಿ ಪ್ರಪಾತ. ಅದೃಷ್ಟವಶಾತ್‌, ನಿಲ್ದಾಣದ ಸಿಬಂದಿ ಸಂಪೂರ್ಣ ಜಾಗೃತರಾಗಿದ್ದರು. ತತ್‌ಕ್ಷಣ ಧಾವಿಸಿದ ಅಗ್ನಿಶಾಮಕ ಯಂತ್ರಗಳ ಮೂಲಕ ವಿಮಾನವನ್ನು ಹಗ್ಗದಿಂದ ಕಟ್ಟಲಾಯಿತು. ಬೆಂಕಿಯನ್ನು ಕ್ಷಿಪ್ರವಾಗಿ ನಂದಿಸಲಾಯಿತು. ಈ ನಡುವೆ, ಈ ಮೂರು ಕೆಂಪು ಕಲ್ಲುಗಳ ಪೈಕಿ ಒಂದು ದಡ್ಡನೆ ಸದ್ದಿನೊಂದಿಗೆ ಒಳ ನುಗ್ಗಿತು. ಅದೃಷ್ಟವೇ ಬಾಯ್ದೆರೆದಂತೆ ತುರ್ತು ನಿರ್ಗಮನ ಬಾಗಿಲಿನ ಎಡಪಾರ್ಶ್ವ ತೆರೆದುಕೊಂಡಿತು.

ಒಂದು ವೇಳೆ ಬಲಪಾರ್ಶ್ವ ತೆರೆದುಕೊಂಡಿದ್ದರೆ ಪ್ರಯಾಣಿಕರೆಲ್ಲ ಪ್ರಪಾತಕ್ಕೆ ಉರುಳಬೇಕಾಗಿತ್ತು. ಪೈಲಟ್‌ ಜಿಗಿದಾಗಿತ್ತು. ಗಗನ ಸಖಿಯರೆಲ್ಲ ರೆಕ್ಕೆಯ ಕೆಳಗಿದ್ದರು. ಬಳಿಕ ಪ್ರಯಾಣಿಕರು ಒಬ್ಬೊಬ್ಬರಾಗಿ ಕೆಳಗುರುಳಿದರು. ಎಡಪಕ್ಕದಲ್ಲಿದ್ದ ಕಲ್ಲು ಈ ಪ್ರಯಾಣಿಕರ ರಕ್ಷಣೆಗೇ ಕಾದುಕುಳಿತಂತಿತ್ತು. ಬಳಿಕ ಭಾರತ ಸರಕಾರವು ಮಂಗಳೂರಿಗೆ ಆವ್ರೋ ವಿಮಾನ ಸೇವೆಯನ್ನೇ ರದ್ದುಪಡಿಸಿತು. ಅಪಘಾತಕ್ಕೀಡಾದ ವಿಮಾನವನ್ನು ಸ್ವಲ್ಪಕಾಲದ ನಂತರ ಏಲಂ ಮಾಡಲಾಯಿತು.

(ಎಂ. ವೀರಪ್ಪ ಮೊಯಿಲಿ ಅವರ “ಎಲ್ಲಿ ಮನ ಕಳುಕಿರದೊ’ ಎಂಬ ಜೀವನ ಕಥನದಿಂದ)

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next