Advertisement
ಕೋವಿಡ್ ದಿಂದಾಗಿ ಲಾಕ್ ಡೌನ್ ಆಯ್ತು. ಬೆಂಗಳೂರು ನಗರ ಸ್ತಬ್ಧವಾಯಿತು. ಸರ್ಕಾರ, ಕಾರ್ಡ್ ಇದ್ದವರಿಗೆ, ನಾವು ರೇಷನ್ ಕೊಡ್ತೀವಿ ಅಂದಿತು. ಶಾಸಕರು, ಐಡಿ ಕಾರ್ಡ್ ಇದ್ದರೆ ಹೊಟ್ಟೆ ತುಂಬಿಸ್ತೀವಿ ಅಂದರು. ಇಷ್ಟಾದರೂ ತುಂಬಾ ಕಷ್ಟಕ್ಕೆ ಸಿಕ್ಕಿಕೊಂಡವರು- ಹೊರರಾಜ್ಯದಿಂದ ಇಲ್ಲಿಗೆ ಬಂದಿದ್ದ ಬಡ ಕಾರ್ಮಿಕರು. ಅವರ ಒದ್ದಾಟವನ್ನು ಹೃದಯಕ್ಕೆ ತಂದುಕೊಂಡದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ.
ಕೊಡಗಿನ ದುರಂತದ ವೇಳೆಯಲ್ಲಿ, ಜನ ಅನ್ನಾಹಾರಕ್ಕೆ ಪರದಾಡುವುದನ್ನು ಕಂಡು, ಅಂಥವರಿಗೆ ನೆರವಾಗಿದ್ದ ಈ ತಂಡ, ಮೊದಲು ಪ್ಲಾನ್ ಮಾಡಿದ್ದು ಆಹಾರದ ಕಿಟ್
ಒದಗಣೆಗೆ. ಇದಕ್ಕಾಗಿ ತಮ್ಮದೇ ನೆಟ್‌ವರ್ಕ್ ಬಳಸಿಕೊಂಡರು. ಯಾರಿಗೆ ಆಹಾರದ ಅವಶ್ಯಕತೆ ಇದೆ ಅನ್ನೋದನ್ನು ಲೆಕ್ಕ ಹಾಕಿ, ಕಿಟ್‌ಗಳನ್ನು ತಯಾರಿಸಿ, ಅವರವರ ಮನೆಗೇ ವಿತರಿಸುವುದನ್ನು ಹೆಬ್ಟಾಳದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದರು. ಶ್ರೀಧರ್ ಅವರ ತಂಡದ ಕಾರ್ಯವನ್ನು ನೋಡಿ, ವೈದ್ಯರು, ಡಾಕ್ಟರ್, ಲಾಯರ್‌ಗಳೂ ಕೈ ಜೋಡಿಸಿದರು. ಸಾಮಾನ್ಯ
ಜನರೂ ಕಿಟ್ ವಿತರಣೆಗೆ ನಿಂತರು. ನನಗೆ ವರ್ಕ್ ಫ್ರಂ ಹೋಂ. ಹಾಗಾಗಿ, ದಿನಕ್ಕೆ ಐದು ಗಂಟೆ ಈ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ನಮ್ಮದು 20 ಜನರ ತಂಡ. ದಿನಕ್ಕೆ 8 ಗಂಟೆ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಜಾಲಹಳ್ಳಿ
ನಗರದಲ್ಲಿ ಕಿಟ್ ವಿತರಣೆಯ ಉಸ್ತುವಾರಿ ಹೊತ್ತಿರುವ ಕೃಷ್ಣಮೂರ್ತಿ. ಒಂದು ಕಿಟ್‌ಗೆ ಕನಿಷ್ಠ 500 ರೂ. ಖರ್ಚು. ಇದಕ್ಕೆ ಹಣ ಬೇಕಲ್ಲ. ನಾವು ಇಂಥ ಕೆಲಸ ಮಾಡ್ತಾ ಇದ್ದೀವಿ. ನೀವೂ ಕೈಲಾದ ಸಹಾಯ ಮಾಡಿ ಅಂತ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಾಗ, ಖಾತೆಯಲ್ಲಿ ಹಣ ತುಂಬುತ್ತಾ ಬಂತು. ಕೇವಲ ವಲಸಿಗರನ್ನು ಗಮನದಲ್ಲಿಟ್ಟುಕೊಂಡರೆ ಸಾಲದು, ಎಲ್ಲ ವರ್ಗದ ಬಡವರನ್ನೂ ತಲುಪಬೇಕು ಎಂದು ನಿರ್ಧರಿಸಿದ್ದಾಯಿತು. ಅದರಂತೆ, ಆಟೋ ಡ್ರೈವರ್‌ಗಳು, ಗಾರ್ಮೆಂಟ್, ಫ್ಯಾಕ್ಟ್ರಿಗಳಲ್ಲಿ ಕೆಲಸ ಮಾಡುವವರು, ಹೂವು ಮಾರುವವರು ಹೀಗೆ, ಕಷ್ಟದಲ್ಲಿರುವ ಎಲ್ಲರಿಗೂ ಕಿಟ್ ವಿತರಿಸಲು ನಿರ್ಧರಿಸಿದ್ದಾಯಿತು. ಇವತ್ತು ಪ್ರತಿದಿನ ಇದಕ್ಕಾಗಿಯೇ ಎರಡು ಸಾವಿರಕ್ಕೂ ಅಧಿಕ ಯುವ ಜನ ಕೆಲಸ ಮಾಡುತ್ತಿದ್ದಾರೆ. ನಗರ ಪೂರ್ತಿ 65 ಕಿಟ್ ತಯಾರಿಕಾ ಪಾಯಿಂಟ್ ಗಳಿವೆ. ಈವರೆಗೆ ಸುಮಾರು 1,20,000 ಕ್ಕೂ ಹೆಚ್ಚು ಕಿಟ್‌ಗಳ ವಿತರಣೆಯಾಗಿದೆ ಎನ್ನುತ್ತಾರೆ ಶ್ರೀಧರ್.
Related Articles
ಶ್ರೀಧರ್ ಮತ್ತವರ ತಂಡ, ಕೇವಲ ಕಿಟ್ ಕೊಟ್ಟು ಕೈತೊಳೆದುಕೊಳ್ಳುತ್ತಿಲ್ಲ. ನಗರದಲ್ಲಿ 14 ಕಡೆ ಹೆಲ್ಪ್ ಲೈನ್ ಮಾಡಿದ್ದಾರೆ. ಬೇರೆ ಕಡೆಯಿಂದ ಬಂದು ತೊಂದರೆಗೆ ಸಿಕ್ಕವರಿಗೆ ಸಹಾಯವಾಣಿ ಮೂಲಕ ನೆರವಾಗುತ್ತಿದ್ದಾರೆ. ಆರೋಗ್ಯಭಾರತಿ ಅನ್ನೋ ಆಪ್ ಮೂಲಕ, ಉಚಿತವಾಗಿ ಔಷಧ, ವೈದ್ಯರ ನೆರವು ಪಡೆಯುತ್ತಿರುವವರ ಸಂಖ್ಯೆ ಅಸಂಖ್ಯಾತ. ಆನ್ ಲೈನ್ ಸೇವೆಯಲ್ಲಿ 250 ಮಂದಿ ಕಾರ್ಯನಿರ್ವಹಿಸು ತ್ತಿದ್ದಾರೆ. ಹೀಗೆ, ಕೊರೊನಾ ದ ಸಂದರ್ಭ ದಲ್ಲಿ ಕಷ್ಟಕ್ಕೆ ಸಿಕ್ಕಿಕೊಂಡವರಿಗೆ ನೆರವಾಗಲು ಸಾವಿರಾರು ಕೈಗಳು ಜೊತೆಯಾಗಿವೆ.
Advertisement
ಕಟ್ಟೆಯೊಡೆದ ಸೇವೆಲಾಕ್ಡೌನ್ ಆದಾಗ ಮೊದಲು ಮುಚ್ಚಿದ್ದು ಹೋಟೆಲ್‌ಗಳು. ನಿಂತದ್ದು ವಾಹನಗಳು. ಹೀಗಿರುವಾಗ, ದೂರದಿಂದ ಬರುವ ಪೊಲೀಸರ ಪಾಡೇನು? ರಸ್ತೆ ಕಸ ಗುಡಿಸುವವರ ಹೊಟ್ಟೆ ಪಾಡಿನ ಗತಿಯೇನು? ಹೀಗೊಂದು ಪ್ರಶ್ನೆ ಎನ್. ಆರ್. ಕಾಲೊನಿಯ ಸುಜಯ್‌ಗೆ ಜೊತೆಯಾಯಿತು. ಏಕೆಂದರೆ, ಅವರ ಭಾವ ಇನ್ಸ್ ಪೆಕ್ಟರ್. ಸುಜಯ್‌ನ ಅಕ್ಕ 15 ಜನ ಪೊಲೀಸರಿಗೆ ಊಟ ಕಳುಹಿಸುತ್ತಿದ್ದರು. ಅದನ್ನು ನೋಡಿ, ಅವರಿಗೇ ಅಷ್ಟು ಕಷ್ಟ ಆದರೆ, ಬಡವರ ಗತಿ ಏನು ಅಂದುಕೊಂಡು ಆರಂಭಿಸಿದ್ದೇ ಕೋವಿಡ್ ಊಟ. ಆರಂಭದಲ್ಲಿ, ವಾರ್ಡ್ ನಂಬರ್ 154ರಲ್ಲಿ ಕೆಲಸ ಮಾಡುವ, ಪೊಲೀಸರು, ಬಿಬಿಎಂಪಿ ಕೆಲಸಗಾರರು ಸೇರಿ 200 ಜನಕ್ಕೆ ಅಂತ ಶುರುವಾಗಿ, ಆಮೇಲಾಮೇಲೆ ಬಸವನಗುಡಿ,
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಎಲ್ಲ ಕಡೆ ಹರಡಿಕೊಂಡಿತು. ಈಗ, ದಿನಕ್ಕೆ ಹೆಚ್ಚು ಕಡಿಮೆ 1200 ಊಟ ಸರಬರಾಜು ಆಗುತ್ತಿದೆ. ಈ ಊಟದಲ್ಲಿ ಕ್ವಾಲಿಟಿ ಇರುತ್ತಾ… ಹೀಗಂತ ಕೇಳುವ ಹಾಗಿಲ್ಲ. ಏಕೆಂದರೆ, ಊಟ ತಯಾರಿಯ ಹೊಣೆಯನ್ನು ಶಿವಳ್ಳಿ ಎಂಟಿಆರ್ ಹೋಟೆಲ್‌ನವರು ಹೊತ್ತಿದ್ದಾರೆ. ದಿನಸಿ ಪದಾರ್ಥಗಳನ್ನು ಸುಜಯ್ ಅಂಡ್ ಟೀಂ ಒದಗಿಸುತ್ತಿದೆ. ಅವರ ಜೊತೆಯಲ್ಲಿ 15 ಜನರ ತಂಡವಿದೆ. ಐ.ಟಿ. ಕಂಪನಿಗಳಲ್ಲಿ ಇರುವವರಿಗೆ ಈಗ ಕೆಲಸ ಸ್ವಲ್ಪ ಕಡಿಮೆ. ಅಂಥವರನ್ನು ಸೇವೆಗೆ ಸೇರಿಸಿಕೊಂಡಿದ್ದೇವೆ. ಕಾಲೇಜು ಹುಡುಗರೂ ನಮ್ಮ ಜೊತೆಯಲ್ಲಿದ್ದಾರೆ ಅಂತಾರೆ ಸುಜಯ್ ದಿನಕ್ಕೆ ಹೆಚ್ಚು ಕಮ್ಮಿ 8 ಸಾವಿರ ಖರ್ಚು ಬರುತ್ತಿದೆ. ಇದನ್ನು ಕಟ್ಟೆ ಬಳಗ ಮತ್ತು 15 ಜನರ ತಂಡ ಭರಿಸುತ್ತದೆ. ನಾವೀಗ ದಿನಕ್ಕೆ ಕನಿಷ್ಠ ಅಂದರೂ ಸಾವಿರ ಜನ ಹೊಟ್ಟೆ ತುಂಬಿಸುತ್ತಿದ್ದೇವೆ. ಎಷ್ಟೋ ಸಲ, ನಾವು ಊಟ ಕೊಡ್ತಾ ಇರೋದನ್ನು ನೋಡಿದವರು ತಾವೂ ಸಾವಿರ ರೂ., ಎರಡು ಸಾವಿರ ರೂ. ಕೊಟ್ಟಿರುವುದೂ ಉಂಟು. ಅದನ್ನು ಅಕೌಂಟ್‌ಗೆ ಹಾಕಿ, ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಸುಜಯ್ ಕಟ್ಟೆ ಗುರುರಾಜ್