ಅಹಮದಾಬಾದ್: ಗುಜರಾತ್‌ನಲ್ಲಿ ಹಿಂದಿನಿಂದಲೂ ಸಿಂಹವೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಆದರೆ ಇದೀಗ ಹಸು ಕೂಡ ಇಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ. ರಾಜ್ಯದಲ್ಲಿ ಗೋವು ಸಾಕಣೆಯನ್ನು ಪ್ರೋತ್ಸಾಹಿಸಲು ಮತ್ತು ಜನಪ್ರಿಯಗೊಳಿಸಲು ಗೋವು ಪ್ರವಾಸೋ ದ್ಯಮ ಯೋಜನೆಯನ್ನು ಗುಜರಾತ್‌ನ ಗೋಸೇವಾ ಆಯೋಗವು ಹಮ್ಮಿಕೊಂಡಿದೆ.
ಗೋವು ಸಾಕಣೆ, ಗೋಮೂತ್ರ ಹಾಗೂ ಸಗಣಿಯಿಂದ ಉತ್ಪನ್ನಗಳನ್ನು ತಯಾರಿಸುವುದು ಸೇರಿದಂತೆ ಗೋವಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಜನರಿಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಹೀಗಾಗಿ ರಾಜ್ಯದಲ್ಲಿ ಉತ್ತಮವಾಗಿ ನಿರ್ವಹಿಸಿದ ಕೆಲವು ಗೋಶಾಲೆಗಳು ಹಾಗೂ ಗೋಮಾಳಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂದು ಗೋಸೇವಾ ಆಯೋಗದ ಅಧ್ಯಕ್ಷ ವಲ್ಲಭ ಕಥಿರಿಯಾ ಹೇಳಿದ್ದಾರೆ. ಇದು ಎರಡು ದಿನಗಳ ಪ್ರವಾಸವಾಗಿರಲಿದೆ.
ಈಗಾಗಲೇ ಹಲವು ಪ್ರವಾಸಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಅತ್ಯಂತ ಜನಪ್ರಿಯ ಸ್ಥಳವೆಂದರೆ ಆನಂದ್ ಜಿಲ್ಲೆಯಲ್ಲಿರುವ ಧರ್ಮಜ್ ಎಂಬ ಹಳ್ಳಿಯ ಗೋಮಾಳ. ಇದರ ನಿರ್ವಹಣೆಯ ವಿಧಾನವನ್ನು ತಿಳಿದುಕೊಳ್ಳಲು ಪ್ರವಾಸಿಗರು ಉತ್ಸಾಹ ತೋರಿಸುತ್ತಾರೆ. ಪ್ರವಾಸದಿಂದ ತೆರಳಿದ ನಂತರ ಹಲವರು ಗೋ ಸಾಕಣೆಯನ್ನು ಆರಂಭಿಸಿ, ಉತ್ತಮ ಲಾಭ ಪಡೆಯುತ್ತಿದ್ದಾರೆ ಎಂದು ಕಥಿರಿಯಾ ಹೇಳಿದ್ದಾರೆ.
ಗೋವಿನಿಂದ ಲಭ್ಯವಿರುವ ಲಾಭಗಳನ್ನು ಅರಿಯುವುದೇ ಗೋ ಪ್ರವಾಸೋದ್ಯಮದ ಮೂಲ ಉದ್ದೇಶ. ಬಯೋಗ್ಯಾಸ್ ಮತ್ತು ಔಷಧದಂತಹ ಸರಳ ಉತ್ಪನ್ನಗಳಿಂದ ನಾವು ಉತ್ತಮ ಆದಾಯ ಪಡೆಯಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ಪ್ರವಾ ಸೋದ್ಯಮವು ಗೋವಿಗೆ ಸಂಬಂಧಿಸಿದ ಧಾರ್ಮಿಕ ಹಾಗೂ ಆರ್ಥಿಕ ಅಂಶಗಳನ್ನು ಒಳ ಗೊಂಡಿರಲಿದೆ ಎಂದು ಅವರು ಹೇಳಿದ್ದಾರೆ.
ಜೈಲು, ಕಾಲೇಜಲ್ಲೂ ಗೋಶಾಲೆ!
ಕೇವಲ ಗೋ ಪ್ರವಾಸೋದ್ಯಮವಷ್ಟೇ ಅಲ್ಲ, ಕಾಲೇಜು ಹಾಗೂ ಜೈಲುಗಳಲ್ಲೂ ಗೋಶಾಲೆಯನ್ನು ನಿರ್ಮಿಸುವ ಬಗ್ಗೆ ಗೋಸೇವಾಆಯೋಗ ನಿರ್ಧರಿಸಿದೆ. ಈಗಾಗಲೇ ಅಹಮದಾಬಾದ್, ರಾಜ್‌ಕೋಟ್ ಮತ್ತು ಭುಜ್‌ನಲ್ಲಿರುವ ಜೈಲು ಗಳಲ್ಲಿ ಗೋಶಾಲೆ ಆರಂಭಿಸಲಾಗಿದೆ. ಗೊಂಡಲ್ ಹಾಗೂ ಅಮ್ರೇಲಿ ಜೈಲಿನಲ್ಲೂ ಗೋಶಾಲೆ ಆರಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನು ಹಲವು ಕಾಲೇಜು ಗಳು ಮತ್ತು ವಿಶ್ವವಿದ್ಯಾಲಯಗಳೂ ಗೋಶಾಲೆ ಸ್ಥಾಪಿಸಲು ಮುಂದೆ ಬಂದಿವೆ.