ರಾಯಚೂರು: ಎಲ್ಲೆಡೆ ಕೋವಿಡ್ 19 ಸೋಂಕು ಹಬ್ಬಿ ಇರುವ ಉದ್ಯೋಗಗಳನ್ನೆಲ್ಲ ಕಸಿದರೆ, ಜಿಲ್ಲೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿಸಿದೆ..!
ಕೋವಿಡ್ 19 ಕಾಯಿಲೆ ಬಂದ ಮೇಲೆ ಕೆಲಸಗಳೆಲ್ಲ ಸ್ಥಗಿತಗೊಂಡಿವೆ. ಆದರೆ, ಹಲವು ಸ್ವ ಸಹಾಯ ಗುಂಪುಗಳು ಹಣ ಗಳಿಸುತ್ತಿರುವುದು ವಿಶೇಷ. ಸೋಂಕಿನ ಭೀತಿ ಹೆಚ್ಚಾಗುತ್ತಿದ್ದಂತೆ, ಮಾರುಕಟ್ಟೆಯಲ್ಲಿ ಮಾಸ್ಕ್ ಗಳಿಗೆ ಭಾರಿ ಕೊರತೆ ಕಂಡು ಬರುತ್ತಿದೆ. ಹಣ ಕೊಟ್ಟರೂ ಸಿಗುತ್ತಿಲ್ಲ. ಇದನ್ನು ಗಮನಿಸಿದ ಜಿಪಂ ಸಿಇಒ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ 10 ಸಾವಿರ ಮಾಸ್ಕ್ ಸಿದ್ಧಪಡಿಸಿ ಎಲ್ಲ ಗ್ರಾಪಂಗಳಿಗೆ ಪೂರೈಸಲು ಸೂಚಿಸಿದ್ದರು. ಅದು ಸಾಕಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ.
ಜಿಲ್ಲೆಯ ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪುರ ಹಾಗೂ ಎಲ್. ಕೆ.ದೊಡ್ಡಿ ಸಂಜೀವಿನಿ ಒಕ್ಕೂಟ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಒಂದು ಮಾಸ್ಕ್ಗೆ 10 ರೂ. ನಂತೆ 5,000 ಮಾಸ್ಕ್ ಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳನ್ನು ಜಿಪಂ ಸಿಇಒಗೆ ಹಸ್ತಾಂತರಿಸಿದರು. ಮೊದಲು ಟೈಲರಿಂಗ್ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಂಡಿದ್ದ ಸಂಘದ ಸದಸ್ಯರು ಈಗ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಮಹಿಳೆಯರಿಗೆ ಕೈ ತುಂಬಾ ಕೆಲಸ ಸಿಕ್ಕಂತಾಗಿದೆ. ಪ್ರಾರಂಭದಲ್ಲಿ ಕೇವಲ 2ರಿಂದ 5 ಸದಸ್ಯರಿದ್ದರು ಈಗ 15 ರಿಂದ 20 ಸದಸ್ಯರು ಈ ಕಾಯಕದಲ್ಲಿ ತೊಡಗಿದ್ದಾರೆ.
ಸೂಕ್ತ ಮಾರ್ಗದರ್ಶನ: ಮಾಸ್ಕ್ ತಯಾರಿಕೆಗೆ ಕೆಲ ನಿಯಮಗಳಿದ್ದು, ಅವನ್ನು ಕೂಡ ಪಾಲಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಂಘದ ಸದಸ್ಯರಿಗೆ ಮಾಸ್ಕ್ ಹೇಗೆ ಸಿದ್ಧಪಡಿಸಬೇಕು ಎಂದು ತಿಳಿಸಿದ್ದಾರೆ. ಜತೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಪೂರೈಸಿದ್ದಾರೆ. ಕೇವಲ ಸದಸ್ಯರು ಸಿದ್ಧಪಡಿಸಿದರೆ ಒಂದು ಮಾಸ್ಕ್ ಗೆ 10 ರೂ. ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಮಾಸ್ಕ್ಗಳಿಗೆ ಸಾಕಷ್ಟು ಕೊರತೆ ಇದೆ. ಹೀಗಾಗಿ ಸ್ವ ಸಹಾಯ ಸಂಘಗಳ ನೆರವು ಪಡೆಯತ್ತಿದ್ದೇವೆ. ನಿತ್ಯ ಒಂದರಿಂದ ಎರಡು ಸಾವಿರ ಮಾಸ್ಕ್ ಸಿದ್ಧಗೊಳ್ಳುತ್ತಿವೆ. ಈಗಾಗಲೇ 5 ಸಾವಿರ ಮಾಸ್ಕ್ ನೀಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಸೇರಿದಂತೆ ಕರ್ತವ್ಯ ನಿರತರಿಗೆ ನೀಡಲಾಗುತ್ತಿದೆ
.- ಲಕ್ಷ್ಮೀಕಾಂತ ರೆಡ್ಡಿ ಜಿಪಂ ಸಿಇಒ.
-ಸಿದ್ದಯ್ಯಸ್ವಾಮಿ ಕುಕನೂರು