Advertisement

ಸಿಪಿಐ ಅನುಚಿತ ವರ್ತನೆ; ವಕೀಲರ ದಿಢೀರ್‌ ಪ್ರತಿಭಟನೆ

10:05 AM Nov 01, 2022 | Team Udayavani |

ಧಾರವಾಡ: ಮಹಿಳಾ ವಕೀಲರೊಬ್ಬರ ಜೊತೆ ಪೊಲೀಸ್‌ ಅಧಿಕಾರಿ ಅನುಚಿತವಾಗಿ ವರ್ತಿಸಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಸೋಮವಾರ ವಕೀಲರು ದಿಢೀರ್‌ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸುಗಲ್ಲ ಅವರ ಮೇಲೆ ಈ ಆರೋಪ ಕೇಳಿಬಂದಿದೆ. ಅ.28ರಂದು ಪ್ರಕರಣವೊಂದರ ಮಾಹಿತಿಗಾಗಿ ಮಹಿಳಾ ವಕೀಲರೊಬ್ಬರು ಠಾಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಿಪಿಐ ಅವರ ಕಚೇರಿಯಲ್ಲಿ ಮಹಿಳಾ ವಕೀಲರು ಒಬ್ಬರೇ ಇದ್ದ ಸಮಯದಲ್ಲಿ ಅವರ ಜೊತೆ ಅನುಚಿತವಾಗಿ ವರ್ತಿಸಿರುವ ಸಿಪಿಐ ಮಂಜುನಾಥ ಕುಸುಗಲ್ಲ ಅವರನ್ನು ಕೂಡಲೇ ಅಮಾನತು ಮಾಡಬೇಕು. ಅವರ ವಿರುದ್ಧ ಈಗಾಗಲೇ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ಕುಸುಗಲ್ಲರನ್ನು ಬಂಧಿಸಬೇಕು ಎಂದು ವಕೀಲರು ನಗರದ ಜ್ಯುಬಿಲಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

ಯಾರ ಮಾತಿಗೂ ಜಗ್ಗದ ವಕೀಲರು: ಹಿರಿಯ ಪೊಲೀಸ್‌ ಅಧಿಕಾರಿಗಳು ವಕೀಲರ ಮನವೊಲಿಸಲು ಮುಂದಾದರೂ ಸ್ಪಂದಿಸದ ವಕೀಲರು, ಕ್ರಮ ಜರುಗಿಸಿದ ಬಳಿಕವೇ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟುಹಿಡಿದರು. ಡಿಸಿಪಿ ರಾಕೇಶ ಬಾಗ್ಲಾ ಸ್ಥಳಕ್ಕೆ ಆಗಮಿಸಿ ವಕೀಲರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲು ಯತ್ನಿಸಿದರು. ಆದರೆ, ವಕೀಲರು ತಮ್ಮ ಪಟ್ಟು ಸಡಿಲಿಸದ ಪರಿಣಾಮ ಮಧ್ಯಾಹ್ನ 3 ಗಂಟೆ ವರೆಗೂ ಪ್ರತಿಭಟನೆ ಮುಂದುವರಿಯಿತು.

ಎಸ್‌ಪಿಗೆ ದೂರು: ನಂತರ ವಕೀಲರ ಸಂಘದ ಸದಸ್ಯರು ಉಪನಗರ ಠಾಣೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥ ಪೊಲೀಸ್‌ ಅಧಿಕಾರಿ ವಿರುದ್ಧ ಎಫ್‌ಐಆರ್‌ ಮಾಡುವಂತೆ ಒತ್ತಾಯಿಸಿದರು. ಬಳಿಕ ಎಫ್‌ಐಆರ್‌ ದಾಖಲಾಗಿದ್ದರಿಂದ ಎಸ್ಪಿ ಕಚೇರಿಗೆ ತೆರಳಿ ತಪ್ಪಿತಸ್ಥ ಅಧಿಕಾರಿ ಮಂಜುನಾಥ ಕುಸುಗಲ್‌ ಅವರನ್ನು ಅಮಾನತು ಮಾಡುವಂತೆ ಮನವಿ ಸಲ್ಲಿಸಿದರು. ಎಸ್‌ಪಿ ಲೋಕೇಶ ಜಗಲಾಸರ್‌ ಅವರು ಪ್ರಕರಣದ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ತಪ್ಪಿತಸ್ಥ ಅಧಿಕಾರಿಯನ್ನು ಮಂಗಳವಾರ ಅಮಾನತು ಮಾಡದಿದ್ದರೆ ಬುಧವಾರ ಮತ್ತೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ವಕೀಲರು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್‌.ಪೊಲೀಸ್‌ ಪಾಟೀಲರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಹಿರಿ-ಕಿರಿಯ ವಕೀಲರು ಭಾಗವಹಿಸಿದ್ದರು.

Advertisement

ಸವಾರಗೆ ಗೂಸಾ ವಿಡಿಯೋ ವೈರಲ್‌

ಜ್ಯುಬಿಲಿ ವೃತ್ತದಲ್ಲಿ ವಕೀಲರು ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ಮಧ್ಯಾಹ್ನ 3 ಗಂಟೆ ವರೆಗೂ ಪ್ರತಿಭಟನೆಯ ಪ್ರಭಾವದಿಂದ ಜ್ಯುಬಿಲಿ ವೃತ್ತ, ಕೋರ್ಟ್‌ ವೃತ್ತ, ಮಾರುಕಟ್ಟೆ ಮತ್ತು ಬಸ್‌ ನಿಲ್ದಾಣದ ಪ್ರದೇಶ, ಹಳೆ ಎಸ್‌ಪಿ ಕಚೇರಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ವಿದ್ಯಾರ್ಥಿಗಳು ಬಸ್‌ನಲ್ಲೇ ಹಸಿದು ಕುಳಿತುಕೊಳ್ಳುವಂತಾಯಿತು. ಪ್ರತಿಭಟನೆ ಸಂದರ್ಭದಲ್ಲಿ ಕೆಲ ಯುವ ವಕೀಲರು ವಾಹನ ಸವಾರನೊಬ್ಬನಿಗೆ ಗೂಸಾ ಕೊಟ್ಟಿರುವುದು ಹಾಗೂ ಪ್ರತಿಭಟನೆಯಿಂದ ದಾಟಿಕೊಂಡು ಹೋಗಲು ಯತ್ನಿಸಿದಾತನಿಗೆ ಅವಾಜ್‌ ಹಾಕಿದ ವಿಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next