Advertisement
ಜರ್ಮನಿಯ ದಂಪತಿ ಜೂಲಿಯಾ ಹಾಗೂ ಪೀಟರ್ ಬಾಡಿಗೆ ತಾಯಿಯ ಮೂಲಕ ಪಡೆದ ಶಿಶುವನ್ನು ಪಡೆಯುವ ಪ್ರಯತ್ನದಲ್ಲಿ ಯಶ ಕಂಡಿದ್ದರು. ಮೇ ಮೊದಲ ವಾರದಲ್ಲಿ ಉಕ್ರೇನ್‌ನ ಬಾಡಿಗೆ ತಾಯಿಯಿಂದ ಅವರಿಗೆ ಮಗು ಜನಿಸಿತ್ತು. ಕೊನೆಗೂ ನಮ್ಮದೇ ಮಗುವನ್ನು ಹೊಂದುವ ಪ್ರಯತ್ನ ಕೈಗೂಡಿದೆ ಎಂದು ಜೂಲಿಯಾ ಖುಷಿಯಿಂದಲೇ ಹೇಳಿದರು.
Related Articles
Advertisement
ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯ ವೃದ್ಧಿಸಲು ಮೊದಲ ವಾರ ಸಾಕಷ್ಟು ಮಹತ್ವಪೂರ್ಣವಾಗಿದೆ. ಈ ಸನ್ನಿವೇಶದಲ್ಲಿ ಸಾನ್ನಿಧ್ಯ ಸಾಧ್ಯವಾಗದೇ ಇರುವುದು ನೋವು ತರುತ್ತಿದೆ ಎಂದರು.
ಉಕ್ರೇನ್‌ನಲ್ಲಿ ಬಾಡಿಗೆ ತಾಯ್ತನಕ್ಕೆ ಕಾನೂನಾತ್ಮಕ ಅವಕಾಶವಿದೆ. ಅಲ್ಲಿ ಅದೊಂದು ಲಾಭದಾಯಕ ಉದ್ಯಮ. ಹತ್ತಾರು ಏಜೆನ್ಸಿಗಳೂ ಇವೆ. ಉದ್ದೇಶಿತ ತಾಯಿ-ತಂದೆಯರ ಜತೆಗೆ ಪಯಣಿಸಲು ಸಾಧ್ಯವಾಗದೆ ಎಷ್ಟು ಶಿಶುಗಳು ಕ್ಲಿನಿಕ್‌ನಲ್ಲಿ ಉಳಿದಿವೆ ಎನ್ನುವ ನಿಖರ ಅಂಕಿ-ಅಂಶ ಗೊತ್ತಾಗಿಲ್ಲ. ಕೆಲವು ಮೂಲಗಳ ಪ್ರಕಾರ, ನೂರಕ್ಕೂ ಹೆಚ್ಚು ಶಿಶುಗಳಿವೆ. ಕೆಲವು ಶಿಶುಗಳನ್ನು ಬಾಡಿಗೆ ಮನೆಗಳಲ್ಲಿಟ್ಟು. ಸಿಬಂದಿ ನೇಮಿಸಿ ನೋಡಿಕೊಳ್ಳಲಾಗುತ್ತಿದೆ. ಆದರೆ, ಅವರಿಗೆ ವೈದ್ಯಕೀಯ ತರಬೇತಿ ಇಲ್ಲ. ಕೋವಿಡ್ ಪರಿಣಾಮ, ಆರೋಗ್ಯ ಸಿಬಂದಿಯನ್ನೇ ನೇಮಿಸುವುದು ಏಜೆನ್ಸಿಗಳಿಗೆ ಕಷ್ಟವಾಗುತ್ತಿದೆ.
ಕೆಲವು ಏಜೆನ್ಸಿಗಳಿಗೆ ಅನುಮತಿಯೂ ಇಲ್ಲ. ಬಹುಶಃ ಅವು ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವು ತೆರಿಗೆಯನ್ನೂ ಪಾವತಿಸುತ್ತಿಲ್ಲ. ಶಿಶುಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಏಕರೂಪತೆಯೂ ಇಲ್ಲ. ಹೀಗಾಗಿ, ಏಜೆನ್ಸಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ದಂಪತಿ ಗಮನ ಹರಿಸುವುದು ಸೂಕ್ತ ಎಂದು ಕೈವ್‌ನ ಮೆಡಿಕಲ್ ಆ್ಯಂಡ್ ರಿಪ್ರೊಡಕ್ಟಿವ್ ಲಾ ಸೆಂಟರ್‌ನ ನಿರ್ದೇಶಕ ಸರ್ಗಿ ಅಂಟೋನೋವ್ ಎಚ್ಚರಿಸಿದ್ದಾರೆ.
ಶಿಶುಗಳೊಂದಿಗೆ ಈ ದಂಪತಿ ಸ್ವದೇಶಕ್ಕೆ ಮರಳಬೇಕಿದ್ದರೆ ರಾಯಭಾರ ಕಚೇರಿಗೆ ಸೂಕ್ತ ದಾಖಲೆಗಳನ್ನು ಒದಗಿಸಿಯೇ ಅನುಮತಿ ಪಡೆಯಬೇಕಾಗುತ್ತದೆ. ಬಾಧಿತ ಕುಟುಂಬಗಳಿಗೆ ನೆರವಾಗಲು ಕೈವ್ ಸಿದ್ಧವಿದೆ. ಆದರೆ, ಸೋಂಕು ಹರಡುವ ಅಪಾಯದ ಹಿನ್ನೆಲೆಯಲ್ಲಿ ಜರ್ಮನಿ ಇನ್ನೂ ಪರಾಮರ್ಶೆ ನಡೆಸುತ್ತಿದೆ ಎಂದು ಉಕ್ರೇನ್ ಆಡಳಿತ ತಿಳಿಸಿದೆ.
ಉಕ್ರೇನ್‌ನಲ್ಲಿ ಮಗುವಿನ ಜನನ ಪ್ರಮಾಣಪತ್ರದಲ್ಲಿ ಬಾಡಿಗೆ ತಾಯಿಯ ಹೆಸರನ್ನೂ ನಮೂದಿಸಲಾಗುತ್ತದೆ. ಜರ್ಮನಿ ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನ್ಮದಾತೆಯೇ ಮಗುವಿನ ತಾಯಿ ಎನ್ನುತ್ತದೆ ಜರ್ಮನ್ ಕಾನೂನು. ಈ ನೆಲೆಯಲ್ಲಿ ಬಾಡಿಗೆ ತಾಯಿಗೇ ಮಗುವಿನೊಂದಿಗೆ ಜರ್ಮನಿಗೆ ಪಯಣಿಸಲು ಅವಕಾಶ ಸಿಗುತ್ತದೆ. ಇದೂ ಶಿಶುಗಳೊಂದಿಗೆ ಅವುಗಳ ಪಾಲಕರ ಪ್ರಯಾಣ ವಿಳಂಬವಾಗುವುದಕ್ಕೆ ಕಾರಣವೆನಿಸಿದೆ.
ತಂದೆಯ ವಿಚಾರದಲ್ಲಿ ಪುರುಷನ ವೀರ್ಯಾಣುಗಳನ್ನು ಕೃತಕವಾಗಿ ಸಂತಾನ ಸಾಫಲ್ಯಕ್ಕೆ ಬಳಸಿದರೆ ಆಗಲೂ ಆತನೇ ಮಗುವಿನ ತಂದೆ ಎಂದು ಗುರುತಿಸಿಕೊಳ್ಳುತ್ತಾನೆ. ಮಗುವಿಗೆ ಜರ್ಮನ್ ಪೌರತ್ವವನ್ನೂ ಕೊಡಲಾಗುತ್ತದೆ. ಆಗ ಉದ್ದೇಶಿತ ತಾಯಿ ಮಗುವನ್ನು ಜರ್ಮನಿಯ ತನ್ನ ಮನೆಯಲ್ಲಿ ದತ್ತು ಪಡೆಯಬೇಕಾಗುತ್ತದೆ.
ಶಿಶುಗಳ ವೀಡಿಯೋ ಒಂದು ರಾಜಕೀಯ ಚರ್ಚೆಗೂ ನಾಂದಿ ಹಾಡಿದೆ. 2019ರಲ್ಲಿ ಉಕ್ರೇನ್‌ನ ಬಾಡಿಗೆ ತಾಯಿಯಿಂದ 1,500 ದಂಪತಿ ಮಕ್ಕಳನ್ನು ಹೊಂದಿದ್ದಾರೆ. ಉಕ್ರೇನ್‌ನಲ್ಲೂ ಬಾಡಿಗೆ ತಾಯ್ತನವನ್ನು ನಿಷೇಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಆದರೆ, ಬಾಡಿಗೆ ತಾಯ್ತನಕ್ಕೆ ಹೊರದೇಶಗಳಿಂದ ಭಾರೀ ಬೇಡಿಕೆ ಇರುವುದರಿಂದ ಇಲ್ಲಿ ನಿಷೇಧಿಸಿದರೆ ಅಕ್ರಮಗಳಿಗೆ ಅವಕಾಶ ನೀಡಿದಂತಾಗಬಹುದು. ನಿಷೇಧಿಸಲು ಸಾಧ್ಯವಿಲ್ಲದಿದ್ದರೆ ಸೂಕ್ತ ಕಾನೂನು ರೂಪಿಸುವಂತೆ ಇನ್ನೂ ಕೆಲವರು ಒತ್ತಾಯಿಸಿದ್ದಾರೆ.