ಹುಬ್ಬಳ್ಳಿ: ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿ.ಪಿ. ಯೋಗೇಶ್ವರ (C P Yogeshwar) ಅವರು, ಚನ್ನಪಟ್ಟಣ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು. ಆದರೆ ಸ್ವತಂತ್ರವಾಗಿಯೋ, ಯಾವ ಪಕ್ಷದಿಂದ ಎಂಬುದು ಇನ್ನು ಅಂತಿಮಗೊಂಡಿಲ್ಲ. ಆದರೆ ಸ್ಪರ್ಧೆ ಮಾತ್ರ ಖಚಿತ ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಅವರ ಗೃಹ ಕಚೇರಿಯಲ್ಲಿ ರಾಜೀನಾಮೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ನಾನು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ಇನ್ನು ಎರಡ್ಮೂರು ದಿನಗಳ ಅವಕಾಶವಿದೆ. ಬಿಜೆಪಿಯ ಬಗ್ಗೆ ಆಶಾಭಾವನೆ ಇದೆ. ಹೈಕಮಾಂಡ್ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಒಂದು ವೇಳೆ ನಾಳೆ ಏನಾದರೂ ಆಗಬಹುದು” ಎಂದರು.
ಇದು ಬಿಜೆಪಿಗೆ ಬ್ಲ್ಯಾಕ್ ಮೆಲ್ ತಂತ್ರವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದರಲ್ಲಿ ಬ್ಲ್ಯಾಕ್ ಮೇಲ್ ಏನಿದೆ. ಸಾರ್ವಜನಿಕ ಜೀವನದಲ್ಲಿ ಇರುವವನು ನಾನು. ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಸಲು ಕೊನೆ ದಿನ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವ ಇಚ್ಛೆಯಿದೆ. ಅದಕ್ಕಾಗಿ ಟಿಕೆಟ್ ಕೊಡಲಿ. ಎಲ್ಲ ಮುಖಂಡರು ನನಗೆ ಪರವಾಗಿದ್ದಾರೆ” ಎಂದರು.
“ಜೆಡಿಎಸ್‌ನಿಂದ ಸ್ಪರ್ಧೆಸುವ ಇಚ್ಛೆ ತಮಗಿಲ್ಲ. ಕಳೆದ 20 ವರ್ಷದಿಂದ ಜೆಡಿಎಸ್ ವಿರುದ್ಧವಾಗಿ ರಾಜಕಾರಣ ಮಾಡುತ್ತಾ ಬಂದಿರುವೆ. ಅವರ ಕಾರ್ಯಕರ್ತರು ಒಪ್ಪವುದಿಲ್ಲ. ನಮ್ಮ ಕಾರ್ಯಕರ್ತರು ಒಪ್ಪುವುದಿಲ್ಲ. ಹೀಗಾಗಿ ಜೆಡಿಎಸ್‌ನೊಂದಿಗೆ ಸ್ಪರ್ಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಏನು ಹೇಳುವುದಕ್ಕೆ ಆಗುವುದಿಲ್ಲ. ಆದರೆ ಈವರೆಗೂ ಕಾಂಗ್ರೆಸ್ಸಿಗರು ತಮ್ಮನ್ನು ಸಂಪರ್ಕಿಸಿಲ್ಲ. ನಾಳೆ ಏನೋ ಗೊತ್ತಿಲ್ಲ ಎಂದು ತಿಳಿಸುವ ಮೂಲಕ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದರು.