Advertisement

ದನದ ಕೊಟ್ಟಿಗೆಯಿಂದ ಏಷ್ಯನ್‌ ಗೇಮ್ಸ್‌ವರೆಗೆ 

10:35 AM Aug 18, 2018 | Team Udayavani |

ಈಕೆ ಅಂತಿಥ ಹುಡುಗಿಯಲ್ಲ. ಸಣ್ಣ ವಯಸ್ಸಿಗೆ ಜೀವನದ ಎಲ್ಲ ಕಷ್ಟನಷ್ಟಗಳನ್ನು ಅನುಭವಿಸಿ ಇದೀಗ ಏಷ್ಯನ್‌ ಗೇಮ್ಸ್‌ ವೇಗದ ನಡಿಗೆ (ರೇಸ್‌ ವಾಕ್‌) ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷ್ಯಾಕ್ಕೆ ತೆರಳಿರುವ ಅಪ್ರತಿಮ ಸಾಧಕಿ. ಸದ್ಯ ಬೆರಗು ಕಣ್ಣಿನ ಹುಡುಗಿಗೆ ವಾಕ್‌ ರೇಸ್‌ ಚಾಲೆಂಜ್‌ ಗೆದ್ದು ಇತಿಹಾಸ ಸೃಷ್ಟಿಸುವ ಹೆಬ್ಬಯಕೆ ಇದೆ. ಹೆಸರು ಖುಷ್‌ಬೀರ್‌ ಕೌರ್‌. ವಯಸ್ಸು 25, ಪಂಜಾಬ್‌ ಮೂಲದವರು. ಈ ಬಾರಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಈಕೆಯ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 

Advertisement

ಕಲ್ಲುಮುಳ್ಳಿನ ಹಾದಿ
ಖುಷ್‌ಬೀರ್‌ ಸಾಧನೆ ಮೆಟ್ಟಿಲು ಹೂವಿನ ಹಾದಿಯಾಗಿರಲಿಲ್ಲ. ಅವರ ಎದುರು ಇದ್ದಿದ್ದು ಬೆಟ್ಟದಂತಹ ಸವಾಲು. ಕಲ್ಲು-ಮುಳ್ಳಿನ ಹಾದಿ. ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಹ ಜೀವನ. ಹೌದು, ಆಗಿನ್ನೂ ಖುಷ್‌ಬೀರ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರಲಿಲ್ಲ. ಆಗಷ್ಟೇ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸಿದ್ದರು. ಅವರ ಮನೆಯ ಪರಿಸ್ಥಿತಿ ಹೇಗಿತೆಂದರೆ ಅವರಿಗೆ ಇದ್ದ ಸ್ವಂತ ಸೂರು ಮಳೆ ಬಂದರೆ ಸೋರುತ್ತಿತ್ತು. ಬೇರೆ ದಾರಿ ಇಲ್ಲದ ಇವರು ದನದ ಕೊಟ್ಟಿಗೆಯಲ್ಲ ವಾಸ ಮಾಡಬೇಕಾಗಿತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ. ಬೆಳಿಗ್ಗೆ ತಿಂದರೆ ಮತ್ತೆ ಮಧ್ಯಾಹ್ನ, ರಾತ್ರಿ ಉಪವಾಸ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಹುಡುಗಿ ಖುಷ್‌ಬೀರ್‌.

ಬದುಕು ಬದಲಿಸಿದ ವೇಗದ ನಡಿಗೆ
 ಖುಷ್‌ಬೀರ್‌ ರಾಷ್ಟ್ರೀಯ ಕೂಟದ ವೇಗದ ನಡಿಗೆ ಸ್ಪರ್ಧೆಯಲ್ಲಿ ಹಲವು ಪದಕ ಗೆದ್ದಿದ್ದರೂ ಅವರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. 2014ರಲ್ಲಿ ಅವರು ಇಂಚಾನ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಇವರ ಹೆಸರು ಎಲ್ಲ ಮಾಧ್ಯಮಗಳಲ್ಲಿ ಪ್ರಸಾರಗೊಂಡವು. ದೇಶದಾದ್ಯಂತ ಅಮೃತಸರದ ಹುಡುಗಿ ಸುದ್ದಿಯಾದರು. ಸನ್ಮಾನ, ಪ್ರಶಸ್ತಿ ಗೌರವಗಳು ಇವರನ್ನು ಬೆನ್ನಟ್ಟಿ ಬಂದವು. ಕೆಲವು ಗಂಟೆಗಳಲ್ಲೆ ಇವರ ಬಡತನದ ದಿನಗಳು ಸಾಧನೆ ಅಲೆಯಲ್ಲಿ ಕೊಚ್ಚಿ ಇತಿಹಾಸದ ಪುಟ ಸೇರಿದವು. 

ಪಂಜಾಬ್‌ ಪೊಲೀಸ್‌ನ ಡಿಎಸ್‌ಪಿ: ಖುಷ್‌ಬೀರ್‌ ಏಷ್ಯನ್‌ ಗೇಮ್ಸ್‌ ಸಾಧನೆ ಪರಿಗಣಿಸಿ ಪಂಜಾಬ್‌ ಸರ್ಕಾರ ಅವರಿಗೆ ಡಿಪ್ಯೂಟಿ ಸೂಪರ್‌ಡೆಂಟ್‌ ಆಫ್ ಪೊಲೀಸ್‌ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಿದೆ. 

ಖುಷ್‌ಬೀರ್‌ ಸಾಧನೆಗಳು 
2010ರಲ್ಲಿ ಸಿಂಗಾಪುರದಲ್ಲಿ ನಡೆದ ಕೂಟದ 5 ಸಾವಿರ ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 25 ನಿಮಿಷ, 30.27 ಸಕೆಂಡ್ಸ್‌ಗಳಲ್ಲಿ ಗುರಿ ತಲುಪಿದ ಸಾಧನೆ ಮಾಡಿದರು. 2010ರಲ್ಲಿ ಬೆಂಗಳೂರಿನಲ್ಲಿ ನಡೆದ 10 ಸಾವಿರ ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ 49 ನಿಮಿಷ 21.21 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾಗಿ ಮೆರೆದಿದ್ದರು. ಇದಾದ ಬಳಿಕ ಇವರು 2014ರ ಏಷ್ಯನ್‌ ಗೇಮ್ಸ್‌ನಲ್ಲಿ 20 ಕಿ.ಮೀ. ವೇಗದ ನಡಿಗೆಯನ್ನು 1 ಗಂಟೆ 33.07 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next