Advertisement

ಹೆಸರು-ಉದ್ದು ಖರೀದಿ ಕೇಂದ್ರ ಆರಂಭಿಸಲು ಆಗ್ರಹ

04:01 PM Sep 09, 2020 | Suhan S |

ಚಿಂಚೋಳಿ: ತಾಲೂಕಿನಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಪ್ರಾರಂಭಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸುಲೇಪೇಟ ಗ್ರಾಮದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆಗೆ ಹೆಸರು ಕಾಳು ಚೆಲ್ಲಿ ಎತ್ತುಗಳೊಂದಿಗೆ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ತೊಗರಿ ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ. ಇದರಿಂದಾಗಿ ರೈತರ ಜೀವನ ದಿವಾಳಿಯಾಗುತ್ತಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಣೆ ಮೂಲಕ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

ಮುಂಗಾರು ಬಿತ್ತನೆಗೋಸ್ಕರವಾಗಿ ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಂಡಿರುವ ರೈತರ ಸಾಲಮನ್ನಾ ಮಾಡದೇ ರೈತ ವಿರೋಧಿ  ನೀತಿ ಅನುಸರಿಸುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ರೈತರಿಗೆ ಅತಿವೃಷ್ಟಿಯಿಂದ ಉಂಟಾದ ಹಾನಿಯ ಕುರಿತು ವಿಶೇಷ ಪ್ಯಾಕೇಜ್‌ನಲ್ಲಿ ಪರಿಹಾರ ಘೋಷಣೆ ಮಾಡಬೇಕು. ಮುಲ್ಲಾಮಾರಿ ಜಲಾಶಯದಿಂದ ಏಕಕಾಲಕ್ಕೆ ಹಠಾತ್ತನೆ 25 ಸಾವಿರ ಕ್ಯೂಸೆಕ್‌ ನೀರನ್ನು ರಾತೋರಾತ್ರಿ ಹರಿದು ಬಿಟ್ಟಿದ್ದರಿಂದ ವಿವಿಧ ಬೆಳೆಗಳು ಮತ್ತು ಪಂಪ್‌ಸೆಟ್‌ ಗಳು ಕೊಚ್ಚಿಕೊಂಡು ಹೋಗಿವೆ. ಸರಕಾರ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಇನ್ನುವರೆಗೆ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣಮಂತ ಪೂಜಾರಿ, ಮೋಹಿನ ಮೋಮಿನ ಸುಲೇಪೇಟ, ಪ್ರದೀಪ ತಿರಲಾಪುರ, ಪರಮೇಶ್ವರ ಕಾಂತಾ, ತುಳಜಪ್ಪ ಮೋಘಾ, ಮಹಮ್ಮದ ಶಬ್ಬೀರ ತೇಗಲತಿಪ್ಪಿ, ದೌಲಪ್ಪ ಕೊಡಂಪಳ್ಳಿ ಇದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸುಲೇಪೇಟ ನಾಡ ಕಚೇರಿ ಉಪತಹಶೀಲ್ದಾರ್‌ ರಘುನಾಥ ಅವರಿಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next