ಬೇತಮಂಗಲ: ಸರ್ಕಾರಿ ಗೋಶಾಲೆಯಲ್ಲಿ ಹಸು, ಕರುಗಳ ಸಾವಿನಿಂದ ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸಮೀಪದ ಗುಟ್ಟಹಳ್ಳಿ (ಬಂಗಾರು ತಿರುಪತಿ) ಸನ್ನಧಿಯಲ್ಲಿ ಪ್ರಾರಂಭವಾಗಿರುವ ಸರ್ಕಾರಿ ಗೋ ಶಾಲೆಯಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಸು, ಕರುಗಳ ಸಾವಿನಿಂದ ಜನಪ್ರತಿನಿಧಿಗಳು, ಮುಖಂಡರು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.
ಗೋಶಾಲೆ ಪ್ರಾರಂಭದಲ್ಲಿ 27 ಹಸುಗಳಿದ್ದವು. ಬಂಗಾರು ತಿರುಪತಿ ದೇಗುಲಕ್ಕೆ ಭಕ್ತರು ನೀಡುವ ಹಸುಗಳನ್ನು ಈ ಗೋಶಾಲೆಯಲ್ಲೆ ಪೋಷಣೆ ಮಾಡಲಾಗುತ್ತಿತ್ತು. ಆದರೆ, ಗೋ ಶಾಲೆಯಲ್ಲಿ ಅಧಿಕಾರಿಗಳು, ವ್ಯವಸ್ಥಾಪಕರು ಸೂಕ್ತ ನಿರ್ವಹಣೆ ಮಾಡದ ಹಿನ್ನಲೆ ಸುಮಾರು 15ಕ್ಕೂ ಹೆಚ್ಚು ಹಸು, ಕರುಗಳು ಮೃತ ಪಟ್ಟಿರುವುದು ಕಂಡು ಬಂದಿದೆ.
ಮೃತ ಹಸುಗಳು ನಾಯಿ ಪಾಲು: ಮೃತ ಪಟ್ಟಿರುವ ಹಸು, ಕರುಗಳನ್ನು ಸರಿ ಮಣ್ಣು ಮಾಡದ ಹಿನ್ನಲೆ ನಾಯಿಗಳು ಕಿತ್ತು ತಿನ್ನುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳಿಗೆ ತರಾಟೆ: ಕೋಚಿಮಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವರಿಗೆ ಸ್ಥಳೀಯ ರೈತರು ಮಾಹಿತಿ ನೀಡಿದ ಫಲವಾಗಿ, ಅಧಿಕಾರಿಗಳನ್ನು ದೂರವಾಣಿ ಸಂಪರ್ಕದ ಮೂಲಕ ತರಾಟೆಗೆ ತೆಗೆದುಕೊಂಡು, ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಡೀಸಿ ಸೂಚನೆ ಮೆರೆಗೆ ಸ್ಥಳಕ್ಕೆ ಭೇಟಿ ನೀಡಿದ ಪಶು ಸಂಗೋಪನೆ ಇಲಾಖೆ ತುಲಸಿರಾಮ್, ಮುಖಂಡರು ಪ್ರಶ್ನೆಗೆ ಗೋ ಶಾಲೆ ಮಾಹಿತಿ ಕೊರತೆಯಿಂದ ತಡಂ ಬಡಿಸಿದರು. ಸ್ಥಳೀಯ ಪಶು ವೈದ್ಯರಾದ ಪ್ರವೀಣ್ ಅವರ ವಿರುದ್ಧ ಸ್ಥಳೀಯರು ತಿರುಗಿ ಬಿದ್ದರು. ಸ್ಥಳೀಯ ರೈತರು ಪಶು ಸಂಗೋಪನೆ ಇಲಾಖೆ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮಕ್ಕೆ ಡೀಸಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕದ ಮೂಲಕ ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಜಯರಾಮ್ ರೆಡ್ಡಿ, ರೈತರ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರೀಕುಮಾರ್, ಮುಖಂಡರಾದ ಕೃಷ್ಣಾರೆಡ್ಡಿ, ವೆಂಕಟರಾಮ್, ಮಂಜುನಾಥ್, ದೇವಾಲಯ ಇಒ ಸುಬ್ರಮಣಿ, ಪೇಷ್ಕರ್ ಸುರೇಶ್ ಇದ್ದರು.