Advertisement
“ಮನುಷ್ಯರಿಗೆ ಔಷಧ ಕೊಡುವ ವೈದ್ಯರು ಮೇಲು, ಜಾನುವಾರುಗಳಿಗೆ ಔಷಧ ಕೊಡುವ ವೈದ್ಯರು ಕೀಳು ಎಂಬ ಭಾವನೆ ರೂಢಿಗತವಾಗಿ ಬಂದಿದೆ. ಇದು ಸರಿಯಲ್ಲ. ಮನುಷ್ಯರಿಗಾದರೂ ತಮಗಿರುವ ತೊಂದರೆಗಳನ್ನು ಹೇಳಲು ಸಾಧ್ಯವಾಗುತ್ತದೆ. ಮೂಕಪ್ರಾಣಿಗಳಿಗೆ ಇದು ಸಾಧ್ಯವಿಲ್ಲ. ವಾಸ್ತವದಲ್ಲಿ ಮೂಕಪ್ರಾಣಿಗಳಿಗೆ ಔಷಧ ಕೊಡುವವರೇ ಮೇಲು’ ಎಂದು ಸುಮಾರು ಹತ್ತು ವರ್ಷಗಳ ಹಿಂದೆ ಒಂದು ಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದವರು ಸ್ವತಃ ಮನುಷ್ಯರಿಗೆ ಔಷಧ ಕೊಡುತ್ತಿದ್ದ ವೈದ್ಯರೂ ಸಚಿವರೂ ಆಗಿದ್ದ ಡಾ|ವಿ.ಎಸ್.ಆಚಾರ್ಯ.
ಕೆಲವೇ ವರ್ಷಗಳ ಹಿಂದೆ ಗ್ರಾಮಗ್ರಾಮಗಳಲ್ಲಿ ನಾಟಿ ವೈದ್ಯರಿದ್ದರು. ಈ ನಾಟಿ ವೈದ್ಯರಿಗೆ ರೋಗಿಗಳ ರೋಗದಿಂದ ಹಿಡಿದು ಔಷಧ ತಯಾರಿಸುವ ಕಚ್ಚಾ ಸಾಮಗ್ರಿಗಳವರೆಗೂ ಸಮಗ್ರ ಜ್ಞಾನವಿತ್ತು. ನಾಟಿ ವೈದ್ಯರು ಎಂದು ಹೇಳುವಾಗ ತತ್‌ಕ್ಷಣ ನೆನಪಿಗೆ ಬರುವುದು ಮನುಷ್ಯರಿಗೆ ಔಷಧ ಕೊಡುವ ವೈದ್ಯರೆಂದು. ದನಗಳಿಗೆ ಔಷಧ ಕೊಡುವ ನಾಟಿ ವೈದ್ಯರು ಇದೇ ಪ್ರಮಾಣದಲ್ಲಿದ್ದರು. ಈಗಿನಂತೆ ನಾಯಿ, ಬೆಕ್ಕು, ಆಡು, ಹಂದಿಗಳಿಗೆ ಔಷಧ ಕೊಡುವ ಅಗತ್ಯವೂ ಆಗ ಇರಲಿಲ್ಲ. ಆಗಲೂ ಮನುಷ್ಯರಿಗೆ ಔಷಧ ಕೊಡುವ ನಾಟಿ ವೈದ್ಯರಷ್ಟು ಸಾಮಾಜಿಕ ಮಾನ್ಯತೆಯನ್ನು ದನಗಳಿಗೆ ಔಷಧ ಕೊಡುವ ನಾಟಿ ವೈದ್ಯರಿಗೆ ನೀಡದೆ ಇರುವುದು ಅಪ್ಪಟ ಸತ್ಯ. ಬಹು ಹಿಂದಿನಿಂದಲೇ ಎಚ್ಚೆತ್ತುಕೊಳ್ಳದ ಕಾರಣ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಔಷಧ ಕೊಡುವ ಎರಡೂ ನಾಟಿ ವೈದ್ಯ ಪರಂಪರೆ ಕಣ್ಮರೆಯಾಗುತ್ತಿದೆ. ಇದರ ಕುರಿತು ಸಮಾಜಕ್ಕೆ ಯಾವ ವ್ಯಥೆಯೂ ಇಲ್ಲ.
Related Articles
ಔಷಧ ತಯಾರಿಸಲು ಬೇಕಾದ ಸೊಪ್ಪು, ತೊಗಟೆ ಸಹಿತ ಮೂಲ ವಸ್ತುಗಳ ಜ್ಞಾನವಿರುವ ನಾಟಿವೈದ್ಯರಿಗೆ ತಮ್ಮ ಹೆಸರಿನ ಹಿಂದೆ “ಡಾ|’ ಎಂಬ ವಿಶೇಷಣವನ್ನು ಹಾಕುವಂತಿಲ್ಲ, ಒಂದು ವೇಳೆ ಹಾಕಿಕೊಂಡರೆ ಪ್ರಕರಣ ಇದಿರಿಸಬೇಕಾದೀತು. ಇತ್ತೀಚಿಗೆ ನಿಧನ ಹೊಂದಿದ ಶತಾಯುಷಿ, “ಮದ್ದಲೆಮಾಂತ್ರಿಕ’ ಎಂದು ಪ್ರಸಿದ್ಧರಾದ ಹಿರಿಯಡಕ ಗೋಪಾಲ ರಾಯರಂತಹ ಎಷ್ಟೋ ಗಿಡಮೂಲಿಕೆ ವೈದ್ಯರು “ಸರಕಾರಿ ಕೃಪಾಪೋಷಿತ ಕಿರಿಕಿರಿ’ಯಿಂದಾಗಿ ವೈದ್ಯ ವೃತ್ತಿಯನ್ನೇ ಕೈಬಿಟ್ಟವರಿದ್ದಾರೆ.
Advertisement
ಉಭಯ ವೈದ್ಯವಿಶಾರದರುಕೆಲವು ನಾಟಿ ವೈದ್ಯರು ಮನುಷ್ಯರಿಗೂ, ಜಾನುವಾರು ಗಳಿಗೂ ಔಷಧ ಕೊಡುವ ಜ್ಞಾನ ಹೊಂದಿದ್ದಾರೆ. ಉದಾ ಹರಣೆಗೆ ನೀಲಾವರದ ಹೊಂಡದ ಮನೆ ಸೋಮ ಪೂಜಾರಿಯವರು. ಇವರು ದನಗಳಿಗೆ ಜ್ವರ ಬಂದರೆ, ಕಾಲಿನ ಕೀಲು ತಪ್ಪಿದರೆ, ಚಳಿಜ್ವರದಿಂದ ಗಡಗಡ ನಡುಗುತ್ತಿದ್ದರೆ, ಕೆಚ್ಚಲು ಬಾವು, ಹೊಕ್ಕಳು ಬಾವು, ಜೇನು ಬಾವು, ಮಾನವರ
ಸರ್ಪಸುತ್ತು, ಅರಿಶಿನ ಮುಂಡಿಗೆ, ಮಕ್ಕಳು ಊಟ ಮಾಡದಿ ರುವುದು, ಚರ್ಮರೋಗವೇ ಮೊದಲಾದ ಕಾಯಿಲೆಗಳಿಗೆ ಔಷಧ ಕೊಡುತ್ತಿದ್ದಾರೆ. 20ನೆಯ ವರ್ಷಕ್ಕೆ ಔಷಧ ಕೊಡಲು ಆರಂಭಿಸಿದ ಪೂಜಾರಿಯವರಿಗೆ ಈಗ 80 ವರ್ಷ.
ನಾಟಿ ವೈದ್ಯರು ಹಣದ ಹಿಂದೆ ಹೋಗುತ್ತಿರಲಿಲ್ಲ. ಹೀಗೆ ಹೋದದ್ದೇ ಹೌದಾದರೆ ಇವರು ಜೀವನಕ್ಕೆ ಕೂಲಿ, ಕೃಷಿ ಇತ್ಯಾದಿ ಬೇರೆ ವೃತ್ತಿಯನ್ನು ಅನುಸರಿಸುತ್ತಿರಲಿಲ್ಲ. ಇವರಿಂದ ಪ್ರಯೋಜನ ಪಡೆದವರು ಕೊಡುತ್ತಿದ್ದ ಸಾಮಾಜಿಕ ಗೌರವ ಮಾತ್ರ ಕಡಿಮೆ ಅಲ್ಲ, ಸಂಭಾವನೆಗಳು ಮಾತ್ರ ಅಷ್ಟಕ್ಕಷ್ಟೆ. ಈಗ ಇಂತಹುದೇ ಔಷಧವನ್ನು ಮೋಟಾರು ಬೈಕ್, ಕಾರಿನಲ್ಲಿ ಬಂದು ಕೊಟ್ಟರೆ ಎಷ್ಟು ಹಣ ಕೊಡುತ್ತಿದ್ದಾರೆ? ನಾಟಿ ವೈದ್ಯರು ಕಲಿಯಲೂ “ಡೊನೇಶನ್’ ಕೊಡಲಿಲ್ಲ, ತಮ್ಮ ಜ್ಞಾನದ ಪ್ರಯೋಜನವನ್ನು ಸಮಾಜಕ್ಕೆ ಹಂಚುವಾಗಲೂ “ಫೀಸ್ ಫಿಕ್ಸ್’ ಮಾಡಲಿಲ್ಲ. ಈಗ ಕಲಿಯಲೂ ಇನ್ವೆಸ್ಟ್‌ಮೆಂಟ್, ವಸೂಲಿಗೂ “ಫೀಸ್ ಫಿಕ್ಸ್’. ಇದರ ಅಡ್ಡ ಪರಿಣಾಮವೆಂದರೆ ನಾಟಿ ವೈದ್ಯ ಪರಂಪರೆಯನ್ನು ಯುವಕರು ಅನುಸರಿಸುತ್ತಿಲ್ಲ, ಈ ದುಃಖವೂ ಸಮಾಜದಲ್ಲಿ ಕಂಡುಬರುತ್ತಿಲ್ಲ. ವೃದ್ಧಾಶ್ರಮಗಳೂ, ಗೋಶಾಲೆಗಳೂ
ವೃದ್ಧಾಶ್ರಮಗಳ ಮಾದರಿಯಲ್ಲಿ ಗೋಶಾಲೆಗಳು ನಿರ್ಮಾಣ ಅನಿವಾರ್ಯವಾಗುತ್ತಿವೆ. ಹಿರಿಯರ ಕೊಡುಗೆ, ಸ್ಮರಣೆಗಳನ್ನು ಭರ್ಜರಿಯಾಗಿ ನಡೆಸುವ, ಅವರಿಂದ ಸಾಕಷ್ಟು ಪ್ರಯೋಜನ ಪಡೆದ ನಾವು ಅದೇ ಹಿರಿಯರು ಇರುವಾಗ ಕವಡೆ ಕಿಮ್ಮತ್ತು ನೀಡದಂತೆ ಗೋವುಗಳ ಪ್ರಯೋಜನವನ್ನು ಮಾತ್ರ ಬಯಸುವ ಪ್ರವೃತ್ತಿ ಇದೆ. ವೃದ್ಧಾಶ್ರಮಗಳು, ಗೋಶಾಲೆಗಳು ಒಂದರ್ಥದಲ್ಲಿ ಕೇಂದ್ರೀಕರಣವಿದ್ದಂತೆ. ಒಂದೇ ಕಡೆ ಹತ್ತಾರು, ನೂರಾರು ಹಿರಿಯ ಜೀವಗಳು ಇರುವುದಕ್ಕೂ ಒಂದೊಂದು ಮನೆಯಲ್ಲಿ ಒಂದಿ ಬ್ಬರು ಹಿರಿಯ ಜೀವಗಳು ಇರುವುದಕ್ಕೂ ವ್ಯತ್ಯಾಸವಿಲ್ಲವೆ? ಹಾಗೆ ಒಂದೊಂದು ಮನೆಯಲ್ಲಿ ಒಂದೆರಡು ದನಗಳಿರುವುದಕ್ಕೂ ಗೋಶಾಲೆಗಳಲ್ಲಿ ಸಾವಿರಾರು ಗೋವುಗಳಿರುವುದಕ್ಕೂ ವ್ಯತ್ಯಾಸವಿದ್ದೇ ಇದೆ. ಇದು ಸಮಾಜದಲ್ಲಿ ಅಸಮತೋಲನವನ್ನು ಸೃಷ್ಟಿಸಿದೆ. ದೇಸೀತಳಿಗೆ ಆಧುನಿಕರ ಮ(ನ್ನ)ಣೆ
ದನಗಳ ವಾಸ್ತವ ಪ್ರಯೋಜನವನ್ನು ಹಣವನ್ನು ತೆತ್ತು ಖರೀದಿಸುವುದಕ್ಕಿಂತ ಪ್ರಾಯೋಗಿಕವಾಗಿ ಪ್ರಯೋಜನ ಪಡೆಯುವ ವೈಚಾರಿಕತೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ. ಒಂದೆಡೆ ಅತಿ ಕಡಿಮೆ ಆರ್ಥಿಕ ಅನುಕೂಲತೆಗಳನ್ನು ಪಡೆದು ಸಾಮಾಜಿಕ ಹಿತ ಕಾಪಾಡುತ್ತಿರುವ ನಾಟಿ ವೈದ್ಯ ಪರಂಪರೆಯನ್ನು ಮತ್ತು ಮತ್ತೂಂದೆಡೆ ಹಾಲಿಗಿಂತಲೂ ಮಿಗಿಲಾದ ಅನೇಕ ಆರೋಗ್ಯ ಲಾಭಗಳನ್ನು ಕೊಡುವ ದನಗಳ ಸಾಕಣೆಗೂ ಏಕಕಾಲದಲ್ಲಿ ಗಮನ ಹರಿಸಬೇಕಾಗಿದೆ. ದನಗಳೆಂದಾಕ್ಷಣ ನಮ್ಮ ತಿಳಿವಳಿಕೆಗೆ ಬರುವುದು ಮಿಶ್ರತಳಿಗಳು. ಒಂದು ಕಾಲದಲ್ಲಿ ಇವುಗಳನ್ನೇ ನಮ್ಮ ತೆರಿಗೆ ಹಣದಲ್ಲಿ ಸಂಶೋಧನೆ ನಡೆಸಿ ಮನ್ನಣೆ ಗಿಟ್ಟಿಸಿಕೊಂಡಿದ್ದ ಆಧುನಿಕ ವಿಜ್ಞಾನಿಗಳು ಈಗ ಭಾರತೀಯ ದೇಸೀ ತಳಿಗಳು ಉತ್ತಮ ಎಂದು ಒಪ್ಪಿಕೊಂಡಿದ್ದಾರೆ. ಇದರ ಲಾಭವನ್ನು ಜನಸಾಮಾನ್ಯರು ಶೇ.100 ಪಡೆಯುವಂತಾಗಬೇಕಾಗಿದೆ. ಆಗಲೇ ಗೋಪೂಜೆಗೆ ನಿಜವಾದ ಅರ್ಥ ಬಂದೀತು. ಭಿನ್ನ ವಂಶಪಾರಂಪರ್ಯ
ನಾಟಿ ವೈದ್ಯ ಪರಂಪರೆಯಲ್ಲಿ ಸಾಮಾನ್ಯವಾಗಿ ಅಪ್ಪನಿಂದ ಮಗ, ಅಜ್ಜನಿಂದ ಮೊಮ್ಮಗ ಹೀಗೆ ವಂಶಪಾರಂಪರ್ಯವಾಗಿ ಬೆಳೆದುಬಂದಿರುತ್ತದೆ. ಸೋಮ ಪೂಜಾರಿಯವರ ಉದಾಹರಣೆ ಇದಕ್ಕೆ ಭಿನ್ನ. ನೀಲಾವರ ಎಳ್ಳಂಪಳ್ಳಿಯ ಸಂತು ಡಿ’ಸೋಜರಿಂದ ಸೋಮ ಪೂಜಾರಿಯವರು ಔಷಧ ಜ್ಞಾನವನ್ನು ಪಡೆದರು. “ಇದಕ್ಕೆ ಬೇಕಾದ ಸೊಪ್ಪು, ಬೇರುಗಳು ಸಿಗುವುದು ಕಷ್ಟ. ನನಗೂ ವಯಸ್ಸಾಗಿದೆ. ನನ್ನ ಅಳಿಯ ಶಂಕರನಿಗೆ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ ಸೋಮ ಪೂಜಾರಿಯವರು. ಗೋ ಜಾಗೃತಿ, ತಳಿ “ಅಜಾಗೃತಿ’
ರವಿವಾರ, ಸೋಮವಾರ ನಾಡಿನಾದ್ಯಂತ ಗೋಪೂಜೆ ಸಂಪನ್ನಗೊಳ್ಳುತ್ತಿದೆ. ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಜಾಗೃತಿ ಆಗುತ್ತಿದೆ. ಗೋವುಗಳ ದೇಸೀ ತಳಿಗಳೂ ಕಣ್ಮರೆಯಾಗುತ್ತಿವೆ, ಸಂಖ್ಯೆಯೂ ಇಳಿಮುಖವಾಗಿದೆ. ಇವುಗಳ ಪ್ರಯೋಜನ ಕುರಿತು ವೈಜ್ಞಾನಿಕ ಅಧ್ಯಯನ, ಪ್ರಬಂಧ ಮಂಡನೆ ಆಗುತ್ತಿದೆ. – ಮಟಪಾಡಿ ಕುಮಾರಸ್ವಾಮಿ