ಗಾಂಧಿನಗರ: ಗೋವುಗಳನ್ನು ಸಾಕಲಾಗದೇ ಕಸಾಯಿಖಾನೆಗೆ ದೂಡುವುದನ್ನು ತಪ್ಪಿಸಲು ಅವುಗಳ ನಿರ್ವಹಣೆಗಾಗಿ ಸಗಣಿ ಮತ್ತು ಗೋಮೂತ್ರ ಬ್ಯಾಂಕ್ ಸ್ಥಾಪನೆಗೆ ಗುಜರಾತ್ ಸರ್ಕಾರ ಮುಂದಾಗಿದೆ.
ಸಗಣಿ ಹಾಗೂ ಗೋಮೂತ್ರವನ್ನು ಮಾರಾಟ ಮಾಡಿ, ಅದರಿಂದ ಬಂದ ಆದಾಯವನ್ನು ಜಾನುವಾರು ನಿರ್ವಹಣೆಗೆ ಬಳಸಲಾಗುತ್ತದೆ. ಇದರಿಂದಾಗಿ ಲಕ್ಷಾಂತರ ಬೀಡಾಡಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಪ್ಪಿಸಬಹುದು ಎಂದು ಹಿರಿಯ ಸಚಿವ ಭೂಪೇಂದ್ರ ಸಿಂಗ್ ಚುಡಾಸನಾ ಹೇಳಿದ್ದಾರೆ.
ಗೋಮೂತ್ರ ಮತ್ತು ಗೋಬರ್ ಬ್ಯಾಂಕ್ ಸ್ಥಾಪಿಸಿ, ಇದರಲ್ಲಿ ಸಂಗ್ರಹವಾದ ಸಗಣಿ ಹಾಗೂ ಗೋಮೂತ್ರವನ್ನು ರಸಗೊಬ್ಬರ ಮತ್ತು ನೈಸರ್ಗಿಕ ಕೀಟನಾಶಕ ತಯಾರಕ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಸಂಗ್ರಹ, ಪ್ಯಾಕಿಂಗ್ ಹಾಗೂ ವಿತರಣೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಸಹಕಾರಿ ಸಂಘಗಳನ್ನೂ ಸೇರಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬರಕ್ಕೆ ಪರಿಹಾರ: ಗುಜರಾತ್‌ನಲ್ಲಿ ಈ ವರ್ಷ ಮಳೆ ಕೊರತೆಯಾಗಿದ್ದು, ಬರ ತಲೆದೋರುವ ಸಾಧ್ಯತೆ ಇದೆ. ಬರ ಎದುರಾದಲ್ಲಿ ಮೊದಲು ಜಾನುವಾರುಗಳಿಗೇ ಬಾಧಿಸುತ್ತದೆ. ಈಗಾಗಲೇ 11 ಜಿಲ್ಲೆಗಳ 51 ತಾಲೂಕುಗಳಲ್ಲಿ ಮೇವು ಕೊರತೆ ಕಂಡುಬಂದಿದ್ದು, ಇದಕ್ಕಾಗಿ 412 ಗೋಶಾಲೆಗಳಲ್ಲಿರುವ 2.30 ಲಕ್ಷ ಗೋವುಗಳ ನಿರ್ವಹಣೆಗೆ ಪ್ರತಿ ದಿನ 25 ರೂ. ಅನುದಾನ ವನ್ನು ಸರ್ಕಾರ ನೀಡುತ್ತಿದೆ. ಮೇವು ಕೊರತೆ ಯಿಂದಾಗಿ ಮೇವಿನ ಬೆಲೆಯೂ ಹೆಚ್ಚಳವಾಗಿದೆ. ಇನ್ನೊಂದೆಡೆ ಗೋಶಾಲೆಗೆ ಜಾನುವಾರುಗಳನ್ನು ತಂದುಬಿಡುವ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸಚಿವರು ಹೇಳಿದ್ದಾರೆ.