ನ್ಯೂಯಾರ್ಕ್: ಬಯೋಟೆಕ್ ಕಂಪೆನಿ ಮೊಡೆರ್ನಾ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಜತೆಗೂಡಿ ಸಂಶೋಧಿಸುತ್ತಿರುವ ಕೋವಿಡ್-19 ಲಸಿಕೆಯನ್ನು ಕೆಲ ಸ್ವಯಂಸೇವಕರ ಮೇಲೆ ಪ್ರಯೋಗಿಸಿದ್ದು, ಆಶಾದಾಯಕ ಆರಂಭಿಕ ಫಲಿತಾಂಶಗಳು ಬಂದಿವೆ.
ಭವಿಷ್ಯದ ಅಧ್ಯಯನಗಳು ಸರಿಯಾಗಿ ಸಾಗಿದಲ್ಲಿ ಮುಂದಿನ ಜನವರಿ ವೇಳೆ ಲಸಿಕೆ ಲಭ್ಯವಾದೀತೆಂದು ಮೊಡೆರ್ನಾದ ಮುಖ್ಯ ವೈದ್ಯಾಧಿಕಾರಿ ಡಾ|ಟಾಲ್ ಝಾಕ್ಸ್ ಅವರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.
ಪ್ರಯೋಗಾಲಯ ಪರೀಕ್ಷೆ ಹಂತ ಒಂದರ ಬಳಿಕ ಈ ಆರಂಭಿಕ ಫಲಿತಾಂಶ ಬಂದಿದೆ. ಈ ಹಂತದಲ್ಲಿ ಕೆಲವೇ ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸಿ ಲಸಿಕೆ ಸುರಕ್ಷಿತವೇ ಮತ್ತು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆಯೇ ಎಂದು ನೋಡಲಾಗುತ್ತದೆ.
ಅಮೆರಿಕದ ಇನ್ನೆರಡು ಸಂಸ್ಥೆಗಳಾದ ಫೈಝರ್ ಮತ್ತು ಇನೊವಿಯೊ, ಬ್ರಿಟನ್‌ನ ಆಕ್ಸ್‌ಫರ್ಡ್ ಯೂನಿವರ್ಸಿಟಿ, ಅಲ್ಲದೆ ಚೀನದ ನಾಲ್ಕು ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿವೆ.ನಿರೋಧಕ ಪ್ರತಿಕಾಯಗಳು ವೈರಾಣುವನ್ನು ಪ್ರತಿಬಂಧಿಸಿ ಅದು ಮಾನವನ ಜೀವಕೋಶಗಳ ಮೇಲೆ ದಾಳಿ ಮಾಡದಂತೆ ತಡೆಯುತ್ತವೆ.
ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸುವಲ್ಲಿ ಇದೊಂದು ಅತ್ಯಂತ ಮಹತ್ವದ ಮೊದಲ ಹೆಜ್ಜೆ, ಸಂಸ್ಥೆಯ ಫಲಿತಾಂಶ ಅತ್ಯುತ್ತಮವಾದುದು ಎಂದು ಝಾಕ್ಸ್ ಹೇಳಿದ್ದಾರೆ.
ಇದೀಗ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಎರಡನೆ ಹಂತದ ಪ್ರಯೋಗಕ್ಕೆ ಅನುಮತಿ ನೀಡಿದೆ ಮತ್ತು ಇದರಲ್ಲಿ ಹಲವು ನೂರು ಜನರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಹಂತ ಮೂರರಲ್ಲಿ ವಿಶಾಲ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಮತ್ತು ಹತ್ತಾರು ಸಹಸ್ರ ಮಾನವರ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುತ್ತದೆ. ಮೊಡೆರ್ನಾ ಜುಲೈಯಲ್ಲಿ ಅದನ್ನು ಆರಂಭಿಸುವ ಯೋಜನೆ ಹೊಂದಿದೆ.
ಲಸಿಕೆ ಅಭಿವೃದ್ಧಿಪಡಿಸುವ ಸಂಸ್ಥೆಗಳು ಮೂರನೆ ಹಂತದ ಪರೀಕ್ಷೆಗೆ ಹೊರಡುವ ಮುನ್ನ ಸಾಮಾನ್ಯವಾಗಿ ಸಹಸ್ರಾರು ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸುತ್ತವೆ. ಆದರೆ ಮೊಡೆರ್ನಾ ಈವರೆಗೆ ಕೇವಲ ಬೆರಳೆಣಿಕೆಯ ಮಂದಿ ಮೇಲೆ ಲಸಿಕೆಯನ್ನು ಪ್ರಯೋಗಿಸಿರುವುದರಿಂದ ಮೂರನೆ ಹಂತದ ಪರೀಕ್ಷೆಗೆ ಮುಂದಾಗುವ ಮುನ್ನ ಅಷ್ಟೊಂದು ಮಂದಿಯ ಮೇಲೆ ಲಸಿಕೆಯನ್ನು ಪ್ರಯೋಗಿಸುವ ಸಾಧ್ಯತೆ ಇಲ್ಲ.