ಹೊಸದಿಲ್ಲಿ: ದೇಶದ ಕೊನೆಯ ಪ್ರಜೆಗೂ ಲಸಿಕೆ ಹಾಕುವುದೇ ಸರಕಾರದ ಗುರಿ. ಜೂ.21ರ ಬಳಿಕ ಪ್ರತೀ ದಿನ ಸರಿ ಸುಮಾರು 50 ಲಕ್ಷ ಮಂದಿಗೆ ಅಂದರೆ ನಾರ್ವೆ ದೇಶದ ಜನಸಂಖ್ಯೆಯಷ್ಟು ಮಂದಿಗೆ ಲಸಿಕೆ ಹಾಕಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಸಿಕೆ ಹಾಕುವುದೆಂದರೆ ಪ್ರತೀ ದಿನದ ಸಾಂಖೀಕ ಗುರಿ ಅಲ್ಲ. ಹೀಗಾಗಿ ಲಸಿಕೆ ಹಾಕುವ ಪ್ರಕ್ರಿಯೆ 100 ಮೀಟರ್ ಓಟದಂತೆ ಅಲ್ಲ. ಬದಲಾಗಿ ಅದೊಂದು ಮ್ಯಾರಥಾನ್ ಎಂದು ಪೌಲ್ ಹೇಳಿ ದ್ದಾರೆ. ಜೂ.21ರ ಬಳಿಕ ಲಸಿಕೆ ಹಾಕುವ ಪ್ರಮಾಣ ಏಕೆ ಕಡಿಮೆಯಾಯಿತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಈ ಮಾತುಗಳನ್ನು ಪೌಲ್ ಹೇಳಿದ್ದಾರೆ. ಕೇವಲ ದೈನಂದಿನ ಗುರಿಯ ಬಗ್ಗೆಯೇ ಯೋಚನೆ ಮಾಡುತ್ತಿದ್ದರೆ, ದೀರ್ಘ ಕಾಲಿಕವಾಗಿರುವ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಅಡ್ಡಿಯಾದೀತು ಎಂದು ಹೇಳಲು ಪೌಲ್ ಮರೆಯಲಿಲ್ಲ.
ಪ್ರಗತಿಯಲ್ಲಿ: ಅಮೆರಿಕದ ಜಾನ್ಸನ್ ಆ್ಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಪಡೆಯುವುದರ ಬಗ್ಗೆ ಇನ್ನೂ ಮಾತುಕತೆಗಳು ಪ್ರಗತಿಯಲ್ಲಿವೆ. ಹೈದರಾಬಾದ್‌ನ ಬಯಲಾಜಿಕಲ್ ಇ ಸಂಸ್ಥೆಯಲ್ಲಿ ಅದನ್ನು ಉತ್ಪಾದಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು ಪೌಲ್.
ವೈಜ್ಞಾನಿಕವಾಗಿ ಸಾಧ್ಯ: ಸೋಂಕು ಪ್ರತಿಬಂಧಕ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಿದರೆ, ಮೂರನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಿದೆ. ಇದರ ಹೊರತಾಗಿಯೂ ಸಂಭಾವ್ಯ ಪರಿಸ್ಥಿತಿಗೆ ದೇಶ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವಿ.ಕೆ. ಪೌಲ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಶೇ.86ರಷ್ಟು ಇಳಿಕೆ: ದೇಶದಲ್ಲಿ 2ನೇ ಅಲೆಯ ಸೋಂಕು ಸಂಖ್ಯೆಯ ಗರಿಷ್ಠ ಮಿತಿಯ ದಿನಗಳಿಗೆ ಹೋಲಿಕೆ ಮಾಡಿದರೆ ಸದ್ಯ ಸಕ್ರಿಯ ಸಂಖ್ಯೆಯ ಪ್ರಮಾಣ ಶೇ.86ಕ್ಕೆ ಇಳಿಕೆಯಾಗಿದೆ. ಮೇಯಲ್ಲಿ ಚೇತರಿಕೆ ಪ್ರಮಾಣ ಶೇ.81 ಇದ್ದದ್ದು ಈಗ ಶೇ.97ಕ್ಕೆ ಏರಿಕೆಯಾಗಿದೆ. ಜೂ.23-29ರ ವಾರದಲ್ಲಿ 71 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ ಶೇ.100 ದಾಖಲಾಗಿತ್ತು ಎಂದಿದ್ದಾರೆ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್.
34.41 ಕೋಟಿ: ಗುರುವಾರ ರಾತ್ರಿ 7 ಗಂಟೆಯ ವರೆಗೆ ದೇಶಾದ್ಯಂತ 34.41 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. 18-44 ವರ್ಷ ಮೇಲ್ಪಟ್ಟವರಿಗೆ ಇದುವರೆಗೆ 9.85 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ವಿಸ್ತರಣೆ: ತಮಿಳುನಾಡಿನಲ್ಲಿ ಕೊರೊನಾ ಲಾಕ್‌ಡೌನ್ ಅನ್ನು ಜು.12ರ ವರೆಗೆ ಹಲವು ರಿಯಾಯಿತಿ ಗಳ ಸಹಿತ ವಿಸ್ತರಿಸಲಾಗಿದೆ. ಸೋಮವಾರ ದಿಂದ ಉತ್ತರ ಪ್ರದೇಶದಲ್ಲಿ ಜಿಮ್‌ಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಚೇತರಿಕೆ ಪ್ರಮಾಣ ಶೇ.97: ದೇಶದಲ್ಲಿ ಸೋಂಕಿ ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಶೇ.97.01ಕ್ಕೆ ಏರಿಕೆಯಾಗಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ದೇಶದಲ್ಲಿ 46,617 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿ ಯಲ್ಲಿ 853 ಮಂದಿ ಸೋಂಕಿನಿಂದಾಗಿ ಅಸುನೀಗಿದ್ದಾರೆ.
ಡೆಲ್ಟಾ ರೂಪಾಂತರಿ ಸೋಂಕು ಅಪಾಯಕಾರಿ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡೋìಸ್ ಅಧೊನಮ್ ಘೇಬ್ರಯೋಸಿಸ್ ಎಚ್ಚರಿಸಿದ್ದಾರೆ. ಇದರ ಜತೆಗೆ ಸದ್ಯ ನಡೆಯುತ್ತಿರುವ ಯೂರೋ ಕಪ್ ಫುಟ್ಬಾಲ್, ವಿಂಬಲ್ಡನ್ ಟೆನಿಸ್ ಕೂಟವೂ ಸೂಪರ್ ಸ್ಪೆಡರ್ ಆಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಪ್ಪಿದ ಅನಾಹುತ: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಗುರುವಾರ ಲಸಿಕೆ ಪಡೆಯಲು ನೂಕು ನುಗ್ಗಲು ಉಂಟಾಗಿದೆ. ಸಣ್ಣ ಹಾಲ್‌ನಲ್ಲಿ ಲಸಿಕೆ ಪಡೆಯಲು ಜನರು ಮುಗಿ ಬಿದ್ದಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಅದರ ವಿಡಿಯೋ ವೈರಲ್ ಆಗಿದೆ.