Advertisement

“ಗೋ ಹಂತಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ’

08:26 PM Oct 01, 2021 | Team Udayavani |

ಗಂಗೊಳ್ಳಿ: ತಾಯಿ ಸಮಾನವಾದ ಗೋವುಗಳನ್ನು ಅಮಾನುಷವಾಗಿ ಹತ್ಯೆಗೈದು, ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತ ಮೆರೆದಿರುವುದು ಖಂಡನೀಯ. ಸಮಾಜದ ಶಾಂತಿ ಕದಡುವ ದುಷ್ಕರ್ಮಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯನ್ವಯ, ಗೂಂಡಾ ಕಾಯ್ದೆಯಡಿ ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್‌ ಎಚ್ಚರಿಸಿದರು.

Advertisement

ಶುಕ್ರವಾರ ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ನೇತೃತ್ವದಲ್ಲಿ ಗೋಹತ್ಯೆ ವಿರೋಧಿಸಿ ಹಾಗೂ ಗೋ ಹಂತಕರನ್ನು ಗಡಿಪಾರು ಮಾಡಲು ಆಗ್ರ ಹಿಸಿ ಗಂಗೊಳ್ಳಿ ಯಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬೃಹತ್‌ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಗೋ ಹತ್ಯೆಗೈದು ವೀಡಿಯೋ ವೈರಲ್‌ ಮಾಡಿದವರ ವಿರುದ್ಧ ಹಿಂದೂಗಳು ಕೇಸ್‌ ನೀಡುವ ಅನಿವಾರ್ಯತೆ ಇರಲಿಲ್ಲ. ಶಾಂತಿ ಕದಡುವ ವೀಡಿಯೋ ಮಾಡಿ ಹರಿಬಿಟ್ಟವರ ವಿರುದ್ದ ಪೊಲೀಸರು ಸುಮೊಟೊ ಪ್ರಕರಣ ದಾಖಲು ಮಾಡಿ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡಬಹುದಿತ್ತು. ಆದರೆ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಗಂಗೊಳ್ಳಿ, ಬೈಂದೂರು ಭಾಗದಲ್ಲಿ ಮಾತ್ರ ಇನ್ನೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಗೋ ಹಂತಕರ ಬದಲಾಗಿ, ಗೋ ರಕ್ಷಕರ ವಿರುದ್ಧವೇ ಕೇಸು ದಾಖಲಾಗುತ್ತಿರುವುದು ಖೇದಕರ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌, ಗಂಗೊಳ್ಳಿಯ ಅಧ್ಯಕ್ಷ ಗೋವಿಂದ ಶೇರುಗಾರ್‌, ಹಿಂದು ಸಂಘಟನೆಗಳ ಮುಖಂಡರಾದ ವಾಸುದೇವ ಗಂಗೊಳ್ಳಿ, ನವೀನ್‌ ಗಂಗೊಳ್ಳಿ, ಯಶವಂತ್‌ ಗಂಗೊಳ್ಳಿ, ಮಹೇಶ್‌ ಬೈಂದೂರು ಮತ್ತಿತರು ವೇದಿಕೆಯಲ್ಲಿದ್ದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಭೇಟಿ ನೀಡಿದರು.

ಗೃಹ ಸಚಿವರಿಗೆ ಮನವಿ
ಗಂಗೊಳ್ಳಿಯಲ್ಲಿ ಅಕ್ರಮವಾಗಿ ಸಾಮೂಹಿಕ ಗೋಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ಇಲ್ಲಿರುವ 14 ಮಸೀದಿಗಳಲ್ಲಿಯೂ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿ ಏಕಕಾಲದಲ್ಲಿ ಗಟ್ಟಿ ಧ್ವನಿಯಲ್ಲಿ ಧ್ವನಿ ವರ್ಧಕ ಮೂಲಕ ಆಜಾನ್‌ ಕೂಗುತ್ತಾರೆ.

Advertisement

ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ, ಬೆಳಗ್ಗಿನ ಅವಧಿಯಲ್ಲಿ ದೇವಸ್ಥಾನ, ಮನೆಗಳಲ್ಲಿ ಧ್ಯಾನ ಮಾಡುವವರಿಗೆ ತೊಂದರೆ ಯಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾಮೂಹಿಕ ಗೋಹತ್ಯೆ ಗೈದು, ವೀಡಿಯೋ ಮಾಡಿ ಹರಿ ಬಿಡುವ ಮೂಲಕ ಸಮಾಜದ ಶಾಂತಿ ಕದಡುವ ದುಷ್ಕೃತ್ಯ ಎಸಗಿದವರನ್ನು ಕೂಡಲೇ ಗಡಿಪಾರು ಮಾಡಿ, ಕಠಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗೃಹ ಸಚಿವರಿಗೆ ಕುಂದಾಪುರ ತಹಶೀಲ್ದಾರ್‌ ಕಿರಣ್‌ ಗೌರಯ್ಯ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ:ಸಂಸ್ಕೃತ ವಿವಿ ಒಕ್ಕೂಟದ ಅಧ್ಯಕ್ಷರಾಗಿ ಪ್ರೊ.ದೇವನಾಥನ್‌

ಕೆಲವು ಹೊತ್ತು ಗೊಂದಲ; ಶಾಂತ
ಮೆರವಣಿಗೆಯಲ್ಲಿ ಪ್ರತಿಭಟನ ನಿರತರು ಗೋಹಂತಕರ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆ ಇಲ್ಲಿನ ವಾಟರ್‌ ಟ್ಯಾಂಕ್‌ ಬಳಿ ಬರುತ್ತಿದ್ದಂತೆ
ಕೆಲವು ಹೊತ್ತು ಗೊಂದಲಕ್ಕೆ ಕಾರಣ ವಾಯಿತು. ಒಂದು ಕಡೆಯಿಂದ ಅನ್ಯ ಕೋಮಿನ ಯುವಕರು ಜಮಾಯಿಸಿದ್ದನ್ನು ಕಂಡು ಪ್ರತಿಭಟನ ನಿರತರು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು, ಹಿಂದೂ ಸಂಘಟನೆಗಳ ಮುಖಂಡರು ನಿಗಾ ವಹಿಸಿದ್ದರಿಂದ ಪರಿಸ್ಥಿತಿ ಶಾಂತವಾಯಿತು.

ಬೃಹತ್‌ ಪಾದಯಾತ್ರೆ
ಗೋಹತ್ಯೆ ವಿರೋಧಿಸಿ ಗಂಗೊಳ್ಳಿಯ ಮೀನು ಗಾರಿಕಾ ಬಂದರಿನಿಂದ ರಾಮ ಮಂದಿರದವರೆಗಿನ ಸುಮಾರು 3 ಕಿ.ಮೀ. ವರೆಗೆ ಬೃಹತ್‌ ಪಾದಯಾತ್ರೆ ನಡೆಯಿತು. ಮಹಿಳೆಯರು, ಯುವತಿಯರು, ಮಕ್ಕಳು ಸೇರಿದಂತೆ ಪಾದಯಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಪಾದಯಾತ್ರೆಯು ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಸಮಾಪನಗೊಂಡು, ಬಳಿಕ ಪ್ರತಿಭಟನೆ ಸಭೆ ನಡೆಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಎಲ್ಲ ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಲಾಗಿತ್ತು. ಮೀನುಗಾರಿಕಾ ಚಟುವಟಿಕೆಯು ಸಂಪೂರ್ಣ ಸ್ತಬ್ಧವಾಗಿತ್ತು.

ಬಿಗಿ ಪೊಲೀಸ್‌ ಬಂದೋಬಸ್ತ್
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ರಾಜ್ಯ ಮೀಸಲು ಪೊಲೀಸ್‌ ಪಡೆ, ಜಿಲ್ಲಾ ಮೀಸಲು ಪಡೆ, ನಕ್ಸಲ್‌ ನಿಗ್ರಹ ಪಡೆ, ವಿವಿಧ ಠಾಣೆಗಳ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ಗುಪ್ತಚರ ವಿಭಾಗದ ಎಸ್‌ಪಿ ಪ್ರವೀಣ್‌ ನಾಯಕ್‌ ಭೇಟಿ ನೀಡಿ ಪರಿಶೀಲಿಸಿದರು. ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಕುಂದಾಪುರದ ಗೋಪಿಕೃಷ್ಣ, ಬೈಂದೂರಿನ ಸಂತೋಷ್‌ ಕಾಯ್ಕಿಣಿ, ಗಂಗೊಳ್ಳಿ ಎಸ್‌ಐ ನಂಜಾ ನಾಯ್ಕ, ಇತರ ಠಾಣೆಗಳ ಠಾಣಾಧಿಕಾರಿಗಳು, ಸಿಬಂದಿ ಬಂದೋಬಸ್ತ್ ಬಗ್ಗೆ ನಿಗಾ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next