Advertisement

ಕೋವಿಡ್: ಹಬ್ಬದ ವೇಳೆ ಎಚ್ಚರ; ಕೇಂದ್ರ ಸಮಿತಿ ಪ್ರತಿಪಾದನೆ; ಚಳಿಗಾಲದಲ್ಲಿ 2ನೇ ಅಲೆ

12:51 AM Oct 19, 2020 | mahesh |

ಹೊಸದಿಲ್ಲಿ: ಹಬ್ಬದ ಸಮಯದಲ್ಲಿ ನಾಗರಿಕರು ಎಚ್ಚರಿಕೆ ಕ್ರಮಗಳನ್ನು ಪಾಲಿಸದೆ ಇದ್ದರೆ ದೇಶದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಸಕ್ತ ಚಳಿಗಾಲದ ಅವಧಿಯಲ್ಲಿ ಕೊರೊನಾದ 2ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೊರೊನಾ ನಿಯಂತ್ರಣಕ್ಕೆ ಸರಕಾರ ರಚಿಸಿದ್ದ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ.

Advertisement

ಐಐಟಿ ಹೈದರಾಬಾದ್‌ ಪ್ರಾಧ್ಯಾಪಕ ಎಂ. ವಿದ್ಯಾಸಾಗರ ನೇತೃತ್ವದ ಸಮಿತಿ ಅಧ್ಯಯನ ನಡೆಸಿ ಈ ಅಭಿಪ್ರಾಯಕ್ಕೆ ಬಂದಿದೆ. ಮುನ್ನೆಚ್ಚರಿಕೆ ಇಲ್ಲದಿದ್ದರೆ ಹಬ್ಬದ ಋತುವಿನಲ್ಲಿ 26 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣ ದಾಖಲಾಗಬಹುದು (ಈಗ ಇರುವುದು 7.83 ಲಕ್ಷ ) ಎಂದಿರುವ ತಜ್ಞರು ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದಿದ್ದಾರೆ. ದೇಶದಲ್ಲಿ ಶೇ. 30ರಷ್ಟು ಮಂದಿ ಮಾತ್ರ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸೋಂಕು ಏರಿಳಿತ
ದೇಶದಲ್ಲಿ ಕೋವಿಡ್ ಸೋಂಕಿನ ಏರಿಕೆಯ ಗರಿಷ್ಠ ಮಿತಿ ಈಗಾಗಲೇ ತಲುಪಿದೆ. ಸದ್ಯ ಕಡಿಮೆಯಾಗುತ್ತಿದೆ. ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಕೈಗೊಂಡರೆ ಮುಂದಿನ ವರ್ಷದ ಆರಂಭದಲ್ಲಿ ನಿಯಂತ್ರಿಸಲು ಸಾಧ್ಯ. ಇಲ್ಲದಿದ್ದರೆ ದೇಶದಲ್ಲಿ ಸೋಂಕಿತರ ಸಂಖ್ಯೆ 1.6 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಮಿತಿ ಎಚ್ಚರಿಸಿದೆ.

ಲಾಕ್‌ಡೌನ್‌ನಿಂದ ನೆರವು
ಮಾರ್ಚ್‌ನಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಸೋಂಕು ಹರಡು ವುದನ್ನು ತಡೆಯಲು ನೆರವಾಯಿತು. ಇಲ್ಲದಿದ್ದರೆ ದೇಶದಲ್ಲಿ ಸಾವಿನ ಸಂಖ್ಯೆ 25 ಲಕ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿದ್ದವು ಎನ್ನಲಾಗಿದೆ.

ವಾಯುಮಾಲಿನ್ಯದಿಂದ ಹೆಚ್ಚಳ?
ವಾಯುಮಾಲಿನ್ಯ ಹೆಚ್ಚುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದು ಜನರನ್ನು ಹೆಚ್ಚು ತೊಂದರೆಗೆ ಸಿಲುಕಿಸಲಿದೆ ಎಂದು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌)ಯ ಮೆಡಿಸಿನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ನೀರಜ್‌ ನಿಶ್ಚಲ್‌ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ. ಈ ಪೈಕಿ ಸಮಾಜದ ಕೆಳ ಸ್ತರದಲ್ಲಿರುವ ವ್ಯಕ್ತಿಗಳಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಬಹುದೆಂದು ನಿಶ್ಚಲ್‌ ತಿಳಿಸಿದ್ದಾರೆ.

Advertisement

ಓಣಂ ಸಂದರ್ಭ ನಿರ್ಲಕ್ಷ್ಯ ತೋರಿದ್ದಕ್ಕೆ ಕೇರಳ ಬೆಲೆ ತೆರುತ್ತಿದೆ. ಜೀವ ಒತ್ತೆ ಇಟ್ಟು ಹಬ್ಬಗಳನ್ನು ಆಚರಿಸಬೇಕು ಎಂದು ಯಾರೂ ಹೇಳುವುದಿಲ್ಲ.
– ಡಾ| ಹರ್ಷವರ್ಧನ್‌, ಕೇಂದ್ರ ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next