ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಕೋವಿಡ್ ಪ್ರವಾಹ ತಣ್ಣಗಾಗುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಕಾಣಿಸಿಕೊಳ್ಳುತ್ತಿದೆ. ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆ ಬಹುತೇಕ ಮುಗಿದಿದ್ದು, ಮುಂದಿನ ದಿನಗಳಲ್ಲಿ ಕೋವಿಡ್-19 ಸೋಂಕು ದೃಢವಾಗುವ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಶುಕ್ರವಾರ ಹೇಳಿದ್ದರು.
ಶುಕ್ರವಾರ ಜಿಲ್ಲೆಯಲ್ಲಿ 204 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದವು. ಅವುಗಳಲ್ಲಿ 203 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದರು. ಉಳಿದಂತೆ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿದ್ದ ಓರ್ವ ಪೇದೆಗೆ ಸೋಂಕು ದೃಢವಾಗಿತ್ತು.
ಇಂದಿನ ಪ್ರಕರಣಗಳನ್ನು ಸೇರಿಸಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 103 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 785 ಸಕ್ರೀಯ ಪ್ರಕರಣಗಳಿದ್ದು, ಓರ್ವ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿಂದು ಹೊಸ 378 ಸೋಂಕು ಪ್ರಕರಣಗಳು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 280 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 1968 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ 3184 ಸಕ್ರೀಯ ಪ್ರಕರಣಗಳಿದ್ದು, 59 ಜನರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.