Advertisement

15 ದಿನ; 70 ಸಾವಿರ ಕೇಸ್‌ ; ಶರವೇಗದಲ್ಲಿ ವ್ಯಾಪಿಸುತ್ತಿದೆ ವೈರಸ್‌; ಸಾವಿನ ಸಂಖ್ಯೆ ದ್ವಿಗುಣ

09:20 AM May 27, 2020 | Hari Prasad |

ಹೊಸದಿಲ್ಲಿ: ಮಹಾರಾಷ್ಟ್ರ, ತಮಿಳುನಾಡು, ದಿಲ್ಲಿ, ಗುಜರಾತ್‌ನಲ್ಲಿ ಕೋವಿಡ್ ಸೋಂಕು ಅವ್ಯಾಹತವಾಗಿ ಹಬ್ಬುತ್ತಿದೆ.

Advertisement

ದೇಶಾದ್ಯಂತ ಕೇವಲ 15 ದಿನಗಳ ಅವಧಿಯಲ್ಲಿ 70 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅದಕ್ಕೂ ಮುಂಚೆ, ಸೋಂಕಿತರ ಸಂಖ್ಯೆ 68 ಸಾವಿರಕ್ಕೇರಲು 100 ದಿನಗಳು ಬೇಕಾಗಿದ್ದವು. ಆದರೆ, ಈಗ 15 ದಿನಗಳಲ್ಲಿ 70 ಸಾವಿರ ಮಂದಿಗೆ ಕೋವಿಡ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತವು ಈಗಾಗಲೇ ಜಗತ್ತಿನ ಟಾಪ್‌ 10 ಹಾಟ್‌ ಸ್ಪಾಟ್‌ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಂಗಳವಾರ ರಾತ್ರಿಯ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1.50 ಲಕ್ಷ ದಾಟಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ದಿಲ್ಲಿಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಕಾರಣ, ಕಳೆದೆರಡು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.11ರಷ್ಟು ಏರಿಕೆಯಾಗಿದೆ.

ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 12 ದಿನಗಳು ತಗಲುತ್ತಿದ್ದು, ದಿಲ್ಲಿಯಲ್ಲಿ 14 ದಿನ ಹಾಗೂ ಬಿಹಾರದಲ್ಲಿ ಕೇವಲ 7 ದಿನಗಳಲ್ಲಿ ಸೋಂಕು ದ್ವಿಗುಣಗೊಳ್ಳುತ್ತಿದೆ. ಇನ್ನು, ಸೋಂಕಿತರ ದರವು ಬಿಹಾರದಲ್ಲಿ ಶೇ.10.67 ಆಗಿದ್ದು, ಇದು ದೇಶದಲ್ಲೇ ಅತ್ಯಧಿಕ ಎಂದು ಹೇಳಲಾಗಿದೆ. ಉತ್ತರಪ್ರದೇಶ ಮತ್ತು ಗುಜರಾತ್‌ ನಲ್ಲಿ ಈ ದರ ಇಳಿಮುಖವಾಗುತ್ತಾ ಸಾಗುತ್ತಿದ್ದು, ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 18 ದಿನಗಳು ಬೇಕಾಗುತ್ತಿವೆ.

ಸಾವಿನ ಸಂಖ್ಯೆ ದ್ವಿಗುಣ: ಕಳೆದ 15 ದಿನಗಳಲ್ಲಿ ಭಾರತದಲ್ಲಿ ಸಾವಿನ ಸಂಖ್ಯೆಯೂ ದ್ವಿಗುಣಗೊಂಡಿದೆ. ಕೇವಲ 2 ದಿನಗಳ ಅವಧಿಯಲ್ಲಿ ಇದರ ಪ್ರಮಾಣ ಶೇ.8ರಷ್ಟು ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 2,091 ಕೇಸುಗಳು ದೃಢಪಟ್ಟಿದ್ದು, 97 ಮಂದಿ ಅಸುನೀಗಿದ್ದಾರೆ. ಮುಂಬಯಿಯಲ್ಲಿಯೇ 1,002 ಹೊಸ ಕೇಸುಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ 646 ಹೊಸತು, 127 ಮಂದಿ ಸಾವಿಗೀಡಾಗಿದ್ದಾರೆ. ಗುಜರಾತ್‌ನಲ್ಲಿ 361 ಹೊಸ ಪ್ರಕರಣ ದೃಢಪಟ್ಟಿವೆ. ದಿಲ್ಲಿಯಲ್ಲಿ 412 ಕೇಸುಗಳು ದೃಢೀಕರಣಗೊಂಡಿದೆ. ಜತೆಗೆ ಸಾವಿನ ಸಂಖ್ಯೆ 288ಕ್ಕೆ ಏರಿಕೆಯಾಗಿದೆ.

Advertisement

ಒಂದೇ ದಿನ 6, 500 ಕೇಸು: ಕೆಲವು ದಿನಗಳಿಂದ ಸತತವಾಗಿ ಸೋಂಕಿತರ ಸಂಖ್ಯೆ 6 ಸಾವಿರದ ಗಡಿ ದಾಟುತ್ತಿದ್ದು, ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ಒಟ್ಟಾರೆ 146 ಮಂದಿ ಸಾವಿಗೀಡಾಗಿ, 6,535 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಸಾವಿನ ಸಂಖ್ಯೆ ಮಹಾರಾಷ್ಟ್ರದಲ್ಲಿಯೇ ಹೆಚ್ಚು. ನಂತರದ ಸ್ಥಾನ ಗುಜರಾತ್‌, ದಿಲ್ಲಿ, ಮಧ್ಯಪ್ರದೇಶ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಮರಣ ಪ್ರಮಾಣ ಕನಿಷ್ಠ
ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದರೂ, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮರಣ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ಮಂಗಳವಾರ ಮಾತನಾಡಿದ ಅವರು, ಪ್ರಸ್ತುತ ದೇಶದ ಮರಣ ಪ್ರಮಾಣ ಶೇ.2.87ಕ್ಕಿಳಿದಿದೆ.

ಜಗತ್ತಿನಾದ್ಯಂತ ಒಂದು ಲಕ್ಷ ಜನಸಂಖ್ಯೆಗೆ 4.4 ಸಾವುಗಳು ಸಂಭವಿಸುತ್ತಿವೆ. ಆದರೆ, ಭಾರತದಲ್ಲಿ ಲಕ್ಷ ಜನಸಂಖ್ಯೆಗೆ ಕೇವಲ 0.3 ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಲಾಕ್‌ಡೌನ್‌, ಸಮಯಕ್ಕೆ ಸರಿಯಾಗಿ ಕೋವಿಡ್ ಪ್ರಕರಣಗಳ ಪತ್ತೆ ಮತ್ತು ನಿರ್ವಹಣೆಯೇ ಕಾರಣ ಎಂದು ಅವರು ತಿಳಿಸಿದ್ದಾರೆ.

ಜತೆಗೆ, ದೇಶದಲ್ಲಿ ಗುಣಮುಖ ಪ್ರಮಾಣವೂ ಸುಧಾರಿಸುತ್ತಿದ್ದು, ಸೋಂಕಿತರ ಪೈಕಿ ಶೇ.41.61 ಮಂದಿ (60,490 ಜನ) ಸಂಪೂರ್ಣ ಗುಣಮುಖರಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಈಗ ದಿನಕ್ಕೆ 1.1 ಲಕ್ಷ ಸ್ಯಾಂಪಲ್‌ ಗಳ ಪರೀಕ್ಷೆ ನಡೆಯುತ್ತಿದೆ ಎಂದು ಐಸಿಎಂಆರ್‌ನ ಧಾನ ನಿರ್ದೇಶಕ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ.

ಗ್ಲೆನ್‌ಮಾರ್ಕ್‌ನಿಂದ ಸಂಯೋಜಿತ ಲಸಿಕೆ ಟೆಸ್ಟ್‌
ಕೋವಿಡ್ ಲಸಿಕೆ ಸಂಶೋಧನೆ ಭಾರತದಲ್ಲೂ ವೇಗ ಪಡೆದಿದೆ. ಗ್ಲೆನ್‌ಮಾರ್ಕ್‌ ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ ಈಗ ಹೊಸ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ. ಫೇವಿಪಿರಾವಿರ್‌ ಮತ್ತು ಯುಮಿಫೆನಾವಿರ್‌ ಎಂಬ 2 ಸಂಯೋಜಿತ ಲಸಿಕೆಗಳ ಪ್ರಯೋಗ ಇದಾಗಿದೆ.

ಫೇವಿಪಿರಾವಿರ್‌ ಜಪಾನ್‌ ಸಂಶೋಧಿತ ಏವಿಗನ್‌ ಬ್ರ್ಯಾಂಡ್‌ ಆಗಿದ್ದು, ಅದರ ಸುಧಾರಿತ ಲಸಿಕೆ ಮಾದರಿಯನ್ನು ಗ್ಲೆನ್‌ಮಾರ್ಕ್‌ ಈಗಾಗಲೇ ಸಂಶೋಧಿಸಿದೆ. ಜಪಾನ್‌ನಲ್ಲಿ 2014ರಿಂದ ವೈರಾಣು ಸೋಂಕುಗಳಿಗೆ‌ ಫೇವಿಪಿರಾವಿರ್‌ ಬಳಕೆಯಲ್ಲಿದೆ. ಯುಮಿಫೆನಾವಿರ್‌ ಅನ್ನು ರಷ್ಯಾ ಮತ್ತು ಚೀನದಲ್ಲಿ ಕಂಡುಬರುವ ಸೋಂಕಿನ ಚಿಕಿತ್ಸೆಗೆ ಲಸಿಕೆಯಾಗಿ ಬಳಸಲಾಗುತ್ತಿದೆ. ದೇಶಾದ್ಯಂತ 158 ಆಸ್ಪತ್ರೆಗಳ ಸೋಂಕಿತರ ಮೇಲೆ ಸುಧಾರಿತ ಮಾದರಿಯ ಈ ಸಂಯೋಜಿತ ಔಷಧ ಪ್ರಯೋಗಗೊಳ್ಳಲಿದೆ.

ಆಸೀಸ್‌ ಪ್ರಯೋಗ: ಅಮೆರಿಕದ ಬಯೋಟೆಕ್ನಾಲಜಿ ಸಂಸ್ಥೆ ನೊವಾವ್ಯಾಕ್ಸ್‌, ಆಸ್ಟ್ರೇಲಿಯಾದಲ್ಲಿ ಮನುಷ್ಯನ ಮೇಲೆ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ. ಮೆಲ್ಬರ್ನ್, ಬ್ರಿಸ್ಬೇನ್‌ನ 131 ಪ್ರತಿನಿಧಿಗಳ ಮೇಲೆ ಇದರ ಟೆಸ್ಟ್‌ ನಡೆಯಲಿದೆ. ಈ ವರ್ಷ ಅಂತ್ಯದ ವೇಳೆಗೆ ಲಸಿಕೆ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಸಂಸ್ಥೆ ಹೇಳಿಕೊಂಡಿದೆ.

ಪ್ರಯಾಣ ನಿರ್ಬಂಧ ಸಡಿಲಿಕೆಯೇ ಕಾರಣ!
ಏಕಾಏಕಿ ಪ್ರಯಾಣ ನಿರ್ಬಂಧ ಸಡಿಲಿಸಿದ್ದು ಹಾಗೂ ವಲಸೆ ಕಾರ್ಮಿಕರು ಊರುಗಳಿಗೆ ವಾಪಸಾಗಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಕಾರಣ ಎಂದು ಆರೋಗ್ಯ ತಜ್ಞರು ಅಂದಾಜಿಸಿದ್ದಾರೆ. ಜತೆಗೆ, ಪರೀಕ್ಷಾ ಪ್ರಮಾಣದಲ್ಲಾದ ಏರಿಕೆ ಕೂಡ ಹೆಚ್ಚಿನ ಸೋಂಕಿತರು ಪತ್ತೆಯಾಗುವಂತೆ ಮಾಡಿತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಹಾಟ್‌ಸ್ಪಾಟ್‌ ಪ್ರದೇಶಗಳಲ್ಲೇ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಪ್ರಯಾಣ ನಿರ್ಬಂಧವು ಸಡಿಲಿಕೆಯಾದ ಕಾರಣ ಜನರ ಸಂಚಾರ ಹೆಚ್ಚಾಗಿದೆ. ಹೀಗಾಗಿ ಮುಂದಿನ ಕೆಲವು ದಿನಗಳಲ್ಲೇ ಇತರೆ ಪ್ರದೇಶಗಳಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗಲಿದೆ ಎಂದು ಏಮ್ಸ್ ನಿರ್ದೇಶಕ ರಣದೀಪ್‌ ಗುಲೇರಿಯಾ ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next