Advertisement

ಕರಾವಳಿಯ 16 ಕಡೆ ಕೋವಿಡ್ ಲಸಿಕಾ ತಾಲೀಮು

02:55 AM Jan 09, 2021 | Team Udayavani |

ಮಂಗಳೂರು/ಉಡುಪಿ, ಜ. 8: ಕೋವಿಡ್ ರೋಗಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಕೈಗೊಳ್ಳಲು ಕೊರೊನಾ ಲಸಿಕೆಯ ತಾಲೀಮು (ಡ್ರೈ ರನ್‌) ಶುಕ್ರವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 16 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು.

Advertisement

ನಗರದ ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ನಡೆದ ಲಸಿಕಾ ತಾಲೀಮು ಪರಿಶೀಲಿಸಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು, ಕೊರೊನಾ ರೋಗಕ್ಕೆ ಲಸಿಕೆ ಬಂದ ಬಳಿಕ ಗೊಂದಲ ನಿವಾರಣೆಗೆ ಲಸಿಕಾ ತಾಲೀಮು ಸಹಕಾರಿಯಾಗಲಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ನವರಿಗೆ ಲಸಿಕೆ ನೀಡಲಾಗುತ್ತದೆ. ಎರಡು ಮತ್ತು ಮೂರನೇ ಹಂತದ ಲಸಿಕೆ ಪ್ರಕ್ರಿಯೆ ಸವಾಲಿನ ಕೆಲಸ ಆಗಿದ್ದು, ಆ ವಿಚಾರದಲ್ಲಿ ಗಮನಹರಿಸಬೇಕಿದೆ ಎಂದರು.

ಪ್ರತೀ ಹಂತದಲ್ಲಿಯೂ ಕೋವಿಡ್ ಲಸಿಕೆ ನೀಡುವ ವೇಳೆ ರೋಗಿಯ ಮಧುಮೇಹ, ಸಕ್ಕರೆ ಖಾಯಿಲೆ ಸೇರಿ ದಂತೆ ಈಗಾಗಲೇ ಯಾವ ರೋಗ ಇದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಲಸಿಕೆ ನೀಡುವ ಸ್ಥಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಇರಲಿ. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾನೂನು, ಮಾರ್ಗ ಸೂಚಿ ಪಾಲನೆ ಮಾಡ ಬೇಕು. ಕೊರೊನಾ ನಿಯಮ ಪಾಲನೆ ಮಾಡದ ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಮಾತನಾಡಿ, ಕೋವಿಡ್ ಗೆ ಲಸಿಕೆ ಪೂರೈಕೆಗೂ ಮುನ್ನ ಪೂರ್ವ ಸಿದ್ಧತೆ ಕೈಗೊಳ್ಳಲು ಮತ್ತು ಯಾವುದೇ ಸಮಸ್ಯೆ ಎದುರಾದರೆ ಅದನ್ನು ಸರಿಪಡಿಸಲು ಡ್ರೈರನ್‌ ಸಹಕಾರಿಯಾಗಲಿದೆ ಎಂದರು.

ದ.ಕ. 8 ಕಡೆ ಲಸಿಕಾ ತಾಲೀಮು :

Advertisement

ಜಿಲ್ಲೆಯ ಎಂಟು ಕಡೆಗಳಲ್ಲಿ ಕೋವಿಡ್ ಲಸಿಕಾ ತಾಲೀಮು ನಡೆಯಿತು. ಮಂಗಳೂರಿನ ವೆನ್ಲಾಕ್‌ ಜಿಲ್ಲಾಸ್ಪತ್ರೆ, ಬಂಟ್ವಾಳ ತಾ. ಆಸ್ಪತ್ರೆ, ಕಡಬ ಸಮುದಾಯ ಆರೋಗ್ಯ ಕೇಂದ್ರ, ಯೇನಪೊಯ ಮೆಡಿಕಲ್‌ ಕಾಲೇಜು, ಸುರತ್ಕಲ್‌ ನಗರ ಪ್ರಾ. ಆ. ಕೇಂದ್ರ, ನಾರಾವಿ ಪ್ರಾ. ಆ. ಕೇಂದ್ರ, ಅಥೆನಾ ಆಸ್ಪತ್ರೆ ಮತ್ತು ಸುಳ್ಯ ಕೆವಿಜಿ ಮೆಡಿಕಲ್‌ ಕಾಲೇಜಿನಲ್ಲಿ ಈ ಪ್ರಕ್ರಿಯೆ ನಡೆಯಿತು.

ಉಡುಪಿ ಜಿಲ್ಲೆಯಲ್ಲೂ 8 ಕಡೆ :

ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಡಾ| ಟಿಎಂಎ ಪೈ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಅಜ್ಜರಕಾಡಿನ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ಸಿ), ಕಾರ್ಕಳ ತಾ. ಆಸ್ಪತ್ರೆ, ಹೆಬ್ರಿ ಮತ್ತು ಬ್ರಹ್ಮಾವರದ ಆ.ಕೇಂದ್ರ, ಕಂಡ್ಲೂರು ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ನಡೆಯಿತು.

ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯ 105 ಸರಕಾರಿ ಮತ್ತು 762 ಖಾಸಗಿ ಆರೋಗ್ಯ ಸಂಸ್ಥೆಗಳ, 5,688 ಸರಕಾರಿ ಮತ್ತು 13,874 ಖಾಸಗಿ ಆರೋಗ್ಯ ಸಿಬಂದಿ ಸೇರಿದಂತೆ ಒಟ್ಟು 19,562 ಫ‌ಲಾನುಭವಿಗಳನ್ನು ನೋಂದಣಿ ಮಾಡಿದ್ದು, ಇವರಿಗೆ ಲಸಿಕೆ ನೀಡಲು ಸಂಪೂರ್ಣ ಸಿದ್ದತೆಗಳನ್ನು  ಮಾಡಿಕೊಳ್ಳಲಾಗಿದೆ.     -ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next