ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಕೋವಿಡ್ ಸೋಂಕಿನ ನಿಯಂತ್ರಣದಲ್ಲಿ ತೊಡಗಿರುವ ವೈದ್ಯರಿಗೆ ಮತ್ತು ಕಾನೂನು ಪರಿಪಾಲನೆಗೆ ಶ್ರಮಿಸುತ್ತಿರುವ ಪೊಲೀಸರಿಗೂ ಸೋಂಕು ತಗುಲುತ್ತಿರುವುದು ಈ ಮಹಾಮಾರಿಯ ನಿಯಂತ್ರಣದ ವಿಚಾರದಲ್ಲಿ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಮಂಗಳವಾರ ಒಂದೇ ದಿನ ಕೋವಿಡ್ ಆಸ್ಪತ್ರೆಯ ಮುಖ್ಯ ವೈದ್ಯರ ಸಹಿತ ವಿವಿಧ ಆಸ್ಪತ್ರೆಗಳ 8 ಮಂದಿ ವೈದ್ಯರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಕಳೆದೊಂದು ವಾರದ ಅವಧಿಯಲ್ಲಿ ಹಲವು ಮಂದಿ ವೈದ್ಯರು ಸೋಂಕಿಗೊಳಗಾಗಿದ್ದು, ರೋಗಿಗಳ ಮತ್ತು ಕೋವಿಡ್ 19 ಸೋಂಕು ದೃಢಪಟ್ಟ ವೈದ್ಯರ ಸಂಪರ್ಕದಲ್ಲಿದ್ದ ಸುಮಾರು 58ಕ್ಕೂ ಹೆಚ್ಚು ಮಂದಿ ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
ಇದೇವೇಳೆ ಮಂಗಳೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಪೊಲೀಸರು ಹಾಗೂ ಹೋಂಗಾರ್ಡ್‌ಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಪ್ರಸ್ತುತ ವಾಮಂಜೂರು ಗ್ರಾಮಾಂತರ ಠಾಣೆಯಲ್ಲಿರುವ ಪೊಲೀಸ್ ಪೇದೆ ಹಾಗೂ ಉಳ್ಳಾಲ ಠಾಣೆಯ ಓರ್ವ ಪೇದೆ ಮತ್ತು ಹೋಂಗಾರ್ಡ್ ಸಹಿತ ಮೂವರು ಕೋವಿಡ್ 19 ಸೋಂಕು ದೃಢಪಟ್ಟವರು.
ಉಳ್ಳಾಲ ಠಾಣೆಯಲ್ಲಿ ಆರೋಪಿಯೋರ್ವನಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಆತನ ಸಂಪರ್ಕದಿಂದ ಪೊಲೀಸ್ ಸಿಬಂದಿಗೆ ತಗುಲಿರುವ ಶಂಕೆ ಇದೆ. ಈಗಾಗಲೇ ಉಳ್ಳಾಲ ಠಾಣೆಯ 10 ಮಂದಿ ಪೊಲೀಸರಿಗೆ ಈ ಸೋಂಕು ದೃಢಪಟ್ಟಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.