ಕಾರವಾರ : ಜಿಲ್ಲೆಯಲ್ಲಿ ಮೇ. 11 ರಿಂದ 3ನೇ ಹಂತದ ಕೋವಿಡ್-19 ಲಸಿಕಾ ಅಭಿಯಾನ ಪ್ರಾರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಅವರು ನೀಡಿರುವ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರಕಾರ ಮೇ.1 ರಿಂದ ಪ್ರಾಯೋಗಿಕವಾಗಿ ಕೆಲವು ಲಸಿಕಾ ಕೇಂದ್ರಗಳಲ್ಲಿ 18 ವರ್ಷ ತುಂಬಿದ 44 ವರ್ಷದೊಳಗಿನ ಸಾರ್ವಜನಿಕರಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿತ್ತು. ಅದರ ಮುಂದುವರಿದ ಭಾಗವಾಗಿ ಮೇ. 11 ರಿಂದ ಜಿಲ್ಲೆಯಲ್ಲಿಯೂ ಈ ಅಭಿಯಾನ ಪ್ರಾರಂಭವಾಗಲಿದೆ. 3ನೇ ಹಂತದ ಅಭಿಯಾನದ ಮೊದಲ ಹಂತದಲ್ಲಿ ಕ್ರಿಮ್ಸ್ ಸೇರಿದಂತೆ ಜಿಲ್ಲೆಯ 10 ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಲಸಿಕಾ ಕೇಂದ್ರ ತೆರೆದು ಪ್ರತಿದಿನ ಗರಿಷ್ಠ 150 ಫಲಾನುಭವಿಗಳಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲಸಿಕೆ ಪಡೆಯುವ 18 ರಿಂದ 44 ವರ್ಷದೊಳಗಿನ ಫಲಾನುಭವಿಗಳು ಶೇ. 100ರಷ್ಟು ಸ್ವಯಂಕೃತವಾಗಿ ಹೆಸರು ನೋಂದಣಿ ಮಾಡಿಕೊಳ್ಳುವುದು ಹಾಗೂ ಮುಂಗಡವಾಗಿ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಸರು ನೋಂದಾಯಿತ ಫಲಾನುಭವಿಗಳು ಲಸಿಕಾ ಕೇಂದ್ರಕ್ಕೆ ಬರುವಾಗ ಅಧಿಕೃತ ಗುರುತಿನ ಚೀಟಿ, ಮೊಬೈಲ್, ನೋಂದಾವಣಿ ಹಾಗೂ ಕಾಯ್ದಿರಿಸಿರುವ ಮಾಹಿತಿಯನ್ನ ಕಡ್ಡಾಯವಾಗಿ ತರಬೇಕು. ಲಸಿಕಾ ಕೇಂದ್ರಗಳಲ್ಲಿ ಯಾರಿಗೂ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶ ಇರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ :ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ICU ಬೆಡ್/ಆಕ್ಸಿಜನ್ ಘಟಕ ಸ್ಥಾಪನೆಗೆ ವಿಜಯ್ ಕಿರಗಂದೂರು ಒಲವು
ಬ್ಯಾಂಕಿಂಗ್, ಅರಣ್ಯ, ಹೆಸ್ಕಾಂ, ಶಿಕ್ಷಣ ಇಲಾಖೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಇನ್ನೂ ಹಲವಾರು ಇಲಾಖೆಗಳು ಈಗಾಗಲೇ ತಮ್ಮನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ನೀಡಲು ವಿನಂತಿಸಿದ್ದಾರೆ. 3ನೇ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡಲು ಪ್ರಾರಂಬಿಸುತ್ತಿದ್ದು, ಅವರುಗಳು ಕೂಡ ಇದರ ಪ್ರಯೋಜನ ಪಡೆಯಬಹುದಾಗಿದೆ. ಈಗಾಗಲೇ ನಡೆಸಿಕೊಂಡು ಬರುತ್ತಿರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನೀಡಲಾಗುತ್ತಿರುವ 2ನೇ ಡೋಸ್ ಲಸಿಕೆಯನ್ನು ನೀಡಲು ಆನ್‌ಲೈನ್ ಅಥವಾ ಸ್ಥಳದಲ್ಲೇ ನೋಂದಣಿ ಸೌಲಭ್ಯವಿದ್ದು, ಅದೇ ಆರೋಗ್ಯ ಸಂಸ್ಥೆಯ ಪ್ರತ್ಯೇಕ ಲಸಿಕಾ ಕೇಂದ್ರಗಳಲ್ಲಿ ಯಥಾ ಪ್ರಕಾರ ಮುಂದುವರೆಯುತ್ತದೆ. ಅರ್ಹ ಫಲಾನುಭವಿಗಳು ಆರೋಗ್ಯ ಸೇತು App ಹಾಗೂ
www.cowin.gov.in ಮೂಲಕ ಆನ್‌ಲೈನ್ ನೋಂದಣಿ ಮಾಡಬಹುದು ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದ 2021 ಜ. 1ರಿಂದ ವಿವಿಧ ಹಂತಗಳಲ್ಲಿ ಅರೋಗ್ಯ ಸಿಬ್ಬಂದಿ(HCWS), ಮುಂಚೂಣಿ ಕಾರ್ಯಕರ್ತರಾದ (FLWS) ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಪೊಲೀಸ್ (ಗೃಹ) ಇಲಾಖೆ, ರಾಜ್ಯ ರಸ್ತೆ ಸಾರಿಗೆ, ಅಂಚೆ ಇಲಾಖೆ ನೌಕರರು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವು ಚಾಲನೆಯಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ 14,313 ಆರೋಗ್ಯ ಸಿಬ್ಬಂದಿ, 6,446 ಮುಂಚೂಣಿ ಕಾರ್ಯಕರ್ತರಿಗೆ ಸೇರಿದಂತೆ 1,91,514 ನಾಗರಿಕರಿಗೆ(45 ವರ್ಷ ಮೇಲ್ಪಟ್ಟವರು) ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.