ಬಾಡಗಿ: ಗೋ ಹತ್ಯೆ ವಿಚಾರದಲ್ಲಿ ಧಾರ್ಮಿಕವಾಗಿ ವೈರುಧ್ಯ ನಿಲುವು ಗಳನ್ನು ಸೃಷ್ಟಿಸಿ, ರಾಜಕೀಯ ಲಾಭಕ್ಕಾಗಿ ಅಸ್ತ್ರ ಮಾಡಿಕೊಳ್ಳಲಾಗುತ್ತಿದೆ. ದೇವರಿಗೆ ಸಮಾನವೆಂಬ ಪೂಜ್ಯನೀಯ ಭಾವನೆ ಹೊಂದಿರುವ ಭಾರತದಲ್ಲೇ ಗೋವು ಗಳನ್ನು ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಮೋಟೆಬೆನ್ನೂರಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಗೋ ಪೂಜೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಗೋವುಗಳಿಂದ ಮನುಷ್ಯ ಸಂಕುಲಕ್ಕೆ ನೂರಾರು ರೀತಿಯಲ್ಲಿ ಉಪಯೋಗವಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಗೋವುಗಳ ಉಸಿರಿನಿಂದ ಹಿಡಿದು, ಹಾಲು ಮತ್ತು ಗಂಜಲಿನಿಂದ ಮನುಷ್ಯನಿಗೆ ಎರಗುವ ನೂರಾರು ಕಾಯಿಲೆಗಳಿಗೆ ಔಷಧ ರೂಪದಲ್ಲಿ ಲಾಭ ನೀಡಲಿದೆ ಎಂದರು.
ರಾಜಕೀಯ ಅಸ್ತ್ರ ಬೇಡ: ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಗೋವುಗಳಿಗೆ ಸಿಗುವ ಮನ್ನಣೆ ಇನ್ನಿತರ ಸಾಕುಪ್ರಾಣಿಗಳಿಗಿಲ್ಲ. ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಹೀಗಿದ್ದರೂ ಒಂದು ವರ್ಗದ ಮತಗಳನ್ನು ಪಡೆಯುವ ದೃಷ್ಟಿಯಿಂದ ವಿಪಕ್ಷಗಳು ಆಹಾರ ಪದ್ಧತಿ ನೆಪದಲ್ಲಿ ಗೋಮಾಂಸ ಭೋಜನ ಮಾಡಲಾಗುತ್ತಿದೆ. ಆದರೆ, ಗೋಮಾಂಸ ತಿನ್ನಲು ಯೋಗ್ಯ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ.ರಾಜಕೀಯ ಅಸ್ತ್ರವಾಗಿ ಎಂದಿಗೂ ಗೋಹತ್ಯೆ ನಡೆಯದಿರಲಿ ಎಂದರು.
ಜವಾರಿ ತಳಿ ಮಾಯ: ಗೋವುಗಳ ಸಂರಕ್ಷಣೆ ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಜವಾರಿ ತಳಿ ಮಾಯವಾಗುತ್ತಿದೆ. ಇದರಿಂದ ಒಂದು ತರಹದ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅವುಗಳನ್ನು ಕಳೆದುಕೊಂಡ ನಾವು ಮುಂದೊಂದು ದಿನ ಆರೋಗ್ಯಕರ ವಾತಾವರಣಕ್ಕಾಗಿ ಅಲೆಯಬೇಕಾಗುತ್ತದೆ. ಗೋವುಗಳ ರಕ್ಷಣೆಯಲ್ಲಿ ನಾವೆಲ್ಲರೂ ಸಾರ್ವತ್ರಿಕ ಹೊಣೆಗಾರಿಕೆ ತೋರುವ ಅಗತ್ಯವಿದೆ ಎಂದು ಹೇಳಿದರು.
ಪುರಾಣದಲ್ಲಿ ಗೋ ಉಲ್ಲೇಖ: ತಹಶೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ಮಹಾಭಾರತದ ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿ ದಿನದಂದು ಶ್ರೀ ಕೃಷ್ಣ ಗೋವರ್ಧನಗಿರಿ ಎತ್ತಿ ಹಿಡಿದು ಗೋ ಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯಿದೆ. ಬಲಿ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಈ ಸವಿ ನೆನಪಿಗಾಗಿ ಬಲಿಪಾಡ್ಯಮಿ ದಿನ ಗೋಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಸಕಲವನ್ನೂ ನೀಡುವ ಗೋಮಾತೆಯನ್ನು ಪೂಜಿಸೋಣ ಹಾಗೂ ಸಂರಕ್ಷಿಸೋಣ ಎಂದರು.ಈ ವೇಳೆ ಪಿಡಿಒ ಸತೀಶ ಮೂಡೇರ,ಗ್ರಾಮದ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.