ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ ಸೋಂಕಿತರಾದವರ ಪೈಕಿ 119 ಮಂದಿ ಮೃತಪಟ್ಟಿದ್ದಾರೆ.
ಇವರಲ್ಲಿ ನಾಲ್ವರು ಕೋವಿಡ್ ಯೋಧರಾಗಿದ್ದಾರೆ. ನಾಲ್ವರು ಕೋವಿಡ್ ಯೋಧರಲ್ಲಿ ಮೂವರು ಪೊಲೀಸರು ಎಂಬುದು ಗಮನಾರ್ಹ. ಇನ್ನೋರ್ವರು ಚಾಮರಾಜನಗರ ನಗರಸಭೆಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರು : ಚಾ.ನಗರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೂವರು ಹುತಾತ್ಮರಾಗಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪರಮೇಶ್ವರಪ್ಪ (57) ಸೆ.30 ರಂದು ಮೃತಪಟ್ಟಿದ್ದಾರೆ. ಇವರು ಗುಂಡ್ಲುಪೇಟೆ ತಾಲೂಕುಕುಣಗಳ್ಳಿ ಗ್ರಾಮದವರು. ಗುಂಡ್ಲುಪೇಟೆ ಪೊಲೀಸ್‌ಠಾಣೆಯ ಮುಖ್ಯ ಪೇದೆಕೆ.ಎನ್. ಸುರೇಶ್ (45) ಆ.30ರಂದು ಮೃತಪಟ್ಟಿದ್ದಾರೆ. ಇವರು ಗುಂಡ್ಲುಪೇಟೆ ತಾಲೂಕು ಕಿಲಗೆರೆ ಗ್ರಾಮದವರು. ಚಾಮರಾಜನಗರ ಜಿಲ್ಲಾ ಸಶಸ್ತ್ರ ಪಡೆಯಲ್ಲಿ ಪೇದೆಯಾಗಿದ್ದ ರವಿಕುಮಾರ್(36) ಅ.4ರಂದು ಮೃತರಾಗಿದ್ದಾರೆ. ಇವರು ಕೊಳ್ಳೆಗಾಲ ತಾಲೂಕು ಪಾಳ್ಯದವರು. ಈ ಮೂವರಿಗೂ ರಾಜ್ಯ ಸರ್ಕಾರ ತಲಾ 30 ಲಕ್ಷ ರೂ. ಪರಿಹಾರ ನೀಡಿದೆ.
ನಗರಸಭೆ ಅಧಿಕಾರಿ : ಚಾಮರಾಜನಗರ ನಗರಸಭೆಕಿರಿಯ ಎಂಜಿನಿಯರ್ ಸುಬ್ರಮಣಿ (57) ಅಕ್ಟೋಬರ್ 11ರಂದು ಮೃತಪಟ್ಟರು. ಇವರು ಮೂಲತಃ ಮೈಸೂರಿನವರು.ಮೃತರಾಗಿ 10 ದಿನಗಳಾಗಿವೆ. ನಗರಸಭೆಯಿಂದ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆಕಳುಹಿಸಿಕೊಡಲಾಗಿದೆ. ಅವರ ಕುಟುಂಬಕ್ಕೆ ವಿಮಾ ಪರಿಹಾರ ಶೀಘ್ರವೇ ದೊರೆಯಲಿದೆ ಎಂದು ನಗರಸಭೆ ಆಯುಕ್ತ ರಾಜಣ್ಣ ತಿಳಿಸಿದ್ದಾರೆ.
ಮೂವರ ಕುಟುಂಬಕ್ಕೂ ಪರಿಹಾರ ತಲುಪಿದೆ : ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿಕರ್ತವ್ಯ ನಿರ್ವಹಿಸುವಾಗ ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಕೋವಿಡ್ ಯೋಧರಿಗೆ ನೀಡಬೇಕಾದ ಪರಿಹಾರಕೊಡಿಸುವಲ್ಲಿ ತುರ್ತು ಕ್ರಮಕೈಗೊಂಡಿದ್ದೇವೆ. ಮೂವರ ಕುಟುಂಬಗಳಿಗೂ ಪರಿಹಾರಧನ ತಲುಪಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್ ತಿಳಿಸಿದ್ದಾರೆ.
-ಕೆ.ಎಸ್.ಬನಶಂಕರ ಆರಾಧ್ಯ