ಬೆಂಗಳೂರು: ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದವರ ಸುಲಿಗೆಗೆ ಯತ್ನಿಸಿದ ಆರೋಪದಡಿ ಕಾಂಗ್ರೆಸ್ ಸದಸ್ಯ ಹಾಗೂ ಆತನ ಸಹಚರನನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದು, ಗೋ ಮಾಂಸ ಸಾಗಾಟ ಮಾಡಿದ ಆರೋಪದಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸುಂಕದಕಟ್ಟೆ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಆತನ ಸಹಚರ ಸೋಮುಗೌಡ, ಗೋಮಾಂಸ ಸಾಗಿಸುತ್ತಿದ್ದ ಖಾಜಾಮೊಯಿನುದ್ದೀನ್, ಉಮೇಶ ಬಂಧಿತರು.
ಜೂ.21 ರಂದು ಬೆಳಗ್ಗೆ ಖಾಜಾಮೊಯಿನುದ್ದೀನ್ ಹಾಗೂ ಉಮೇಶ ಎಂಬುವವರು ಮಾಗಡಿಯಲ್ಲಿ ಗೋಮಾಂಸ ಖರೀದಿಸಿ ಶಿವಾಜಿ ನಗರಕ್ಕೆ ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುತ್ತಿದ್ದರು. ಅದೇ ರಸ್ತೆಯಲ್ಲಿ ಇನ್ನೋವಾ ಕಾರಿನಲ್ಲಿ ಬರುತ್ತಿದ್ದ ಕಾಂಗ್ರೆಸ್‌ನ ಮುಖಂಡ ಪ್ರಶಾಂತ್ ಹಾಗೂ ಆತನ ಸ್ನೇಹಿತರು ಸ್ಕಾರ್ಪಿಯೋ ಕಾರನ್ನು ಅಡ್ಡಗಟ್ಟಿದ್ದರು. ನಮ್ಮ ಇನ್ನೋವಾ ಕಾರಿಗೆ ನಿಮ್ಮ ಸ್ಕಾರ್ಪಿಯೋ ವಾಹನ ಡಿಕ್ಕಿಯಾಗಿದ್ದು, ದುಡ್ಡು ಕೊಡುವಂತೆ ಬೆದರಿಸಿದ್ದಾರೆ. ಜತೆಗೆ ಗೋಮಾಂಸ ಸಾಗಾಟ ಮಾಡುತ್ತಿರುವ ವಿಚಾರ ಪೊಲೀಸರ ಗಮನಕ್ಕೆ ತರಬಾರದು ಎಂದಾದರೆ 2 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆಯಿಟ್ಟು, ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಖಾಜಾಮೊಯಿನುದ್ದೀನ್ ಅವರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಶಾಂತ್, ಸೋಮುಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಆರೋಪ ತಳ್ಳಿ ಹಾಕಿರುವ ಪ್ರಶಾಂತ್, ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಕ್ಕೆ ಇವರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.
ಅಕ್ರಮ ಗೋಮಾಂಸ ಸಾಗಾಟ ಹಿನ್ನೆಲೆಯಲ್ಲಿ ಉಮೇಶ್ ಮತ್ತು ಖಾಜಾ ಮೊಯಿನುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.