ಮಧ್ಯ ಪ್ರದೇಶ: ಸಾಮಾನ್ಯವಾಗಿ ಆಸ್ಪತ್ರೆಯ ಐಸಿಯು ವಾರ್ಡ್ ಗೆ ವೈದ್ಯರು, ನರ್ಸಗಳು ಬಿಟ್ಟರೆ ರೋಗಿಯ ಸಂಬಂಧಿಕರಿಗೂ ಒಳ ಹೋಗಲು ಅವಕಾಶ ಕೊಡುವುದು ಕಡಿಮೆ. ಆದರೆ ಇಲ್ಲೊಂದು ಆಸ್ಪತ್ರೆಗೆ, ಅದು ಕೂಡ ಐಸಿಯು ವಾರ್ಡ್ ಗೆ ವಿಶೇಷ ಅತಿಥಿ ಬಂದಿದೆ.!
ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದನವೊಂದು ನುಗ್ಗಿದ್ದು, ಹಾಯಾಗಿ ಅತ್ತಿತ್ತ ಓಡುತ್ತಾ, ಕಸದ ಬುಟ್ಟಿಯಲ್ಲಿರುವ ಮೆಡಿಕಲ್ ತ್ಯಾಜ್ಯವನ್ನು ತಿಂದಿದೆ. ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಇಡೀ ದಿನ ದನವನ್ನು ಆಸ್ಪತ್ರೆಯ ಹೊರ ಹಾಕಲು ಯಾರಿಂದಲೂ ಸಾಧ್ಯವಾಗಲಿಲ್ಲ. ರಸ್ತೆ ಬದಿಯೇ ಆಸ್ಪತ್ರೆ ಇರುವುದಿಂದ ಆಸ್ಪತ್ರೆಯಲ್ಲಿ ದನ ಹಿಡಿಯಲು ಇಬ್ಬರನ್ನು ಈ ಹಿಂದೆಯೇ ನೇಮಿಸಲಾಗಿದೆ. ಆದರೆ ಘಟನೆ ನಡೆದಾಗ ಅವರೂ ಕೂಡ ಅಲ್ಲಿ ಇರಲಿಲ್ಲ ಎಂದು ವರದಿ ತಿಳಿಸಿದೆ.
ದನ ಐಸಿಯು ವಾರ್ಡ್ ನ ಮುಂದೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಹಾಗೂ ಇತರ ಎರಡು ಎರಡು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತು ಮಾಡಲಿದೆ.
ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ರಾಜೇಂದ್ರ ಕಟಾರಿಯಾ ಈ ಬಗ್ಗೆ ಮಾತಾನಾಡಿ, ಪರಿಸ್ಥಿತಿಯನ್ನು ಗಮನಿಸಿ ವಾರ್ಡ್ ಬಾಯ್ ಹಾಗೂ ಸೆಕ್ಯುರಿಟಿ ಗಾರ್ಡ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಈ ಘಟನೆ ನಮ್ಮ ಹಳೆಯ ಕೋವಿಡ್ ಐಸಿಯು ವಾರ್ಡ್‌ನಿಂದ ಆಗಿದೆ ಎಂದಿದ್ದಾರೆ.