ಚಿಕ್ಕಜಾಜೂರು: ಸಮೀಪದ ಚಿಕ್ಕಂಡವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಹುತೇಕ ಕೊಠಡಿಗಳಲ್ಲಿ ಗೋಡೆ ಬಿರುಕು
ಬಿಟ್ಟಿದೆ. ಇದರಿಂದ ಮಳೆಗಾಲದಲ್ಲಿ ನೀರು ತರಗತಿಯೊಳಗೆ ಬರುತ್ತಿದೆ. ಆದ್ದರಿಂದ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.
ಸರ್ಕಾರಿ ಪ್ರೌಢಶಾಲಾ ಕಟ್ಟಡವನ್ನು 2007ರಲ್ಲಿ ನಿರ್ಮಿಸಲಾಗಿದೆ. 9 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಹಾಗೂ ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಪ್ರತಿ ವರ್ಷ ಉತ್ತಮ ಫಲಿತಾಂಶವೂ ಬರುತ್ತಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾದ ಮತ್ತು ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಕೊಡಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ಮೂರ್ತಿ, ರುದ್ರೇಶ್, ಜಗದೀಶ್, ಅಜ್ಜಪ್ಪ, ಗುರುಸ್ವಾಮಿ, ಎಸ್.ಈ. ನಾಗರಾಜ್, ನಿವೃತ್ತ ಇಂಜಿನಿಯರ್ ಈಶ್ವರಪ್ಪ ಮೊದಲಾದವರು ಒತ್ತಾಯಿಸಿದ್ದಾರೆ.
ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ತಮ್ಮ ಅನುದಾನದಲ್ಲಿ ಶಾಲೆಗೆ ಎರಡು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು 16 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಶಾಸಕರೊಂದಿಗೆ ಚರ್ಚಿಸಿ ಈಗ ಬಿಡುಗಡೆಯಾಗಿರುವ ಅನುದಾನದ ಜೊತೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಬೇಕು ಮತ್ತು ಹಳೆ ಶಾಲಾ ಕಟ್ಟಡದ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸುವಂತೆ ಮನವಿ ಮಾಡುವುದಾಗಿ ಬಿಜೆಪಿ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಆನಂದಪ್ಪ ತಿಳಿಸಿದರು.
ಪ್ರೌಢಶಾಲೆಯಲ್ಲಿ ಸದ್ಯ 100 ವಿದ್ಯಾರ್ಥಿಗಳಿದ್ದು, ಮಳೆ ಬಂದಾಗ ಶಾಲೆಯ ಎಲ್ಲ ನಾಲ್ಕು ಕೊಠಡಿಗಳಲ್ಲೂ ಮಳೆ ನೀರು ಗೋಡೆಯ ಮೂಲಕ ತರಗತಿಯೊಳಗೆ ಬರುತ್ತಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಮಾಡುವ ಮತ್ತು
ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಕೆ.ಟಿ. ತಿಮ್ಮಪ್ಪ, ಮುಖ್ಯ ಶಿಕ್ಷಕರು.