Advertisement

ಕೊವಿಶೀಲ್ಡ್‌ 2ನೇ ಡೋಸ್‌ ಅವಧಿ 6-8 ವಾರಗಳಿಗೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಪತ್ರ

07:25 PM Mar 22, 2021 | Team Udayavani |

ನವದೆಹಲಿ: ಕೊವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ಪಡೆಯಲು ಇರುವ ಅವಧಿಯನ್ನು ಈಗಿನ 28 ದಿನಗಳ ಬದಲಾಗಿ 6-8 ವಾರಗಳಿಗೆ ಹೆಚ್ಚಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

Advertisement

ದೇಶಾದ್ಯಂತ ಎರಡನೇ ಹಂತದ ಲಸಿಕೆ ವಿತರಣೆ ನಡೆಯುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ. ಎರಡು ಡೋಸ್‌ಗಳ ನಡುವಿನ ಅವಧಿಯನ್ನು ಹೆಚ್ಚಿಸಿದರೆ “ಸೋಂಕಿನಿಂದ ಸಂರಕ್ಷಣೆಯೂ ಹೆಚ್ಚುತ್ತದೆ’ ಎಂದು ಸರ್ಕಾರ ಅಭಿಪ್ರಾಯ ಪಟ್ಟಿದೆ.

ಪ್ರಸ್ತುತ ಮೊದಲ ಡೋಸ್‌ ಪಡೆದವರು 28 ದಿನಗಳ ಬಳಿಕ ಎರಡನೇ ಡೋಸ್‌ ಪಡೆಯುತ್ತಾರೆ. ಆದರೆ, ಈ ಅವಧಿಯನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಸಲಹೆಯಾಗಿದೆ. ಆದರೆ, ಡೋಸ್‌ ನೀಡುವಿಕೆಯ ಅವಧಿ ವಿಸ್ತರಣೆಯು ಕೇವಲ ಆಕ್ಸ್‌ ಫ‌ರ್ಡ್‌ ಆಸ್ಟ್ರಜೆನೆಕಾ ಅಭಿವೃದ್ಧಿಪಡಿಸಿರುವ, ಸೀರಂ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ತಯಾರಿಸಿರುವ “ಕೊವಿಶೀಲ್ಡ್‌’ ಲಸಿಕೆಗೆ ಮಾತ್ರ ಅನ್ವಯವಾಗುತ್ತದೆ. ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ಗೆ ಇದು ಅನ್ವಯವಾಗುವುದಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ :ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳ ಕಣ್ಣಿನ ಮೇಲೆ ಪ್ರಭಾವ ಬೀರುತ್ತಿದೆ: ಸುರೇಶ್‌ ಕುಮಾರ್‌

6 ಮತ್ತು 8 ವಾರಗಳ ಅವಧಿಯಲ್ಲಿ 2ನೇ ಡೋಸ್‌ ನೀಡಿದರೆ ಸೋಂಕಿನಿಂದ ಹೆಚ್ಚು ಸುರಕ್ಷತೆ ಸಿಗಲಿದೆ ಎಂಬುದು ಅರಿವಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಆದರೆ, ಈ ಅವಧಿಯು 8 ವಾರಗಳನ್ನು ದಾಟುವಂತಿಲ್ಲ ಎಂದೂ ಸರ್ಕಾರ ಹೇಳಿದೆ.

Advertisement

46,951 ಪ್ರಕರಣ:
ಭಾನುವಾರದಿಂದ ಸೋಮವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 46,951 ಮಂದಿಗೆ ಸೋಂಕು ದೃಢಪಟ್ಟಿದ್ದು, 212 ಮಂದಿ ಸಾವಿಗೀಡಾಗಿದ್ದಾರೆ. ಕೇವಲ 2 ದಿನಗಳಲ್ಲಿ 90,797 ಮಂದಿಯ ವರದಿ ಪಾಸಿಟಿವ್‌ ಎಂದು ಬಂದಂತಾಗಿದೆ. ಮಹಾರಾಷ್ಟ್ರವೊಂದರಲ್ಲೇ 24 ಗಂಟೆಗಳಲ್ಲಿ 30,535 ಹೊಸ ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ, ಉತ್ತರಾಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌ ಅವರಿಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next