ಔರಾದ: ಸುಂಧಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಗ್ರಾಪಂ ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅದರಂತೆ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ ಮಾಡುವ ಮೂಲಕ ಅವರ ಉತ್ಸಾಹ ಹೆಚ್ಚಿಸುತ್ತಿರುವ ಹೆಮ್ಮೆಯ ವಿಷಯ ಎಂದು ತಾಪಂ ಇಒ ಮಾಣಿಕರಾವ ಪಾಟೀಲ್ ಹೇಳಿದರು.
ಸುಂಧಾಳ ಗ್ರಾಪಂ ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಗ್ರಾಪಂ ಸದಸ್ಯರು ತಮ್ಮ ಬಡಾವಣೆಯಲ್ಲಿ ಹಾಗೂ ಗ್ರಾಮಗಳಲ್ಲಿ ಸಕಾಲಕ್ಕೆ ಒಳ್ಳೆಯ ಜಾಗೃತೆಯಿಂದ ಕೆಲಸ ಮಾಡಿದ್ದಾರೆ ಎಂದರು.
ತಾಪಂ ಸಹಾಯಕ ನಿರ್ದೇಶಕ
ಶಿವಕುಮಾರ ಘಾಟೆ ಮಾತನಾಡಿ, ಪ್ರತಿಯೊಬ್ಬರು ಸೇರಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿರುವುದರಿಂದ ಇಂದು ಪಂಚಾಯತ್ ಸುರಕ್ಷಿತವಾಗಿದೆ. ಸಕಾಲಕ್ಕೆ ಬೇರೆ ರಾಜ್ಯಗಳಿಂದ ಬಂದ ಸಂಬಂಧಿಕರ ಹಾಗೂ ಗುಳೆ ಹೋದ ಕಾರ್ಮಿಕರ ಮಾಹಿತಿ ನೀಡಿ ಅವರಿಗೆ ಕ್ವಾರಂಟೈನ್‌ನಲ್ಲಿ ಇರುವಂತೆ ಮಾಡಿದ್ದು ಉತ್ತಮ ಕೆಲಸ ಎಂದರು.
ಗ್ರಾಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ಮಾತನಾಡಿ, ಗ್ರಾಮಗಳಲ್ಲಿ ಅಭಿವೃದ್ಧಿಯ ಕಾಮಗಾರಿಗಳು ಮಾಡುವುದರ ಜತೆಗೆ ಜನ ಸಾಮಾನ್ಯರನ್ನು ಸುರಕ್ಷತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿತ್ತು. ಅದರಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಾಲೂಕು ಮಟ್ಟದ ಅಧಿಕಾರಿಗಳ ಕರ್ತವ್ಯದ ಉತ್ಸಾಹ ನೋಡಿಕೊಂಡು ಕೈಲಾದಷ್ಟು ಕೋವಿಡ್ ಸಮಯದಲ್ಲಿ ಸೇವೆ ಮಾಡಿದ್ದೇವೆ ಇನ್ನೂ ನಿರಂತರವಾಗಿ ಮಾಡುತ್ತೇವೆ ಎಂದರು. ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರತಿಯೊಂದು ಗ್ರಾಮದಲ್ಲಿ ಸ್ವಚ್ಛತೆ, ಗೋಡೆ ಬರಹದ ಮೂಲಕ ಜಾಗೃತಿ, ಡಂಗೂರ ಸಾರುವುದರ ಮೂಲಕ ಹಾಗೂ ನಮ್ಮ ಆಡಳಿತ ಮಂಡಳಿ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರತಿ ಗ್ರಾಮದಲ್ಲಿ ಅರಿವು ಮೂಡಿಸಲಾಗಿದೆ ಎಂದರು.
ಪಿಡಿಒ ನಾಗೇಶ ಮುಕ್ರಂಬೆ ಮಾತನಾಡಿ, ಸದಸ್ಯರ ಸಹಕಾರದಿಂದ ಇಷ್ಟೊಂದು ರೀತಿಯಲ್ಲಿ ಒಳ್ಳೆಯ ಕೆಲಸ ಮಾಡಲಾಗಿದೆ. ಉತ್ತಮವಾಗಿ ಹಾಗೂ ನಿಸ್ವಾರ್ಥವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದ ನಡೆದಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಕಲಾವತಿ, ಗುಂಡಯ್ನಾ ಸ್ವಾಮಿ, ಶಿವರಾಜ ದೇಶಮುಖ, ಗಣಪತಿ ದೊಡ್ಡೆ, ಮುಖಂಡ ದಯಾನಂದ ಹಳಿಖೇಡೆ, ಬಸವಂತರಾವ ಇತರರು ಕೋವಿಡ್ ವಾರಿಯರ್ಸ್‌ರನ್ನು ಸನ್ಮಾನಿಸಿದರು.