Advertisement

ಕೋವಿಡ್ ಮಣಿಸುವಲ್ಲಿ ಮಹಿಳಾ ನಾಯಕರು ಮುಂಚೂಣಿಯಲ್ಲಿ

08:26 PM May 04, 2020 | sudhir |

ಮಣಿಪಾಲ: ಕೋವಿಡ್ ಜಾಗತಿಕ ವಿದ್ಯಮಾನವನ್ನು ಗಮನಿಸುವಾಗ ಮಹಿಳೆಯರು ಆಡಳಿತ ನಡೆಸುವ ಕೆಲವು ರಾಷ್ಟ್ರಗಳಲ್ಲಿ ಕೋವಿಡ್‌ -19 ಹೋರಾಟದಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿದೆ.

Advertisement

ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡಿನ 39 ರ ಹರೆಯದ ಪ್ರಧಾನಿ ಜಸಿಂತಾ ಆರ್ಡೆನ್‌ ಲಾಕ್‌ಡೌನ್‌ ಘೋಷಿಸಿ ದೇಶವನ್ನುದ್ದೇಶಿಸಿ “ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎಂದು ವಿವಿಧ ಮಾಧ್ಯಮಗಳ ಮೂಲಕ ಕರೆ ನೀಡಿ ಯಶಸ್ಸು ಕಂಡರು.

“ಗೋ ಹಾರ್ಡ್‌ ಆ್ಯಂಡ್‌ ಗೋ ಅರ್ಲಿ’ ಎಂದು ಹೇಳುವ ಮೂಲಕ ಈಕೆ ಮೊದಲು ಸ್ವಲ್ಪ ಕಠಿನ ಕ್ರಮ ಕೈಗೊಂಡು ಆದಷ್ಟು ಬೇಗ ಸಹಜ ಸ್ಥಿತಿಗೆ ಬರೋಣ ಎಂದಿದ್ದರು. ದೇಶಕ್ಕೆ ಬರುವ ಪ್ರತಿಯೊಬ್ಬರೂ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೇಳಿದ್ದ ಈಕೆ, ಮಾರ್ಚ್‌ 14 ರಿಂದ ಎರಡು ವಾರಗಳ ಕಾಲ ಲಾಕ್‌ಡೌನ್‌ ಘೋಷಿಸಿದ್ದರು. ಆ ಹೊತ್ತಿಗೆ ಅಲ್ಲಿ ಕೇವಲ 150 ಮಂದಿ ಸೋಂಕಿತರಿದ್ದರು ಹಾಗೂ ಸಾವು ಸಂಭವಿಸಿರಲಿಲ್ಲ. ಪ್ರಸ್ತುತ ಅಲ್ಲಿ ಸಾವಿನ ಸಂಖ್ಯೆ ಕೇವಲ 18 ಮಾತ್ರ. ಈ ಕಾರಣಕ್ಕಾಗಿ ಶೇ. 80 ರಷ್ಟು ದೇಶವಾಸಿಗಳು ಅವರ ಮೇಲೆ ವಿಶ್ವಾಸವಿರಿಸಿಕೊಂಡಿದ್ದಾರೆ.

ಜರ್ಮನಿ
ಜರ್ಮನಿಯ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಏಂಜೆಲಾ ಮಾರ್ಕೆಲ್‌ ಜನರನ್ನು ಎಚ್ಚರಿಸಿದರು. ವೈರಸ್‌ನ ಗಂಭೀರತೆಯನ್ನು ಮೊದಲೇ ಊಹಿಸಿಕೊಂಡಿದ್ದ ಅಲ್ಲಿನ ಸರಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಜನರಲ್ಲಿ ಆಗಾಗ ವೈರಸ್‌ ಅಪಾಯದ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದ ಕಾರಣ ಅಲ್ಲಿನ ಸಾವಿನ ಸಂಖ್ಯೆ 5 ಸಾವಿರದೊಳಗೆ ಇದೆ. ಇದು ಯೂರೋಪಿಯನ್‌ ಯೂನಿಯನ್‌ ರಾಷ್ಟ್ರವೊಂದರಲ್ಲಿ ಕೋವಿಡ್‌ 19 ನಿಂದಾಗಿ ದಾಖಲಾದ ಕಡಿಮೆ ಸಾವಿನ ಪ್ರಮಾಣವಾಗಿದೆ.

ಡೆನ್ಮಾರ್ಕ್‌
ಡೆನ್ಮಾರ್ಕ್‌ ಪ್ರಧಾನಿ ಮಿಟ್ಟೆ ಫ್ರೆಡೆರಿಕ್ಸನ್‌ ಅವರು ತೆಗೆದುಕೊಂಡ ಕಠಿನ ಕ್ರಮಗಳಿಂದಾಗಿ ಆ ದೇಶದಲ್ಲಿ ಸುಮಾರು 8 ಸಾವಿರ ಮಂದಿ ಮಾತ್ರ ಸೋಂಕಿಗೊಳಗಾಗಿದ್ದು, ಸಾವಿನ ಸಂಖ್ಯೆ 370 ರಷ್ಟಿದೆ. ಆಕೆ ಹೆಚ್ಚು ಮಾತನಾಡಲಿಲ್ಲ. ಅಗತ್ಯವಾದ ಕೆಲವು ಕಠಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದುದೇ ಈ ಯಶಸ್ಸಿನ ಹಿಂದಿನ ಸತ್ಯ.

Advertisement

ತೈವಾನ್‌
ತೈವಾನ್‌ ಅಧ್ಯಕ್ಷೆ ತ್ಸಾಯಿ ಇಂಗ್‌-ವೆನ್‌ ಅವರು ಪ್ರವಾಸ ನಿರ್ಬಂಧ, ಸ್ವತ್ಛತೆ ಹಾಗೂ ಕ್ವಾರಂಟೈನ್‌ನಂಥ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಕಾರಣ ಅಲ್ಲಿ ಲಾಕ್‌ಡೌನ್‌ ಮಾಡಲಿಲ್ಲ. ಆ ದೇಶದಲ್ಲಿ ಕೋವಿಡ್ ತನ್ನ ರುದ್ರನರ್ತನ ಮೆರೆಯಲು ಸಾಧ್ಯವಾಗಲೇ ಇಲ್ಲ. ಅಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಕೇವಲ 6! ಇನ್ನೂ ಒಂದು ವಿಶೇಷವೆಂದರೆ, ಈ ದೇಶವು ಮಿಲಿಯಗಟ್ಟಲೆ ಮುಖಗವಸುಗಳನ್ನು ಸಿದ್ಧಪಡಿಸಿ ಅಮೆರಿಕ ಮತ್ತು ಯೂರೋಪ್‌ಗೆ ಕಳುಹಿಸುತ್ತಿದೆ.

ನಾರ್ವೆ
ಇನ್ನೊಂದು ದೇಶ ನಾರ್ವೆ. ಇಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 7,200 ಮತ್ತು ಸಾವಿನ ಸಂಖ್ಯೆ 182. ಈಗ ಅಲ್ಲಿ ನಿಧಾನವಾಗಿ ನಿರ್ಬಂಧವನ್ನು ಸಡಿಲ ಮಾಡಲಾಗುತ್ತದೆ. ಪ್ರಮುಖ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಜ್ಞಾನಿಗಳಿಗೆ ಮುಕ್ತ ಅವಕಾಶ ನೀಡಿರುವುದು, ಆರಂಭದ ಹಂತದಲ್ಲೇ ಲಾಕ್‌ಡೌನ್‌ ಘೋಷಿಸಿದ್ದುದು ಸಮರ ಗೆಲ್ಲಲು ಕಾರಣವಾಯಿತು ಎನ್ನುತ್ತಾರೆ ಅಲ್ಲಿನ ಪ್ರಧಾನಿ ಎರ್ನ ಸೋಲ್ಬರ್ಗ್‌.

ಐಸ್‌ಲ್ಯಾಂಡ್‌
ಐಸ್‌ಲ್ಯಾಂಡ್‌ನ‌ಲ್ಲಿ ಪ್ರಧಾನಿ ಕತ್ರೀನ್‌ ಜಾಕಬ್ಸ್ ಡಾಟಿರ್‌ನ ನಾಯಕತ್ವದಲ್ಲಿ ಕೋವಿಡ್ ವಿರುದ್ಧ ಸಮರ್ಥ ಹೋರಾಟ ನಡೆಸಿದ ಪರಿಣಾಮ ಅಲ್ಲಿ ಸೋಂಕಿತರ ಸಂಖ್ಯೆ 1,800 ಕ್ಕೆ ಸೀಮಿತವಾಗಿ ಕೇವಲ 10 ಸಾವು ವರದಿಯಾಗಿದೆ. ಆಕೆಯ ನಾಯಕತ್ವಕ್ಕೆ ದೇಶ ಶಹಬ್ಟಾಸ್‌ ಎಂದಿದೆ.

ಫಿನ್‌ಲ್ಯಾಂಡ್
ಜಗತ್ತಿನಲ್ಲೇ ಅತಿ ಸಣ್ಣ ಪ್ರಾಯದ ಪ್ರಧಾನಿ ಎಂಬ ಕೀರ್ತಿಗೊಳಗಾದ ಫಿನ್ಲ್ಯಾಂಡ್‌ನ‌ ಸನ್ನಾ ಮಾರಿನ್‌ ಅವರು ಕೂಡ ಲಾಕ್‌ಡೌನ್‌ನಂಥ ಕ್ರಮಗಳನ್ನು ಕೈಗೊಂಡ ಪರಿಣಾಮ ಅಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಕೇವಲ 4,000 ಮತ್ತು ಸಾವಿನ ಪ್ರಮಾಣ 140 ಆಗಿದೆ. ಇದು ನೆರೆಯ ಸ್ವೀಡನ್‌ನ ಸಾವಿನ ಸಂಖ್ಯೆಗಿಂತ 10 ಪಟ್ಟು ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next