ಚನ್ನಮ್ಮ ಕಿತ್ತೂರು: ನಟ ಯಶ್ ಹಾಗೂ ನಟಿ ರಾಧಿಕಾ ದಂಪತಿಗೆ ನಟ ದಿ.ಅಂಬರೀಶ್ ಆಶಯದಂತೆ ಸಂಪಗಾಂವ ಗ್ರಾಮದ ಉದ್ಯಮಿ ನಾರಾಯಣ ಕಲಾಲ ಅವರು ಚಿತ್ತಾರದ ತೊಟ್ಟಿಲನ್ನು ಸಮರ್ಪಿಸುತ್ತಿದ್ದು, ಇದು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬೆಸುಗೆಗೆ ಸಾಕ್ಷಿಯಾಗಿದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಹೇಳಿದರು.
ಶನಿವಾರ ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿ ನಡೆದ ಯಶ್-ರಾಧಿ ಕಾ ದಂಪತಿಗೆ ತೊಟ್ಟಿಲು ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಚನ್ನಮ್ಮಾಜಿಯ ತ್ಯಾಗ-ಬಲಿದಾನ, ದೇಶಪ್ರೇಮ ಮೈಗೂಡಿಸಿಕೊಂಡು ಬೆಳೆಯಲೆಂಬ ಉದ್ದೇಶದಿಂದ ಐತಿಹಾಸಿಕ ಕಿತ್ತೂರು ನಾಡಿನಿಂದ ತೊಟ್ಟಿಲನ್ನು ಕೆಂಪೇಗೌಡರ ನಾಡಿಗೆ ಕಳುಹಿಸಲಾಗುತ್ತಿದೆ ಎಂದರು.
ಉದ್ಯಮಿ ನಾರಾಯಣ ಕಲಾಲ ಮಾತನಾಡಿ, ಅಂಬರೀಶ್ ಅವರ ಆಸೆಯನ್ನು ನಾನು ಈಡೇರಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಚನ್ನಮ್ಮಾಜಿ ನಾಡಿನಿಂದಲೇ ಕಳುಹಿಸುತ್ತಿರುವುದು ಇನ್ನೊಂದು ವಿಶೇಷವಾಗಿದೆ. ನಾನೇ ಖುದ್ದಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಸುಮಲತಾ ಅಂಬರೀಶ್ ಅವರಿಗೆ ತೊಟ್ಟಿಲು ಅರ್ಪಿಸುತ್ತೇನೆ. ಬಳಿಕ ಅವರು ಯಶ್-ರಾ ಧಿಕಾ ದಂಪತಿಗೆ ಅರ್ಪಿಸುತ್ತಾರೆ ಎಂದರು.
ತೊಟ್ಟಿಲು ಕುಶಲಕರ್ಮಿ ಕಲಘಟಗಿಯ ಶ್ರೀಧರ ಸಾಹುಕಾರ ಮಾತನಾಡಿ, ಮಗು ದೇವರ ಸನ್ನಿ ಧಿಯಲ್ಲಿ ಆಡುತ್ತ ಬೆಳೆಯಲೆಂಬ ಉದ್ದೇಶದಿಂದ ತೊಟ್ಟಿಲ ತುಂಬೆಲ್ಲ ಶ್ರೀಕೃಷ್ಣ ಅವತಾರ ಹಾಗೂ ದಶಾವತಾರದ ಚಿತ್ರಗಳನ್ನು ಕಟ್ಟಿಗೆಯಲ್ಲಿ ಕೆತ್ತಲಾಗಿದೆ. ಸಾಗವಾನಿ ಕಟ್ಟಿಗೆಯಿಂದ ತೊಟ್ಟಿಲು ತಯಾರಿಸಲಾಗಿದೆ ಎಂದರು.
ಚನ್ನಮ್ಮಾ ವೇದಿಕೆ ಮಹಿಳಾ ಸದಸ್ಯರಾದ ಮಹಾದೇವಿ ಕುಪ್ಪಸಗೌಡರ, ರಾಜೇಶ್ವರಿ ಕುಪ್ಪಸಗೌಡರ, ಕಾವ್ಯ ಅಬ್ಟಾಯಿ, ಲಕ್ಷ್ಮೀ ಕುಪ್ಪಸಗೌಡರ, ಜಿಲ್ಲಾ ನಿಕಟಪೂರ್ವ ಕಸಾಪ ಅಧ್ಯಕ್ಷ ಯ.ರು.ಪಾಟೀಲ ಹಾಗೂ ನೂರಾರು ಯಶ್ ಅಭಿಮಾನಿಗಳು ಉಪಸ್ಥಿತರಿದ್ದರು.