ಜೀಯು
ಹೊನ್ನಾವರ: ಕೊರೊನಾ ಮೊದಲ ಅಲೆ ಜನರಿಗೆ ಮತ್ತು ವಾರಿಯರ್‌ಗಳಿಗೆ ಅನುಭವದಲ್ಲೇ ಕಳೆಯಿತು. ಎರಡನೇ ಅಲೆಯಲ್ಲಿ ಕೊರೊನಾ ವಾರಿಯರ್‌ಗಳು ಹೆಚ್ಚು ಸಜ್ಜುಗೊಂಡರೂ ಜನ ಅರ್ಥಮಾಡಿಕೊಳ್ಳಲೇ ಇಲ್ಲ. ಎರಡನೇ ಅಲೆಯಲ್ಲಿ ಕೊರೊನಾ ಜಿಲ್ಲೆಯನ್ನು ಹೆಚ್ಚಾಗಿ ಬಾಧಿಸುತ್ತಿದೆ. ನಾವು ಇಷ್ಟೆಲ್ಲಾ ಮಾಡಿಯೂ ಜನ ಅರ್ಥಮಾಡಿಕೊಂಡು ಆರೋಗ್ಯವಾಗಿ ಉಳಿಯಲು ಸ್ಪಂದಿಸುವುದಿಲ್ಲ. ಇದನ್ನು ಹೇಳಲಾರದ, ಹೇಳಿಕೊಳ್ಳದೆಯೂ ಇರಲಾರದ ಸಂಕಷ್ಟಮಯ ಸ್ಥಿತಿಯಲ್ಲಿ ದಿನಕಳೆಯುತ್ತಿದ್ದೇವೆ ಎನ್ನುತ್ತಿದ್ದಾರೆ ವಾರಿಯರ್‌ಗಳು.
ಜಿಲ್ಲೆಯ ಆಡಳಿತ ಮತ್ತು ವೈದ್ಯಕೀಯ ರಂಗದ ಜವಾಬ್ದಾರಿಯುತ ಕರ್ತವ್ಯ ನಿರ್ವಹಣೆಯಿಂದಾಗಿ ಆಕ್ಸಿಜನ್, ಹಾಸಿಗೆ, ಔಷಧ ಕಡಿಮೆಯಾಗುವ, ನಿರ್ಲಕ್ಷÂದಿಂದ ಸಾವು ಸಂಭವಿಸುವ ಘಟನೆಗಳು ನಡೆದಿಲ್ಲ ಎಂಬುದನ್ನು ಮೆಚ್ಚಬೇಕಾಗಿದೆ. ಕೊರೊನಾ ಎರಡನೇ ಅಲೆ ತೀವ್ರವಾಗಿ ಬಾ ಧಿಸುತ್ತಿರುವ ಈ ಕಾಲದಲ್ಲಿ ಇನ್ನೂ ಆಸ್ಪತ್ರೆಗೆ ಬರಲು ಹಿಂದೆಮುಂದೆ ನೋಡುವವರಿದ್ದಾರೆ. ಮನೆಯಲ್ಲಿ ಕ್ವಾರಂಟೈನ್ ಆಗಿ ಎಂದರೆ ಊರು ಸುತ್ತುತ್ತಾರೆ. ಈಗ ಸರ್ಕಾರಿ ಕ್ವಾರಂಟೈನ್‌ಗೆ ಬನ್ನಿ ಎಂದು ಆಂಬ್ಯುಲೆನ್ಸ್‌ನಲ್ಲಿ ಕರೆದು ತರಲು ಹೋದರೆ ತಪ್ಪಿಸಿಕೊಳ್ಳುತ್ತಾರೆ. ಪೊಲೀಸರನ್ನು ಕರೆದುಕೊಂಡು ಹೋದರೂ ಬರುವುದಿಲ್ಲ. ಪೊಲೀಸರೂ ಈ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಈ ಪರಿಸ್ಥಿತಿಯಲ್ಲಿ ಜಿಲ್ಲೆಯ ಕೋವಿಡ್ ಪೀಡಿತರನ್ನು ಉಪಚರಿಸಬೇಕಾಗಿದೆ. ಜೊತೆಯಲ್ಲಿ ಇಲಾಖೆಗಳ, ಮೇಲಧಿ ಕಾರಿಗಳ ಆದೇಶ, ಆಸ್ಪತ್ರೆಯ ಒಳಹೊರ ಒತ್ತಡಗಳು ಕೊರೊನಾ ವಾರಿಯರ್ ಗಳಿಗೆ ಗೊಂದಲ ಉಂಟುಮಾಡಿ ಬೇಸರ ತರಿಸಿದೆ.
ಜಿಲ್ಲೆಯ ಹಲವಾರು ಕೊರೊನಾ ವಾರಿಯರ್ ಗಳ ಅಭಿಪ್ರಾಯವನ್ನು ಇಲ್ಲಿ ಹೇಳಿ ಜನರನ್ನು ಎಚ್ಚರಿಸಬೇಕಾಗಿದೆ. ಮೊದಲೇ ಕೊರೊನಾ ಅಲೆಗೆ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದವರು ಊಟ ಸರಿಯಿಲ್ಲ, ಕೋಣೆ ಸ್ವತ್ಛವಿಲ್ಲ, ನೀರು ಸಾಲುತ್ತಿಲ್ಲ ಎಂದು ನಿತ್ಯ ಪುಕಾರು ಮಾಡುತ್ತಿದ್ದರು. ಎರಡನೇ ಅಲೆಯಲ್ಲಿ ಮನೆ ವಾತಾವರಣ ಚೆನ್ನಾಗಿದ್ದರೆ ಮನೆಯಲ್ಲೇ ಉಳಿದುಕೊಳ್ಳಿ, ಪ್ರತ್ಯೇಕ ಕೋಣೆ ಇಲ್ಲವಾದರೆ ಯಾವುದಾದರೂ ಒಂದು ಮೂಲೆ ಸೇರಿಕೊಳ್ಳಿ. ಹಳೆಸೀರೆ ಅಥವಾ ಬಟ್ಟೆಗಳ ಕರ್ಟನ್ ಮಾಡಿಕೊಳ್ಳಿ ಎಂದು ಹೇಳಿದರೆ ಬಿಂದಾಸಾಗಿ ತಿರುಗಿ, ಮದುವೆಯಲ್ಲಿ ಉಂಡು, ಕಂಡಲ್ಲಿ ಕವಳ ಜಗೆದು ಉಗಿದ ಕಾರಣ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಔಷ ಧ ಅಂಗಡಿಯಲ್ಲಿ ಊರ ಯಾವುದೋ ಡಾಕ್ಟರ್‌ರಲ್ಲಿ ಔಷಧ ಪಡೆಯುತ್ತ ನಾಲ್ಕಾರು ದಿನ ಕಳೆದು ಕೊನೆಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಕಾಯಿಲೆ ತೀವ್ರವಾಗಿರುತ್ತದೆ. ಇದ್ದ ಸ್ಥಳದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಬೆಡ್ ಕೊಟ್ಟು ಚಿಕಿತ್ಸೆ ಆರಂಭಿಸುವ ವೈದ್ಯರನ್ನು ಜನ ಸುಮ್ಮನೆ ಬಿಡುವುದಿಲ್ಲ.
ವಾಷಿಂಗ್ ಮಿಶನ್, ಬಿಸಿನೀರಿಗೆ ಗೀಸರ್, ಕುಡಿಯುವ ಬಿಸಿನೀರಿಗೆ ಹೀಟರ್ ಎಲ್ಲ ವ್ಯವಸ್ಥೆ ಮಾಡಿದ್ದರೂ ಇದನ್ನು ಸರಿಯಾಗಿ ಬಳಸದೆ ಅವು ಕೆಟ್ಟು ನಿಲ್ಲುತ್ತವೆ. ಮತ್ತೆ ಪುಕಾರು. ಮನೆಯಲ್ಲಿ ಕ್ವಾರಂಟೈನ್ ಇದ್ದವರನ್ನು ಅಲ್ಲಿ ಬಿಡುವುದು ಬೇಡ, ಸರ್ಕಾರಿ ಕ್ವಾರಂಟೈನ್ ಆರಂಭಿಸಿ ಎಂದು ಎರಡು ದಿನಗಳ ಹಿಂದೆ ಆದೇಶ ಬಂದ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಹಾಸ್ಟೆಲ್ ಮತ್ತು ಸರ್ಕಾರಿ ಕಟ್ಟಡವನ್ನು ಗುರುತಿಸಿ ಕ್ವಾರಂಟೈನ್ ಗೆ ಬೇಕಾದ ಹಾಸಿಗೆ, ನೀರು, ಬೆಳಕು ಎಲ್ಲ ವ್ಯವಸ್ಥೆ ಮಾಡಿದ ತಾಲೂಕಾಡಳಿತಗಳು ಆಂಬ್ಯುಲೆನ್ಸ್ ತೆಗೆದುಕೊಂಡು ಮನೆಗೆ ಹೋಗಿ ಕರೆದರೆ ಬರಲು ಒಪ್ಪುವುದಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಸೋಂಕಿರುವ ಪ್ರದೇಶದ ರಸ್ತೆ ಬಂದ್ ಮಾಡಿ ಸ್ಪೇಶಲ್ ಕಂಟೈನ್ ಮೆಂಟ್ ಜೋನ್ ಎಂದು ಬೋರ್ಡ್ ಹಾಕಿದರೂ ತೋಟ, ಗುಡ್ಡ ಸುತ್ತಿ ಓಡಾಡುತ್ತಾರೆ. ಕಂಟೈನ್‌ಮೆಂಟ್ ಜೋನ್ ಕೂಡ ಫಲ ನೀಡುತ್ತಿಲ್ಲ. ನಿನ್ನೆ ಇಡೀ ದಿನ ಹಳ್ಳಿಹಳ್ಳಿ ಸುತ್ತಿದ್ದರೂ ನಾಲ್ಕಾರು ಜನರನ್ನು ಕರೆತರಲು ಆಡಳಿತಕ್ಕೆ ಸಾಧ್ಯವಾಗಲಿಲ್ಲ. ಈಗ ಯಾಕೆ ಎಂದು ಜನ ಪ್ರಶ್ನಿಸುತ್ತಾರೆ. ಪ್ರತಿ ತಾಲೂಕಿನಲ್ಲೂ ನೂರಾರು ಜನ ಸರ್ಕಾರಿ ಕ್ವಾರಂಟೈನ್‌ಗೆ ಬರಬೇಕಾದವರಿದ್ದಾರೆ.
ಎಡರನೇ ಅಲೆ ಜೋರಾಗಿದ್ದು ಮೂರನೇ ಅಲೆ ನಿರೀಕ್ಷೆಯಲ್ಲಿ ಆಡಳಿತ ಮತ್ತು ಆಸ್ಪತ್ರೆಗಳು ಸಜ್ಜುಗೊಳ್ಳುತ್ತಿರುವಾಗ ಜನ ಇನ್ನೂ ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳುತ್ತಿಲ್ಲ. ಹೇಗಾದರೂ ಜನ ಜಾಗೃತರಾಗಲಿ, ಸಕಾಲದಲ್ಲಿ ಚಿಕಿತ್ಸೆ ಪಡೆಯಲಿ ಎಂದು ಆಡಳಿತ ಮತ್ತು ಆರೋಗ್ಯ ಇಲಾಖೆ ಔಷಧ, ಆಂಬ್ಯುಲೆನ್ಸ್ ಮತ್ತು ಸುಸಜ್ಜಿತ ಆಸ್ಪತ್ರೆಯನ್ನಿಟ್ಟುಕೊಂಡು ಸಜ್ಜುಗೊಂಡಿದ್ದರೂ ಅಂತಿಮ ಕ್ಷಣದಲ್ಲಿ ಬಂದು ಇಹಲೋಕ ತ್ಯಜಿಸುವ ಜನಗಳ ಮನೋಭಾವದಿಂದ ನಿರಂತರ ಜೀವ ಉಳಿಸಲು ದುಡಿಯುತ್ತಿರುವವರು ರೋಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಗಂಭೀರ ದೂರುಗಳಿಲ್ಲ. ಜಿಲ್ಲೆಯ ಮಟ್ಟಿಗೆ ಕೊರೊನಾ ವಾರಿಯರ್ ಗಳು ಸಮರ್ಪಣಾಭಾವದಿಂದ ದುಡಿಯುತ್ತಿದ್ದಾರೆ. ಅವರ ಕಷ್ಟವನ್ನು ಅರ್ಥಮಾಡಿಕೊಂಡು ಸೂಕ್ತವಾಗಿ ಜನ ಸ್ಪಂದಿಸಬೇಕು. ಯಾರೂ ಪರಿಪೂರ್ಣರಲ್ಲ ಅವರೂ ಮನುಷ್ಯರೇ.