Advertisement

ಐವರು ಸಚಿವರಿದ್ದರೂ ಕೋವಿಡ್ ವಾರ್ಡ್‌ ಅಯೋಮಯ

11:47 AM Jul 18, 2020 | Suhan S |

ಬೆಳಗಾವಿ: ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯಲ್ಲಿಕೋವಿಡ್ ಸೋಂಕಿಗೆ ತಡೆ ಇಲ್ಲದಂತಾಗಿದೆ. ಐವರು ಸಚಿವರನ್ನು ಹೊಂದಿದ್ದರೂ ಜಿಲ್ಲೆಯ ಕೋವಿಡ್‌ ವಾರ್ಡ್‌ನ ಅವ್ಯವಸ್ಥೆಯಿಂದಾಗಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ ವಾರ್ಡ್‌ನ ಅವ್ಯವಸ್ಥೆಯಿಂದಾಗಿ ಸೋಂಕಿತರು ನರಳಾಡುತ್ತಿದ್ದಾರೆ. ಬೆಡ್‌ಗಳ ಕೊರತೆಯಿಂದಾಗಿ ಸೋಂಕಿತರು ನೆಲದ ಮೇಲೆ ಮಲಗುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕೋವಿಡ್ ಸೋಂಕಿತರು ಬಿಮ್ಸ್‌ ಸಿಬ್ಬಂದಿ ಎದುರು ಅಳಲು ತೋಡಿಕೊಂಡರೂ ಯಾರೂ ಇತ್ತ ಗಮನಹರಿಸುತ್ತಿಲ್ಲ. ಬಿಮ್ಸ್‌ನಲ್ಲಿಯ ಅವ್ಯವಸ್ಥೆ ಬಗ್ಗೆ ಸೋಂಕಿತರು ವಿಡಿಯೋ ಮಾಡಿ ಸಂಬಂಧಿಸಿದವರ ಗಮನಕ್ಕೆ ತಂದರೂ ಇನ್ನೂವರೆಗೆ ಸರಿಪಡಿಸಿಲ್ಲ. ವಾರ್ಡ್‌ಗೆ ಸೋಂಕಿತರನ್ನು ಸ್ಥಳಾಂತರಿಸಿದಾಗ ಊಟ, ಬಿಸಿ ನೀರಿನ ಸಮಸ್ಯೆ, ಬೆಡ್‌ ಕೊರತೆ ಹೀಗೆ ಅನೇಕ ತೊಂದರೆಗಳು ಎದುರಾಗುತ್ತಿದ್ದರೂ ಯಾರೂ ಇತ್ತ ಕಾಳಜಿ ವಹಿಸುತ್ತಿಲ್ಲ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೇ ಒದ್ದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲದ ಮೇಲೆಯೇ ಬೆಡ್‌: ಸೋಂಕಿತರಿಗೆ ಹಾಸಿಗೆಗಳು ಇಲ್ಲದ್ದಕ್ಕೆ ಸೋಂಕಿತರನ್ನು ಕರೆ ತಂದಿರುವ ಅಂಬ್ಯುಲೆನ್ಸ್‌ಗಳು ಜಿಲ್ಲಾಸ್ಪತ್ರೆ ಎದುರು ಸಾಲುಗಟ್ಟಿ ನಿಲ್ಲುವಂತಾಗಿದೆ. ಬಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿರುವ ಬೆಡ್‌ಗಳು ಬಹುತೇಕ ಭರ್ತಿ ಆಗಿದ್ದರಿಂದ ಬೆಡ್‌ ಕೊರತೆ ಎದುರಾಗಿದೆ. ಹೀಗಾಗಿ ಕೆಲವು ಸೋಂಕಿತರಿಗೆ ನೆಲದ ಮೇಲೆಯೇ ಬೆಡ್‌ ಹಾಕಿ ಕೊಡಲಾಗುತ್ತಿದೆ. ಬಿಮ್ಸ್‌ ಆಸ್ಪತ್ರೆಯಲ್ಲಿನ 200 ಬೆಡ್‌ಗಳಿದ್ದು, 272 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಡ್‌ಗಳು ಫುಲ್‌ ಆಗಿ ನೆಲದ ಮೇಲೆ ಸೋಂಕಿತರು ಮಲಗುವಂತಾಗಿದೆ.

ಹೀಗಾಗಿ ಕೋವಿಡ್ ಸೋಂಕಿತರನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎನ್ನುವ ಚಿಂತೆ ಬಿಮ್ಸ್‌ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ವಿವಿಧೆಡೆಯಿಂದ ಸೋಂಕಿತರನ್ನು ತುಂಬಿಕೊಂಡು ಬರುವ ಅಂಬ್ಯುಲೆನ್ಸ್‌ಗಳು ತುರ್ತು ನಿಗಾ ಘಟಕದ ಎದುರು ನಿಲ್ಲುತ್ತಿವೆ. ಅವರನ್ನು ಎಲ್ಲಿಗೆ ಕಳುಹಿಸಬೇಕೋ ಎನ್ನುವುದೇ ದೊಡ್ಡ ಚಿಂತೆಯಾಗಿದೆ.

ತಲೆ ಕೆಡಿಸಿಕೊಳ್ಳದ ಜಿಲ್ಲಾಡಳಿತ: ಹಾಸಿಗೆ ಸಮಸ್ಯೆ ಇದ್ದರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಮ್ಸ್‌ನಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಆರ್ಥಿಕವಾಗಿ ಸದೃಢ ವಾಗಿರುವ ಕೆಲವರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ವಾರ್ಡ್‌ನ ದುಸ್ಥಿತಿ ಹೇಳತೀರದು: ಕೋವಿಡ್ ಸೋಂಕಿತರು ಇರುವ ವಾರ್ಡ್‌ನ ಕಿಟಕಿಗಳಿಗೆ ಬಾಗಿಲುಗಳು ಇಲ್ಲ. ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ಸೋಂಕಿತರೇ ಅದಕ್ಕೆ ಪ್ಲಾಸ್ಟಿಕ್‌ ಕಟ್ಟಿಕೊಂಡಿದ್ದಾರೆ. ಜೋರಾಗಿ ಮಳೆ ಬಂದರೆ ನೀರು ವಾರ್ಡ್‌ ಒಳಗೆ ಪ್ರವೇಶಿಸುತ್ತಿದೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಇನ್ನೂವರೆಗೆ ಜಿಲ್ಲೆಯ ಯಾವೊಬ್ಬ ಸಚಿವರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ವಾರ್ಡ್‌ನಲ್ಲಿ ಬೀದಿ ನಾಯಿಯೊಂದು ಮಲ ವಿಸರ್ಜನೆ ಮಾಡಿರುವುದು ಇಲ್ಲಿಯ ಅವ್ಯವಸ್ಥೆಯ ಆಗರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಡ್‌ ಪಕ್ಕದಲ್ಲಿಯೇ ನಾಯಿ ಮಲ ವಿಸರ್ಜನೆ ಮಾಡಿದ್ದನ್ನು ವ್ಯಕ್ತಿಯೊಬ್ಬರು ಮೊಬೆ„ಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಮಲ ವಿಸರ್ಜನೆಯಿಂದಾಗಿ ಇಡೀ ವಾರ್ಡ್‌ ಗಬ್ಬು ನಾರುತ್ತಿದೆ. ಸೋಂಕಿತರು ಇದರಿಂದ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ.

ಬಿಮ್ಸ್‌ನಲ್ಲಿ 200 ಬೆಡ್‌ ಇದ್ದು, ಸದ್ಯ 272 ಸೋಂಕಿತರು ಇದ್ದಾರೆ. ಇನ್ನುಳಿದ ಸೋಂಕಿತರನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 30 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಾಲೂಕಿನ ಎರಡು ಮೊರಾರ್ಜಿ ಹಾಸ್ಟೆಲ್‌ಗ‌ಳಲ್ಲಿ ತಲಾ 100 ಬೆಡ್‌ಗಳ ವ್ಯವಸ್ಥೆ ಇದೆ. ಆಸ್ಪತ್ರೆಯಲ್ಲಿ ಬೆಡ್‌ ಗಳ ಕೊರತೆಯೂ ಇಲ್ಲ, ಅವ್ಯವಸ್ಥೆಯೂ ಇಲ್ಲ. – ಡಾ| ಶಶಿಕಾಂತ ಮುನ್ಯಾಳ ಜಿಲ್ಲಾ ಆರೋಗ್ಯಾಧಿಕಾರಿ

 

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next