ಏಡಿ ಸಂತೆ… ಗೋಕಾಕ್ ಹೊಳೆ ಹರಿದು ಬಂತೆಂದರೆ, ಬೆಳಗಾವಿ ಮಾರ್ಕೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಏಡಿಗಳು ಲಗ್ಗೆ ಇಟ್ಟಂತೆಯೇ ಲೆಕ್ಕ. ಆರೋಗ್ಯದಾಯಕ, ರುಚಿರುಚಿ ಏಡಿ ಇಲ್ಲಿನವರ ಆಹಾರಲೋಕದಲ್ಲಿ ಪ್ರಮುಖ ಭಾಗವೇ ಆಗಿದೆ. ಈ ಏಡಿ ಸಂತೆ ಬೆಳಗಾವಿ ಹಳ್ಳಿಗರ ಕಿಸೆ ತುಂಬಿಸಿದೆ…
ಮಳೆಗಾಲ! ನಿಸರ್ಗದ ತಂಪು ವೃಷ್ಟಿ. ಈ ಋತು ಕೆಲವರಿಗೆ ಹನಿ, ಮತ್ತೆ ಕೆಲವರಿಗೆ ಮನಿ. ಅದರಲ್ಲೂ ರೈತರಿಗೆ ಈ ಋತು ಬದುಕು ಕಟ್ಟಿಕೊಡುತ್ತೆ. ಬೆಳಗಾವಿಯ ರೈತಾಪಿ ವರ್ಗದ ಮಾಂಸಪ್ರಿಯರು ಮಳೆಗಾಲದಲ್ಲಿ ವಿಶೇಷ ಬ್ಯುಸಿನೆಸ್ ಆರಂಭಿಸುತ್ತಾರೆ. ಅದೇ ಏಡಿ ಸಂತೆ. ಗೋಕಾಕ್ ಹೊಳೆ ಹರಿದು ಬಂತೆಂದರೆ, ಬೆಳಗಾವಿ ಮಾರ್ಕೆಟ್‌ಗೆ ದೊಡ್ಡ ಪ್ರಮಾಣದಲ್ಲಿ ಏಡಿಗಳು ಲಗ್ಗೆ ಇಟ್ಟಂತೆಯೇ ಲೆಕ್ಕ. ಆರೋಗ್ಯದಾಯಕ, ರುಚಿರುಚಿ ಏಡಿ ಇಲ್ಲಿನವರ ಆಹಾರಲೋಕದಲ್ಲಿ ಪ್ರಮುಖ ಭಾಗವೇ ಆಗಿದೆ.
ಉಪ ಕಸುಬು : ಬೆಳಗಾವಿಯ ಗೋಕಾಕ್, ಘಟಪ್ರಭಾ, ರಾಯಭಾಗ, ಅರಬಾವಿ, ಮುನ್ನೋಳಿ…- ಹೀಗೆ ಹತ್ತಾರು ಭಾಗದ ನೂರಾರು ಶ್ರಮಿಕ ಕುಟುಂಬಗಳಿಗೆ ಈ ದಿನಗಳಲ್ಲಿ ಏಡಿಸಂತೆ ಒಂದು ಉಪ ಕಸುಬು. ಶೂನ್ಯ ಬಂಡವಾಳದಲ್ಲಿ ಗುಡ್ಡ, ಹೊಳೆ, ಹಳ್ಳ, ಕಾಲುವೆಗಳಿಗೆ ಬುಟ್ಟಿಗಳನ್ನು ಇಟ್ಟು ಏಡಿ ಹಿಡಿದು ತಂದು ಮಾರುವುದು ಇಲ್ಲಿನವರ ದಿನಚರಿ. ವಿಶೇಷವಾಗಿ ಮಳೆಗಾಲದಲ್ಲಿ ಸಿಕ್ಕಾಪಟ್ಟೆ ಏಡಿಗಳು ಸಿಗುವುದು ಹಾಗೂ ಅಷ್ಟೇ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಈ 2-3 ತಿಂಗಳು ಒಳ್ಳೆಯ ವ್ಯಾಪಾರವೂ ಆಗುತ್ತೆ.
ವ್ಯಾಪಾರ ಆರಂಭ ಹೀಗೆ… : ನೂರಕ್ಕೂ ಹೆಚ್ಚು ಜನರು ಅದರಲ್ಲೂ ಮಹಿಳೆಯರು ಬೆಳ್ಳಂಬೆಳಗ್ಗೆ ನಗರದ ನಾರ್ಥ್ ಟೆಲಿಗ್ರಾಫ್ ರೋಡ್, ಫಿಶ್ ಮಾರ್ಕೆರ್ಟ್, ಕಾಸಬಾಗ್ ಸರ್ಕಲ್, ರೈಲ್ವೇ ಸ್ಟೇಷನ್ ಸ್ಥಳಗಳಲ್ಲಿ ಏಡಿ ತುಂಬಿದ ಚೀಲಗಳೊಂದಿಗೆ ವ್ಯಾಪಾರಕ್ಕೆ ಇಳಿಯುತ್ತಾರೆ. ಚಟ್ ಚಟ್ ಅಂತ ಏಡಿಯ ಕಾಲುಗಳನ್ನು ಮುರಿಯುತ್ತ, ಸತ್ತ ಏಡಿಗಳನ್ನು ಚೀಲದಿಂದ ಆರಿಸಿ ಎಸೆಯುತ್ತ ಕೈಗಳಲ್ಲಿ ಗನ್ ಹಿಡಿದಂತೆ ಏಡಿ ಹಿಡಿದು “ಓ ಭಯ್ಯಾ ಇಲ್ಲಿ ಬಾ… ಶಂಭ ರುಪಾಯಿಗೆ ಜೋಡಿ ಕೇಕಡಾ ಏಡಿ’ ಎನ್ನುತ್ತಾ ಗಿರಾಕಿಗಳನ್ನು ಪೈಪೋಟಿಗೆ ಬಿದ್ದು ತಮ್ಮತ್ತ ಸೆಳೆಯುತ್ತಾರೆ. ವಾರಪೂರ್ತಿ ಏಡಿ ಮಾರ್ಕೆಟ್ ನಡೆದ್ರೂ ವಿಶೇಷವಾಗಿ ಭಾನುವಾರ, ಮಂಗಳವಾರ, ಬುಧವಾರ ಖರೀದಿದಾರರಿಂದ ತುಂಬಿ ಹೋಗಿರುತ್ತೆ. ಬಿಸಿಲು ಏರಿದಂತೆ ವ್ಯಾಪಾರ ರಂಗೇರಿ, ಬಿಸಿಲು ತಗ್ಗಿದಂತೆ ವ್ಯಾಪಾರವೂ ಕರಗುತ್ತದೆ. ಸರಿಸುಮಾರು ನಾಲ್ಕೈದು ಗಂಟೆಯಷ್ಟೆ ವ್ಯಾಪಾರ ನಡೆದು ಆಮೇಲೆ ಸ್ತಬ್ಧ ಆಗಿಬಿಡುತ್ತೆ.
ಮೀನಿಗಿಂತ ಏಡಿಗೇ ಡಿಮ್ಯಾಂಡ್ : ಈ ದಿನಗಳಲ್ಲಿ ಮೀನು, ಇತರೆ ಮಾಂಸಕ್ಕೆ ಅಷ್ಟಾಗಿ ಬೇಡಿಕೆ ಇರೋದಿಲ್ಲ. ಜನ ಸೀಸನ್ ಫುಡ್ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಮಳೆಗಾಲ ಆರಂಭದ ಎರಡು ತಿಂಗಳು ಸ್ವಾದಿಷ್ಟಕರವಾದ ಮೋಟ ದಪ್ಪ ಕಲ್ಲು ಏಡಿಗೆ ಹೆಚ್ಚು ಡಿಮ್ಯಾಂಡ್ ಕುದುರುತ್ತದೆ. ಏಡಿಗಳನ್ನು ಜೋಡಿ ಲೆಕ್ಕದಲ್ಲಿ ಮಾರಲಾಗುತ್ತೆ. ಬೇಡಿಕೆ ಹೆಚ್ಚಿದ್ದರೆ, ಹವಾಮಾನ ವೈಪರಿತ್ಯದಿಂದ ಮೀನಿನ ಅಭಾವ ಆದಾಗ ಏಡಿಗಳ ಬೆಲೆ ಹೆಚ್ಚಾಗುತ್ತೆ. ಏಡಿಗಳ ಗಾತ್ರದ ಮೇಲೆ ದರ ಇರುತ್ತೆ. ಜೋಡಿ ಏಡಿಗೆ ಸರಾಸರಿ 80 ರಿಂದ 150ರವರೆಗೆ ರೇಟ್ ಇದೆ. ಬೇಸಿಗೆಯಲ್ಲಿ ಏಡಿಗಳಿಗೆ ಬರ ಇರುವ ಕಾರಣ ಜೋಡಿ ಏಡಿಗಳ ಬೆಲೆ ಅಂದಾಜು 150- 180 ಇರುತ್ತದೆ. ಬೆಳಗಾವಿ ಅಷ್ಟೆ ಅಲ್ಲ, ಹುಬ್ಬಳ್ಳಿ- ಧಾರವಾಡ, ಗುಲ್ಬರ್ಗಾ, ಗೋವಾ, ಮುಂಬೈ, ಪೂನಾ… ಹೀಗೆ ಅನ್ಯ ಜಿಲ್ಲೆ, ರಾಜ್ಯಗಳಿಗೂ ಬೆಳಗಾವಿ ಏಡಿ ಪೂರೈಕೆ ಆಗುತ್ತೆ.
ಕೋವಿಡ್ ಗೆ ರಾಮಬಾಣ! : ಏಡಿ ತಿಂದ್ರೆ ಜ್ವರ, ಕೆಮ್ಮು ಹಾಗೂ ನೆಗಡಿ ಹತ್ತಿರ ಸುಳಿಯಲ್ಲ ಎನ್ನುವುದು ಗ್ರಾಮೀಣರ ನಂಬಿಕೆ. ಅದರಲ್ಲೂ ಮಳೆಗಾಲದಲ್ಲಿ ಈ ಕಾಯಿಲೆಗಳು ಸಾಮಾನ್ಯ. ಇದಕ್ಕೆಲ್ಲ ಏಡಿಯೇ ರಾಮಬಾಣ ಎನ್ನುತ್ತಾರೆ ಇಲ್ಲಿನವರು. ಏಡಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಎನ್ನುವ ನಂಬಿಕೆಯೂ ಇದೆ. ಹೀಗಾಗಿ ಕೋವಿಡ್ ಕಾರಣಕ್ಕೆ ಸಹಜವಾಗಿ ಈ ಬಾರಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
-ಸ್ವರೂಪಾನಂದ ಎಂ. ಕೊಟ್ಟೂರು