ಬೆಂಗಳೂರು: ಕೋವಿಡ್ 19 ಸೋಂಕಿನಿಂದ ನಗರದ ಮಲ್ಟಿಪ್ಲೆಕ್ಸ್,ಚಿತ್ರ ಮಂದಿರ, ವಾಣಿಜ್ಯ ಉದ್ದಿಮೆಗಳು ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶಗಳನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಿರುವುದು ಪಾಲಿಕೆಗೆ ಪರೋಕ್ಷವಾಗಿ ವರದಾನವಾಗಿದೆ.
ನಗರದಲ್ಲಿ ವಾಣಿಜ್ಯ ಉದ್ದಿಮೆಗಳನ್ನು ಬಂದ್ ಮಾಡಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುತ್ತಿದ್ದ ಅಂದಾ ಜು 1,500 ಮೆಟ್ರಿಕ್‌ಟನ್ ಕಸ ಉತ್ಪಾದನೆ ಶೇ.99 ಪ್ರಮಾಣದಲ್ಲಿ ಕುಸಿದಿದೆ. ಜನಸಾಂದ್ರತೆ ಕಡಿಮೆಯಾಗಿರುವುದರಿಂದ ಸ್ವಚ್ಛತೆ ಕಾರ್ಯಾಚರಣೆಯೂ ಚುರುಕು ಪಡೆದುಕೊಂಡಿದೆ.
ಈ ಹಿಂದೆ ಮಿಟ್ಟಗಾನಹಳ್ಳಿ ಭೂಭರ್ತಿಗೆ ನಿತ್ಯ 422 ಕಾಂಪ್ಯಾಕ್ಟರ್‌ಗಳಲ್ಲಿ ಮಿಶ್ರಕಸ ಸಾಗಿಸಲಾಗುತ್ತಿತ್ತು. ಸದ್ಯ ಈ ಸಂಖ್ಯೆ 352ಕ್ಕೆ ಇಳಿಕೆಯಾಗಿದೆ. 70ಕ್ಕೂ ಹೆಚ್ಚು ಕಾಂಪ್ಯಾಕ್ಟರ್ ಗಳನ್ನು ನಿಲ್ಲಿಸಲಾಗಿದೆ. ಮಿಟ್ಟಿಗಾನಹಳ್ಳಿ ಭೂಭರ್ತಿಗೆ ಮಾ.12ರವರೆಗೆ 4 ಸಾವಿರ ಮೆಟ್ರಿಕ್‌ಟನ್ ಮಿಶ್ರಕಸ ಸಾಗಿಸಲಾಗುತ್ತಿತ್ತು. ಸದ್ಯ ಅಂದಾಜು 3 ಸಾವಿರ ಮೆಟ್ರಿಕ್‌ಟನ್‌ಗೆ ಕುಸಿದಿದೆ.
ಮಾ.14ರಿಂದ ನಗರದ ಚಿತ್ರಮಂದಿರ, ಮಾಲ್‌ಗಳು ಸೇರಿದಂತೆ ಸಗಟು ಕಸ ಉತ್ಪಾದನೆ ಮಾಡುವ ಉದ್ದಿಮೆಗಳು ಬಂದ್ ಆಗಿದ್ದು, ಈ ಉದ್ದಿಮೆಗಳಿಂದ ಉತ್ಪಾದನೆಯಾಗುತ್ತಿರುವ ಕಸ ಪ್ರಮಾಣ ಶೂನ್ಯವಾಗಿದೆ. ಮಾರುಕಟ್ಟೆ ಹಾಗೂ ಸೂಪರ್ ಮಾರ್ಕೆಟ್ ಕಸ ಮಾತ್ರ ಉತ್ಪಾದನೆಯಾಗುತ್ತಿದೆ. ಇದರಿಂದ ಭೂಭರ್ತಿಗೆ ಹೋಗುತ್ತಿದ್ದ ಕಸದ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಅಲ್ಲದೆ, ನಗರದಲ್ಲಿ ಕಾಲರಾ, ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ರಸ್ತೆಬದಿಗಳಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟ ನಿಷೇಧದಿಂದ ಸ್ವಚ್ಛತೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು
ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ)ಆಯುಕ್ತ ರಂದೀಪ್, ನಗರದಲ್ಲಿ ಎರಡು ವಾರಗಳ ಕಾಲ ಮಾಲ್, ಪಬ್ಸ್ ಗಳನ್ನು ಬಂದ್ ಮಾಡಿರುವುದರಿಂದ ಭೂಭರ್ತಿಗೆ ಹೋಗುತ್ತಿದ್ದ ಕಾಂಪ್ಯಾಕ್ಟರ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನಗರದಲ್ಲಿ ಮಿಶ್ರಕಸದ ಪ್ರಮಾಣವೂ ಕಡಿಮೆಯಾಗಿದ್ದು, ಈ ಸಂದರ್ಭವನ್ನು ಲೋಪ ತಿದ್ದಿಕೊಳ್ಳಲು ಬಳಸಿಕೊಳ್ಳುತ್ತಿದ್ದೇವೆ. ಬ್ಲಾಕ್‌ಸ್ಪಾಟ್‌ಗಳ ನಿರ್ಮೂಲನೆ, ಎಲ್ಲಿಂದ ಹೆಚ್ಚು ಮಿಶ್ರಕಸ ಉತ್ಪಾದನೆಯಾಗುತ್ತಿತ್ತು ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.
ಪೌರಕಾರ್ಮಿಕರು ಬರುತ್ತಿಲ್ಲ! : ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಪಾಲಿಕೆಯ ಪೌರಕಾರ್ಮಿಕರು ಕೆಲಸಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. ಭೀತಿ ಕಾರಣದಿಂದ ಕೆಲವು ಪೌರಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ, ಜಾಗೃತಿ ಮೂಡಿಸಲಾಗುತ್ತಿದ್ದು, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಲರಾ ಮತ್ತು ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ರಸ್ತೆಬದಿ ಮಳಿಗೆಗಳ ತೆರವು, ಸ್ವಚ್ಛತಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದೇ ಮಾದರಿಯನ್ನು ಮುಂದುವರಿಸುತ್ತೇವೆ.
-ರಂದೀಪ್ ವಿಶೇಷ ಆಯುಕ್ತ (ಘನತ್ಯಾಜ್ಯ)
– ಹಿತೇಶ್ ವೈ